7
ಹಗರಣ ಖಚಿತಪಡಿಸಿದ ಜಿಲ್ಲಾಡಳಿತ ನೇಮಿಸಿದ್ದ ಸಮಿತಿಗಳ ವರದಿ

ಬಗರ್‌ಹುಕುಂ ಮಂಜೂರಾತಿ ಅಕ್ರಮ ಬಹಿರಂಗ

Published:
Updated:
ಶಿವಮೊಗ್ಗ ಬಳಿ ಬಗರ್‌ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವುದು

ಶಿವಮೊಗ್ಗ: ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರು ಮಾಡಿದ್ದ ಜಮೀನಿನಲ್ಲಿ ಶೇ 70ರಷ್ಟು ಅಕ್ರಮ ನಡೆದಿರುವುದು ಜಿಲ್ಲಾಡಳಿತ ನೇಮಿಸಿದ್ದ ಆಂತರಿಕ ಸಮಿತಿಗಳ ತನಿಖೆಯಿಂದ ಬಹಿರಂಗವಾಗಿದೆ.

ಅನಧಿಕೃತವಾಗಿ ಸಾಗುವಳಿ ಮಾಡಿದ್ದ ಕಂದಾಯ ಜಮೀನಿನ ಒಡೆತನ ಕೋರಿ ಜಿಲ್ಲೆಯ 1,45,601 ರೈತರು ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94–ಬಿ ಅಡಿ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ಇದುವರೆಗೆ 18,383 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದ್ದು, 38,077.12 ಎಕರೆಗೆ ಸಾಗುವಳಿ ಹಕ್ಕು ನೀಡಲಾಗಿದೆ. ಅದರಲ್ಲಿ ಬಹುತೇಕ ಜಮೀನಿನ ಸಾಗುವಳಿ ಹಕ್ಕನ್ನು ನಿಯಮಬಾಹಿರವಾಗಿ ನೀಡಲಾಗಿದೆ.

ನಿಯಮಗಳನ್ನು ಗಾಳಿಗೆ ತೂರಿ ಬಗರ್‌ಹುಕುಂ ಮಂಜೂರಾತಿ ನೀಡಿರುವ ಕುರಿತು ಹಲವು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಪ್ರಾಥಮಿಕ ತನಿಖೆ ನಡೆಸಿ, ವರದಿ ನೀಡಲು ಜಿಲ್ಲಾಡಳಿತ 2018ರ ಮಾರ್ಚ್‌ನಲ್ಲಿ ನಾಲ್ಕು ಸಮಿತಿಗಳನ್ನು ರಚಿಸಿತ್ತು. ಎಲ್ಲ ತಾಲ್ಲೂಕು ಕಚೇರಿಗಳಿಗೂ ಭೇಟಿ ನೀಡಿ ದಾಖಲೆ ಪರಿಶೀಲಿಸಿದ ಸಮಿತಿಗಳು, ಇದೇ ವರ್ಷದ ಜೂನ್‌ 25ರಂದು ವರದಿ ನೀಡಿವೆ. ಜಮೀನು ಮಂಜೂರಾತಿಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಲಾಗಿದೆ.

ಪ್ರಾಥಮಿಕ ತನಿಖೆಯ ವರದಿ ಆಧಾರದ ಮೇಲೆ ನಾಲ್ವರು ತಹಶೀಲ್ದಾರ್‌ಗಳನ್ನು ಒಳಗೊಂಡಂತೆ 12 ಅಧಿಕಾರಿಗಳು, ಸಿಬ್ಬಂದಿಗೆ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದೆ.

ಅಕ್ರಮಗಳ ಸರಮಾಲೆ: ಅನಧಿಕೃತ ಸಾಗುವಳಿಗೆ ಭೂ ಮಂಜೂರಾತಿ ಹಕ್ಕು ನೀಡಬೇಕಾದರೆ ರೈತರು 1997ರ ನವೆಂಬರ್‌ನಿಂದ 1998ರ ಏಪ್ರಿಲ್‌ ಒಳಗೆ ಅರ್ಜಿ ಸಲ್ಲಿಸಿರಬೇಕು. ಸರ್ಕಾರಿ ಉದ್ಯೋಗದಲ್ಲಿ ಇರಬಾರದು. ಒಂದು ಕುಟುಂಬದಲ್ಲಿ ಬಗರ್‌ಹುಕುಂ ಅಡಿ ಭೂ ಮಂಜೂರಾತಿ ಪಡೆದಿದ್ದರೆ ಉಳಿದವರಿಗೆ ನೀಡುವಂತಿಲ್ಲ. ಒಬ್ಬ ರೈತರಿಗೆ ನೀಡಬಹುದಾದ ಗರಿಷ್ಠ ಮಿತಿ 4.38 ಎಕರೆ. ಸಾಗುವಳಿ ಮಾಡಿದ ಜಮೀನು ನಗರದ ವ್ಯಾಪ್ತಿಯಿಂದ 10 ಕಿ.ಮೀ. ಹಾಗೂ ಪಟ್ಟಣದ ವ್ಯಾಪ್ತಿಯಿಂದ 5 ಕಿ.ಮೀ. ಒಳಗೆ ಇರಬಾರದು. ಸರ್ಕಾರಿ ಉದ್ದೇಶಕ್ಕೆ ಮೀಸಲಿಟ್ಟ ಜಾಗ ಮಂಜೂರು ಮಾಡಬಾರದು ಎಂಬ ನಿಯಮಗಳಿವೆ.

ಇಂತಹ ಎಲ್ಲ ನಿಯಮಗಳನ್ನೂ ಮೀರಿ ಶಾಲೆ, ಕಾಲೇಜು, ಸರ್ಕಾರಿ ಕೆಲಸಗಳಿಗೆ ಮೀಸಲಿಟ್ಟ ಜಾಗ, ಕೆರೆ ಪ್ರದೇಶಗಳನ್ನೂ ಮಂಜೂರು ಮಾಡಲಾಗಿದೆ. ಒಂದೇ ಕುಟುಂಬದ ತಂದೆ, ಮಗ, ಪತಿ, ಪತ್ನಿ, ಸಹೋದರರಿಗೂ ಜಮೀನು ನೀಡಲಾಗಿದೆ. ಈಗಾಗಲೇ ಶಾಲೆ ಇರುವ ಜಾಗವನ್ನೂ ಅಡಿಕೆ ಬೆಳೆ ಇದೆ ಎಂದು ನಮೂದಿಸಿ, ಸ್ವಾಧೀನದ ಹಕ್ಕು ನೀಡಲಾಗಿದೆ.

ಸರ್ಕಾರಿ ನೌಕರರಿಗೂ ಸಾಗುವಳಿ ಭಾಗ್ಯ ಕಲ್ಪಿಸಲಾಗಿದೆ. ಗೋಮಾಳ ಜಮೀನುಗಳ ಮಂಜೂರಾತಿಯಲ್ಲೂ ನಿಯಮ ಪಾಲಿಸಿಲ್ಲ. ಕೆಲವು ಭಾಗಗಳಲ್ಲಿ ಜಂಟಿ ಸರ್ವೆ ನಡೆಸಿದ ನಂತರ ಅದು ಅರಣ್ಯ ಭೂಮಿ ಎಂದು ಸಾಬೀತಾಗಿದ್ದರೂ, ದಾಖಲೆಗಳನ್ನು ತಿದ್ದಿ ಅನುಮೋದನೆ ನೀಡಲಾಗಿದೆ.

ಪಟ್ಟಣಗಳ ಸಮೀಪದಲ್ಲೇ ಇರುವ ಸಂತೆ ಮೈದಾನ, ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನೂ ಬಿಟ್ಟಿಲ್ಲ. ಭದ್ರಾವತಿ ತಾಲ್ಲೂಕಿನ ಒಂದು ಪ್ರಕರಣದಲ್ಲಿ 20 ಎಕರೆ ಭೂಮಿಯ ಒಡೆತನ ಹೊಂದಿರುವ ಶ್ರೀಮಂತ ರೈತರೊಬ್ಬರಿಗೆ ಬಗರ್‌ಹುಕುಂ ಜಮೀನು ಮಂಜೂರು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮಂಜೂರಾತಿ ಪಡೆದ ವ್ಯಕ್ತಿಯ ವಯಸ್ಸು 18 ದಾಟಿಲ್ಲ!

ಈ ಎಲ್ಲ ಅವ್ಯವಹಾರಗಳಲ್ಲಿ ಅಕ್ರಮ–ಸಕ್ರಮ ಸಮಿತಿ, ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ, ಸರ್ವೆಯರ್‌ಗಳು ಭಾಗಿಯಾಗಿದ್ದಾರೆ. ಭದ್ರಾವತಿ, ಶಿವಮೊಗ್ಗ, ಸೊರಬ ಹಾಗೂ ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಹೆಚ್ಚಿನ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

ಯೋಗ್ಯ ಅರ್ಜಿಗಳ ತಿರಸ್ಕಾರ: ನಿಯಮಕ್ಕೆ ಪೂರಕವಾಗಿ ಇದ್ದರೂ ಅರ್ಹ ರೈತರ ಸಾವಿರಾರು ಅರ್ಜಿಗಳನ್ನು ತಿರಿಸ್ಕರಿಸಲಾಗಿದೆ. ತಿರಸ್ಕರಿಸಿದ ಅರ್ಜಿಗಳ ಸಂಖ್ಯೆ ಬರೋಬ್ಬರಿ 1.25 ಲಕ್ಷ! 1,341 ಅರ್ಜಿಗಳ ಪರಿಶೀಲನಾ ಕಾರ್ಯ ಇನ್ನೂ ಪ್ರಗತಿಯಲ್ಲಿ ಇದ್ದು, 5,424 ಎಕರೆ ಭೂಮಿಗೆ ಮಂಜೂರಾತಿ ದೊರಕಿಸಬೇಕಿದೆ.

ಎರಡು ದಶಕಗಳ ಇತಿಹಾಸ: 1997–98ರಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಅನಧಿಕೃತವಾಗಿ ಸಾಗುವಳಿ ಮಾಡಿದ್ದ ರೈತರಿಗೆ ಭೂ ಹಕ್ಕು ನೀಡಲು ಎರಡನೇ ಬಾರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅರ್ಜಿಗಳ ಇತ್ಯರ್ಥಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಆಯಾ ಶಾಸಕರ ನೇತೃತ್ವದಲ್ಲಿ ಬಗರ್‌ಹುಕುಂ ಅಕ್ರಮ–ಸಕ್ರಮ ಸಮಿತಿ ರಚಿಸಲಾಗಿತ್ತು. ಆದರೆ, ಸಮಿತಿಗಳು ನಿರೀಕ್ಷಿತ ಮಟ್ಟದಲ್ಲಿ ರೈತರಿಗೆ ಸಾಗುವಳಿ ಹಕ್ಕು ನೀಡಿರಲಿಲ್ಲ. ಬಹುತೇಕ ಅರ್ಜಿಗಳು ತಿರಸ್ಕೃತವಾಗಿದ್ದವು. ನಂತರದ ದಿನಗಳಲ್ಲಿ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು.

ಬಗರ್‌ಹುಕುಂ ಎನ್ನುವುದು ಎರಡು ದಶಕ ಜಿಲ್ಲೆಯ ಹಲವು ರಾಜಕಾರಣಿಗಳ ಹೋರಾಟದ ವಿಷಯವಾಗಿತ್ತು. ಹಲವರು ಸೋಲು ಕಾಣಲು, ಹಲವರು ಶಾಸಕರಾಗಿ ಆಯ್ಕೆಯಾಗಲು ಈ ವಿಷಯವೇ ನಿರ್ಣಾಯಕ ಪಾತ್ರ ವಹಿಸಿತ್ತು. 2013ರ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, 2015ರ ನಂತರ ಏಳೂ ತಾಲ್ಲೂಕುಗಳಲ್ಲಿ ಬಗರ್‌ಹುಕುಂ ಸಮಿತಿಗಳನ್ನು ಪುನರ್‌ರಚಿಸಿತ್ತು. ಆ ಮೂಲಕ ಹಳೆಯ ಎಲ್ಲ ಅರ್ಜಿಗಳ ಇತ್ಯರ್ಥಕ್ಕೆ ಮತ್ತೆ ಅವಕಾಶ ಕಲ್ಪಿಸಿತ್ತು. ಜಿಲ್ಲೆಯವರೇ ಆದ ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾದ ನಂತರ ಸಕ್ರಮ ಪ್ರಕ್ರಿಯೆಗೆ ವೇಗದ ಚಾಲನೆ ದೊರಕಿತ್ತು.

 ಅಕ್ರಮ–ಸಕ್ರಮ ಸಮಿತಿಗಳ ವಿರುದ್ಧ ಹಲವು ದೂರು ಬಂದಿದ್ದವು. ತಕ್ಷಣ ತಂಡ ರಚಿಸಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಸಾಕಷ್ಟು ಅಕ್ರಮ ನಡೆದಿರುವುದು ಪತ್ತೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳು, ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಶೀಘ್ರ ಕ್ರಮ ಕೈಗೊಳ್ಳುತ್ತೇವೆ.
ಕೆ. ಚನ್ನಬಸಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ

ಜಮೀನು ಮಂಜೂರಾತಿ ವಿವರ    
ತಾಲ್ಲೂಕು ರೈತರು ನೀಡಿದ ಭೂಮಿ (ಎಕರೆಗಳಲ್ಲಿ)
ಶಿವಮೊಗ್ಗ 1023 1636.00
ಭದ್ರಾವತಿ 1375 1206.11
ತೀರ್ಥಹಳ್ಳಿ 2663 4013.36
ಸಾಗರ 5436 14406.25
ಸೊರಬ 4904 10924.38
ಶಿಕಾರಿಪುರ 1219 2729.22
ಹೊಸನಗರ 1763 3160.00
ಒಟ್ಟು 18383 38077.12

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !