ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಭ್ರೂಣ ಹತ್ಯೆ ನಾಚಿಕೆಗೇಡು: ಪ್ರಧಾನಿ ನರೇಂದ್ರ ಮೋದಿ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಝುಂಝುನು(ರಾಜಸ್ಥಾನ): ‘ಹೆಣ್ಣು ಭ್ರೂಣ ಹತ್ಯೆಯು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದ್ದು, ಹೆಣ್ಣು ಮಕ್ಕಳ ರಕ್ಷಣೆಗೆ ಅತ್ತೆಯಂದಿರು ಮುಂದಾಳತ್ವ ವಹಿಸಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನವಾದ ಗುರುವಾರ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್‌ಗೆ (ಎನ್ಎನ್‌ಎಂ) ಚಾಲನೆ ಮತ್ತು ದೇಶದಾದ್ಯಂತ ‘ಬೇಟಿ ಬಚಾವೊ, ಬೇಟಿ ಪಢಾವೊ’ (ಹೆಣ್ಣು ಮಗು ಉಳಿಸಿ, ಹೆಣ್ಣು ಮಗು ಓದಿಸಿ) ಕಾರ್ಯಕ್ರಮದ ವಿಸ್ತರಣೆಯ ಘೋಷಣೆ ಮಾಡಿ, ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಸಮಾನರು. ಹುಡುಗರಂತೆಯೇ ಹುಡುಗಿಯರೂ ಗುಣಮಟ್ಟದ ಶಿಕ್ಷಣಕ್ಕೆ ಅರ್ಹರು. ಹೆಣ್ಣುಮಕ್ಕಳು ಹೊರೆಯಲ್ಲ. ಆಕೆ ಪ್ರತಿ ಮನೆಯ ಹೆಮ್ಮೆ. ಸುತ್ತಲೂ ಒಮ್ಮೆ ನೋಡಿ. ಹೆಣ್ಣು ಮಕ್ಕಳು ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡುತ್ತಿದ್ದಾರೆ’ ಎಂದು ಮೋದಿ ಶ್ಲಾಘಿಸಿದರು.

‘ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಆಕೆಗೂ ಸಮಾನತೆ ಕಲ್ಪಿಸುವ ವಾತಾವರಣ ನಿರ್ಮಿಸಿ, ಲಿಂಗ ಆಧಾರಿತ ತಾರತಮ್ಯ ಕೊನೆಗಾಣಿ
ಸಲು ಪ್ರತಿಯೊಬ್ಬರೂ ಪಣ ತೊಡಬೇಕು’ ಎಂದು ಮೋದಿ ತಿಳಿಸಿದರು.

‘ಮಕ್ಕಳಿಗೆ ಅಗತ್ಯ ಪೌಷ್ಟಿಕಾಂಶ ದೊರಕಬೇಕು. ರೋಗ ನಿರೋಧಕ ಲಸಿಕೆ ಹಾಕುವ ‘ಇಂದ್ರಧನುಷ್’ ಅಭಿಯಾನದಿಂದ ಮಕ್ಕಳು ಮತ್ತು ಮಹಿಳೆಯರಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡು ಬಂದಿವೆ’ ಎಂದರು.

‘ಮಹಿಳೆಯರ ಬದುಕು ಪರಿವರ್ತಿಸಬೇಕಿದೆ. ನವಭಾರತ ನಿರ್ಮಾಣಕ್ಕೆ ಸ್ತ್ರೀಯರ ಶಕ್ತಿಯನ್ನು ಬಳಸಿಕೊಳ್ಳಬೇಕಿದೆ. 18ನೇ ಶತಮಾನದ ಮನಸ್ಥಿತಿ ಇಟ್ಟುಕೊಂಡು, 21ನೇ ಶತಮಾನದ ಪ್ರಜೆಗಳು ಎಂದು ಹೇಳಿಕೊಳ್ಳಲಾಗದು’ ಎಂದು ಅವರು ಹೇಳಿದ್ದಾರೆ.

‘ಗಂಡುಮಗು ಮತ್ತು ಹೆಣ್ಣು ಮಗು ನಡುವಿನ ತಾರತಮ್ಯ ಕೊನೆಗಾಣಿಸಬೇಕು. ಇದು ಎಲ್ಲರ ಜವಾಬ್ದಾರಿ. ಇದು ಹೀಗೆಯೇ ಮುಂದುವರಿದರೆ ಭವಿಷ್ಯದ ಪೀಳಿಗೆಗೆ ಅತ್ಯಂತ ಕಷ್ಟವಾಗಲಿದೆ. ಹೆಣ್ಣು ಭ್ರೂಣ ಹತ್ಯೆ ಮತ್ತು ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಬಜೆಟ್‌ನಲ್ಲಿ ಮೀಸಲಿರಿಸಿದ ಹಣ ಸಾಲುವುದಿಲ್ಲ. ಸೂಕ್ತ ಶಿಕ್ಷಣ ಮತ್ತು ಸಮೂಹ ಚಳವಳಿಯಿಂದ ಮಾತ್ರ ಬದಲಾವಣೆ ಸಾಧ್ಯ’ ಎಂದರು.

‘ಸರ್ಕಾರದ ಪ್ರಯತ್ನದಿಂದಾಗಿ ಬಾಲ್ಯ ವಿವಾಹ ಪ್ರಮಾಣ ಶೇಕಡ 47ರಿಂದ 27ಕ್ಕೆ ಇಳಿದಿದೆ. ಪೊಲೀಸ್‌ ನೇಮಕಾತಿ ಯಲ್ಲಿ ಶೇ 33ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲು ಇಡುವಂತೆ ಎಲ್ಲ ರಾಜ್ಯಗಳಿಗೂ ಪತ್ರ ಬರೆಯಲಾಗಿದೆ’ ಎಂದು ಮೋದಿ ತಿಳಿಸಿದರು.

ಯೋಜನೆ ವಿಸ್ತರಣೆ
‘ಹೆಣ್ಣು ಮಗು ಉಳಿಸಿ, ಹೆಣ್ಣು ಮಗು ಓದಿಸಿ’ ಯೋಜನೆಯನ್ನು ಮೊದಲಿನ 161 ಜಿಲ್ಲೆಗಳಿಂದ ದೇಶದ 640 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಮಕ್ಕಳ ಲಿಂಗಾನುಪಾತ ವೃದ್ಧಿಸಲು ಕ್ರಮಕೈಗೊಂಡಿರುವು ದಕ್ಕೆ ರಾಜಸ್ಥಾನ, ಕರ್ನಾಟಕ, ಪಂಜಾಬ್, ಛತ್ತೀಸಗಡ, ಸಿಕ್ಕಿಂ, ಗುಜರಾತ್, ಆಂಧ್ರಪ್ರದೇಶ, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT