ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ₹ 800 ಕೋಟಿ ಹಾನಿ

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮಾಹಿತಿ
Last Updated 23 ಆಗಸ್ಟ್ 2019, 15:24 IST
ಅಕ್ಷರ ಗಾತ್ರ

ಬೆಳಗಾವಿ: ‘ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ₹ 800 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ’ ಎಂದು ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ತಿಳಿಸಿದರು.

ಇಲ್ಲಿನ ನಗರಪಾಲಿಕೆಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘166 ಕಿ.ಮೀ. ರಸ್ತೆ, 40 ಕಿ.ಮೀ. ನಾಲೆ, 112 ಕಿ.ಮೀ. ಚರಂಡಿ ಮಾರ್ಗ, 428 ಬೀದಿದೀಪಗಳು, ಕುಡಿಯುವ ನೀರು ಪೂರೈಕೆ ಮಾರ್ಗಗಳಿಗೆ ಹಾನಿಯಾಗಿದೆ. ನಗರಪಾಲಿಕೆ ವ್ಯಾಪ್ತಿಯೊಂದರಲ್ಲೇ ₹ 400 ಕೋಟಿಗೂ ಹೆಚ್ಚಿನ ಹಾನಿಯಾಗಿದೆ. ಇದಲ್ಲದೇ, ಈ ಕ್ಷೇತ್ರಗಳಲ್ಲಿ 2,900ಕ್ಕೂ ಹೆಚ್ಚಿನ ಮನೆಗಳು ಬಿದ್ದಿವೆ. 7,500 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದೇವೆ’ ಎಂದು ಅಭಯ ತಿಳಿಸಿದರು.

‘ಮನೆಗಳು ಹಾಗೂ ಮಗ್ಗಗಳನ್ನು ಕಳೆದುಕೊಂಡಿರುವ ನಗರದ ನೇಕಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ನಗರದಲ್ಲಿ ಚರಂಡಿ ಹಾಗೂ ನಾಲೆಗಳ ಒತ್ತುವರಿಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಹೀಗಾಗಿ, ಒತ್ತುವರಿ ತೆರವು ಮಾಡಬೇಕು. ಯಾವುದೇ ಪ್ರಭಾವಕ್ಕೂ ಮಣಿಯಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ನರೆಬಾಧಿತರಿಗೆ ಪರಿಹಾರ ವಿತರಿಸುವಂತೆಯೂ ನಿರ್ದೇಶನ ನೀಡಿದ್ದೇವೆ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸ್ಮಾರ್ಟ್‌ ಸಿಟಿ ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘₹ 28 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ 4 ಬಾರಿ ಟೆಂಡರ್ ಕರೆದರೂ ಯಾರೊಬ್ಬರೂ ಭಾಗವಹಿಸದಿರುವ ವಿಷಯವನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲಿಲ್ಲವೇಕೆ’ ಎಂದು ಬಿಸಿ ಮುಟ್ಟಿಸಿದರು. ‘ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವುದಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಾರ್ಟ್‌ ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶಿರೀನ್ ನದಾಫ್, ತಹಶೀಲ್ದಾರ್‌ ಮಂಜುಳಾ ನಾಯಕ, ನಗರಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT