ಮಂಗಳವಾರ, ಮೇ 26, 2020
27 °C
ರೈತರು, ವರ್ತಕರ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಭರಸವೆ

ಕೃಷಿ ಪೂರಕ ವಾಣಿಜ್ಯ ಮಳಿಗೆ ತೆರೆಯಲು ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೃಷಿ ಪೂರಕ ವಾಣಿಜ್ಯ ಮಳಿಗೆಗಳು ತೆರೆಯಲು ಅವಕಾಶ ನೀಡಲಾಗುವುದು. ಇಲ್ಲಿನ ರೈತರು ಬೆಳೆದ ಹಣ್ಣುಗಳನ್ನು ಹೊರ ರಾಜ್ಯಗಳಿಗೆ ಸಾಗಿಸಲು ಅನುಮತಿ ಪಡೆಯುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರೈತರು, ಜನ ಪ್ರತಿನಿಧಿಗಳು, ವರ್ತಕರ ಜತೆ ನಡೆದ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ನಿರ್ಬಂಧಗಳು ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಖರೀದಿದಾರರು ಇಲ್ಲದೇ ನಾಶವಾಗುತ್ತಿರುವ ಹಣ್ಣಿನ ಬೆಳೆಗಳಿಗೆ ಮಾರುಕಟ್ಟೆ ದೊರಕಿಸಬೇಕು. ಶುಂಠಿ ಬೆಳೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 20 ಸಾವಿರ ಟನ್‌ ಫೈನಾಪಲ್ ಬೆಳೆ ನಾಶವಾಗುತ್ತಿದೆ. ಉತ್ತರ ಭಾರತದಲ್ಲಿ ಅನಾನಸ್ ಕಾರ್ಖಾನೆಗಳು ಮುಚ್ಚಿದ ಪರಿಣಾಮ ಅನಾನಸ್ ಮಾರಾಟಕ್ಕೆ ತೊಂದರೆಯಾಗಿದೆ‌. ದೆಹಲಿ, ರಾಜಸ್ಥಾನ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಅನಾನಸ್ ಕಾರ್ಖಾನೆಗಳು ತೆರೆದರೆ ಅನುಕೂಲವಾಗುತ್ತದೆ. ಕಲ್ಲಂಗಡಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೊರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆಯಾದರೆ ಅನುಕೂಲವಾಗುತ್ತದೆ ಎಂದು ರೈತರು ಮನವಿ ಮಾಡಿದ್ದಾರೆ. ಎಲ್ಲ ಅಂಶಗಳನ್ನೂ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿಗೆ ಪೂರಕವಾದ ಪಂಪ್‌ಸೆಟ್, ಪೈಪ್‌, ಎಲೆಕ್ಟ್ರಿಕಲ್ ಅಂಗಡಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು. ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲಾ ಚಟುವವಟಿಕೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು. ರೈತರೂ ಸೇರಿದಂತೆ ಎಲ್ಲರೂ ನಿಯಮ ಪಾಲಿಸಬೇಕು ಎಂದು ಸೂಚಿಸಿದರು. 

ಟ್ರ್ಯಾಕ್ಟರ್, ಕೃಷಿ ಯಂತ್ರಗಳ ದುರಸ್ತಿ, ಪಂಪ್‌ಸೆಟ್‌ ದುರಸ್ತಿಗೆ ಅಗತ್ಯವಾದ ಮೆಕಾನಿಕ್ ಶಾಪ್‌ಗಳನ್ನು ತೆರೆಯಲು ಸೂಚಿಸಲಾಗಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿ ಮಾರುಕಟ್ಟೆಗಳನ್ನು ಮುಕ್ತವಾಗಿಸಲು ಸೂಚಿಸಲಾಗಿದೆ. ಮುಂಗಾರು ಬಿತ್ತನೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರದ ಸಂಗ್ರಹಿಸಲಾಗಿದೆ ಎಂದು ವಿವರ ನೀಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಚ್.ಹಾಲಪ್ಪ, ಅರಗ ಜ್ಞಾನೇಂದ್ರ, ‌ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು