ಬೆಳಗಾವಿ: ‘ಜಾತಿ ವ್ಯವಸ್ಥೆಯು ಸಮಾಜದ ಅಭಿವೃದ್ಧಿಗೆ ಮಾರಕವಾಗಿದೆ. ಇದರಿಂದ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಬರುತ್ತಿದೆ’ ಎಂದು ಡಾ. ಮನು ಬಳಿಗಾರ ವಿಷಾದಿಸಿದರು.
ಜಲತ್ಕುಮಾರ ಪುಣಜಗೌಡ ಅಮೃತ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಶಿವಬಸವ ನಗರದ ಧರ್ಮನಾಥ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ‘ಜಲಲಿತ’ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಜಾತಿ ವ್ಯವಸ್ಥೆಯು ಶಾಂತಿ, ಸೌಹಾರ್ದತೆಯನ್ನು ಕದಡುತ್ತಿದೆ. ಪರಸ್ಪರರಲ್ಲಿ ದ್ವೇಷ, ಅಸೂಯೆ, ಮಾತ್ಸರ್ಯದ ಗುಣಗಳನ್ನು ಬೆಳೆಸುತ್ತಿದೆ. ಸಮಾಜದ ಅಭಿವೃದ್ಧಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಜಾತಿ ವ್ಯವಸ್ಥೆ ಎಂಬ ಸಂಕುಚಿತ ಗೂಡಿನಿಂದ ಹೊರಬರಬೇಕು. ಜಾತ್ಯತೀತ ಮನೋಭಾವವನ್ನು ಮೈಗೂಡಿಸಿಕೊಂಡು ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
‘ಆದಿಕವಿ ಪಂಪ 1 ಶತಮಾನದ ಹಿಂದೆಯೇ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಸಂದೇಶ ಸಾರಿದ್ದಾರೆ. ಪುಣಜಗೌಡರು ಅವರ ಸಂದೇಶವನ್ನು ನಾಡಿನುದ್ದಗಲಕ್ಕೂ ಪಸರಿಸುತ್ತಿದ್ದಾರೆ. ಬರವಣಿಗೆ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಗುರುತಿಸಿ, ಗೌರವಿಸುತ್ತಿರುವುದು ಅಭಿನಂದನೀಯ’ ಎಂದು ಶ್ಲಾಘಿಸಿದರು.
‘ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣದ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವದೇ ದುಸ್ತರವಾಗಿದೆ. ಹೀಗಾಗಿ ಶಿಕ್ಷಣದ ಖಾಸಗೀಕರಣ ನಿಲ್ಲಬೇಕು. ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣ ಅಳವಡಿಕೆಯಾಗಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೇ ದುಡಿಯುವ ಕೃಷಿಕರು, ಸೈನಿಕರು, ಶಿಕ್ಷಕರು ಮತ್ತು ನ್ಯಾಯಾಧೀಶರಿಗೆ ಹೆಚ್ಚಿನ ಸಂಬಳ ಸಿಗುವಂತಾಗಬೇಕು’ ಎಂದು ತಿಳಿಸಿದರು.
ಪ್ರೊ. ಆರ್.ವಿ. ಹೊರಡಿ ಮಾತನಾಡಿ, ‘ಇಂದಿನ ದಿನಗಳಲ್ಲಿ ಕೆಲವು ಸಾಹಿತಿಗಳು ಪ್ರಶಸ್ತಿಗಳಿಗಾಗಿ ಲಾಬಿ ಮಾಡುತ್ತಿದ್ದು, ಇದರಿಂದ ಪ್ರಶಸ್ತಿಗಳ ಮೌಲ್ಯ ಕಡಿಮೆಯಾಗುತ್ತಿದೆ. ಇದರಿಂದಾಗಿ ಸಾಹಿತ್ಯ ವಲಯದಲ್ಲಿ ನಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಪ್ರಶಸ್ತಿ ವಿತರಿಸುವಾಗ ಸಂಘಟಕರು ಅವರ ಸಾಧನೆಯ ಕುರಿತು ಸಮಗ್ರವಾಗಿ ಅಧ್ಯಯನ ಮಾಡಬೇಕು. ಅರ್ಹರಿಗೆ ಪ್ರಶಸ್ತಿ, ಸನ್ಮಾನಗಳು ಲಭಿಸುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ಸಜ್ಜನರ ಸಂಖ್ಯೆಯು ಕ್ಷೀಣಿಸುತ್ತಿದೆ. ಜನರು ಆಧುನಿಕ ಜೀವನಶೈಲಿಯಿಂದ ವಿಮುಖರಾಗಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆಗ ಸಮಾಜ ಅಭಿವೃದ್ಧಿಪಥದತ್ತ ಮುನ್ನುಗ್ಗಲು ಸಾಧ್ಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪಂಚಾಕ್ಷರಿ ಹಿರೇಮಠ, ‘ಜಲತ್ಕುಮಾರ ಪುಣಜಗೌಡ ಅವರು ಶಿಕ್ಷಕರಾಗಿ 37 ವರ್ಷಗಳ ಕಾಲ ಆದರ್ಶಮಯವಾಗಿ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅವರ ಸೃಜನಾತ್ಮಕ ಬರವಣಿಗೆ ಮತ್ತು ಚಿಂತನಶೈಲಿಯಿಂದ ಅತ್ಯುತ್ತಮ ಕೃತಿಗಳು ಮೂಡಿಬಂದಿವೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಪುಣಜಗೌಡರ ಕೊಡುಗೆ ಅನನ್ಯ, ಅವಿಸ್ಮರಣೀಯ’ ಎಂದು ಬಣ್ಣಿಸಿದರು.
ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಿದರು. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಲತ್ಕುಮಾರ ಪುಣಜಗೌಡ ಅಮೃತ ಮಹೋತ್ಸವ ಸಮಿತಿ ವತಿಯಿಂದ ಜಲತ್ಕುಮಾರ ಪುಣಜಗೌಡ ದಂಪತಿಯನ್ನು ಅಭಿನಂದಿಸಲಾಯಿತು.
ಸಮಿತಿ ಅಧ್ಯಕ್ಷ ಸ.ರಾ. ಸುಳಕೂಡೆ, ಉಪಾಧ್ಯಕ್ಷ ಕೆ.ಡಿ. ಚೌಗುಲೆ, ಸೀತಾರಾಮ ಜಹಗೀರದಾರ, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸುಣಗಾರ ಉಪಸ್ಥಿತರಿದ್ದರು. ಮೋಹನಗೌಡ ಪಾಟೀಲ ಸ್ವಾಗತಿಸಿದರು. ಪ್ರೊ. ಸಿ.ಜಿ. ಮಠಪತಿ ನಿರೂಪಿಸಿದರು. ಉಜ್ವಲಾ ಮುಕರೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.