ರಾಜ್ಯೋತ್ಸವ: ಸಿಎಂ ಆಹ್ವಾನಿಸಲು ನಿರ್ಧಾರ

7
ಡಿಸಿ ಕಚೇರಿಯಲ್ಲಿ ಸಭೆ; ಅದ್ಧೂರಿಯಾಗಿ ಆಯೋಜಿಸಲು ತೀರ್ಮಾನ

ರಾಜ್ಯೋತ್ಸವ: ಸಿಎಂ ಆಹ್ವಾನಿಸಲು ನಿರ್ಧಾರ

Published:
Updated:

ಬೆಳಗಾವಿ: ನಗರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲು ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಲು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕನ್ನಡಪರ ಸಂಘಟನೆಗಳ ‍‍‍ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಲಹೆಯಂತೆ ನ. 1ರಂದು ಸಿಪಿಇಡಿ ಮೈದಾನದಲ್ಲಿ ಉತ್ಸವ ಆಯೋಜಿಸಲು ತೀರ್ಮಾನಿಸಲಾಯಿತು.

‘ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ಭಾವಾವೇಶದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಖಂಡರು ಎಚ್ಚರಿಕೆ ವಹಿಸಬೇಕು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕನ್ನಡಪರ ಹೋರಾಟಗಾರರಿಗೆ ಸನ್ಮಾನ:

‘ಈ ಬಾರಿ ಐವರು ಕನ್ನಡಪರ ಹೋರಾಟಗಾರರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಗುವುದು. ಹೋರಾಟಗಾರರನ್ನು ಗುರುತಿಸಲು ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗುವುದು’ ಎಂದರು.

‘ಮೆರವಣಿಗೆಯಲ್ಲಿ ಭಾಗವಹಿಸುವ ಸರ್ಕಾರಿ ಇಲಾಖೆಗಳ ಹಾಗೂ ಸಂಘಟನೆಗಳ ರೂಪಕಗಳಿಗೆ ಬಹುಮಾನ ನೀಡಲಾಗುವುದು. ಇದಕ್ಕಾಗಿ ಅ.20ರ ಒಳಗೆ ಸಮಿತಿಗಳಿಗೆ ಅರ್ಜಿ ಸಲ್ಲಿಸಬೇಕು. ರಾಜ್ಯದಲ್ಲಿಯೇ ವಿಶಿಷ್ಟ ಹಾಗೂ ವಿಜೃಂಭಣೆಯಿಂದ ನಡೆಯುವ ರಾಜ್ಯೋತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಆಹ್ವಾನಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಕನ್ನಡ ನಾಮಫಲಕ– ಕ್ರಮ:

‘ಎಲ್ಲ ಅಂಗಡಿ-ಮುಂಗಟ್ಟುಗಳ ನಾಮಫಲಕಗಳನ್ನು ನಿಯಮಾವಳಿ ಪ್ರಕಾರ ಕನ್ನಡದಲ್ಲಿ ಬರೆಸುವುದಕ್ಕೆ ಸಂಬಂಧಿಸಿದಂತೆ ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು’ ಎಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ಹೇಳಿದರು.

ಡಿಸಿಪಿ ಸೀಮಾ ಲಾಟ್ಕರ್ ಮಾತನಾಡಿ, ‘ಮೆರವಣಿಗೆಗೆ ಸಮಯದ ನಿರ್ಬಂಧ ವಿಧಿಸುವುದಿಲ್ಲ; ಆದರೆ ಬೇಗ ಮುಗಿಸುವುದು ಒಳ್ಳೆಯದು’ ಎಂದು ತಿಳಿಸಿದರು.

ಹೋಳಿಗೆ ಊಟ:

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ‘ಸರ್ಕಾರದಿಂದ ಪ್ರತಿ ವರ್ಷ ₹ 2 ಕೋಟಿ ಅನುದಾನ ಒದಗಿಸಬೇಕು. ಈ ಕುರಿತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು’ ಎಂದು ಕೋರಿದರು.

ಕನ್ನಡ ಹೋರಾಟಗಾರ ಮೆಹಬೂಬ್ ಮಕಾನದಾರ, ‘ಪ್ರಮುಖ ಸ್ಥಳವಾದ ರಾಣಿ ಚನ್ನಮ್ಮ ವೃತ್ತವನ್ನು ನವೀಕರಿಸಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಜಾಗೃತಿ ಸಮಿತಿ ಸದಸ್ಯ ಅನಂತಕುಮಾರ್ ಬ್ಯಾಕೂಡ ಮಾತನಾಡಿ, ‘ಹುಕ್ಕೇರಿ ಶ್ರೀಗಳ ಜತೆ ಚರ್ಚಿಸಿ ಈ ಬಾರಿಯೂ ಹೋಳಿಗೆ ಊಟದ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕೋರಿದರು.

‘ಚನ್ನಮ್ಮ ವೃತ್ತದಿಂದ ಆರ್‌ಟಿಒ ವೃತ್ತದವರೆಗಿನ ರಸ್ತೆಗೆ ಸಂಗೊಳ್ಳಿರಾಯಣ್ಣ ಹೆಸರಿಡಲಾಗಿದೆ. ಆದರೆ, ಕೋರ್ಟ್‌ ರಸ್ತೆ ಎಂದು ಫಲಕ ಹಾಕಲಾಗಿದೆ. ಈ ಮೂಲಕ ರಾಯಣ್ಣಗೆ ಅವಮಾನ ಮಾಡಲಾಗಿದೆ’ ಎಂದು ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಆಕ್ರೋಶ ವ್ಯಕ್ತಪಡಿಸಿದರು. ‘ಕೂಡಲೇ ಫಲಕ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಹೋರಾಟಗಾರರಾದ ಸಿದ್ದನಗೌಡ ಪಾಟೀಲ, ಕಸ್ತೂರಿ ಬಾವಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !