ಶುಕ್ರವಾರ, ಫೆಬ್ರವರಿ 28, 2020
19 °C

ಯುಪಿಎಸ್‌ಸಿ ಪರೀಕ್ಷೆ ಕ್ವಿಜ್‌ ಕಾಂಪಿಟೇಷನ್‌ ಅಲ್ಲ: ಜಿ.ಪಂ ಸಿಇಒ ರಾಜೇಂದ್ರ ಕೆ.ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಐಎಎಸ್‌, ಐಪಿಎಸ್‌ ಪರೀಕ್ಷೆಗಳೆಂದರೆ ಕ್ವಿಜ್‌ ಕಾಂಪಿಟೇಷನ್‌ ಅಲ್ಲ. ಬುದ್ಧಿಮತ್ತೆ ಜೊತೆ ನಿಮ್ಮ ವ್ಯಕ್ತಿತ್ವವನ್ನೂ ಒರೆಗೆ ಹಚ್ಚುವ ಪರೀಕ್ಷೆ ಇದಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.

ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ಪತ್ರಿಕಾ ಸಮೂಹವು ಚಾಣಕ್ಯ ಕರಿಯರ್‌ ಅಕಾಡೆಮಿ ಸಹಯೋಗದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ಪರ್ಧಾ ಮಾರ್ಗ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಎಲ್ಲ ವಿಷಯಗಳ ಬಗ್ಗೆ ಜ್ಞಾನ, ಅರಿವು ಇರಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣದ ಬಗ್ಗೆ ಜ್ಞಾನ ಬೇಕು. ಇದರ ಜೊತೆಗೆ ಸಮಾಜದ ಬಗೆಗಿನ ಕಳಕಳಿ, ಬಡವರ ಬಗ್ಗೆ ಕಾಳಜಿ ಬೇಕು. ಇದು ಒಂದೆರಡು ದಿನಗಳಲ್ಲಿ ಅಥವಾ ಒಂದೆರಡು ವರ್ಷಗಳಲ್ಲಿ ಬರುವಂತಹದ್ದಲ್ಲ. ಇದನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳಬೇಕು. ಸಂದರ್ಶನದ ವೇಳೆ ಇದು ಸಹಾಯಕ್ಕೆ ಬರುತ್ತದೆ’ ಎಂದು ಹೇಳಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಕೇವಲ ಓದಿದರೆ ಸಾಲದು. ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಂಡರೆ ಸಾಲದು. ಪ್ರತಿಯೊಂದು ವಿಷಯವನ್ನು ವಿಶ್ಲೇಷಣಾತ್ಮಕವಾಗಿ ನೋಡುವುದನ್ನು ಕಲಿಯಬೇಕು. ಇದು ಯಾವ ಪುಸ್ತಕದಲ್ಲಿಯೂ ಇರಲ್ಲ. ಇದನ್ನು ಸ್ವತಃ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಇವತ್ತು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಸುದ್ದಿಗಳು, ಮಾಹಿತಿಗಳು ಹರಿದಾಡುತ್ತಿವೆ. ಇವುಗಳ ಮೇಲೆ ಹೆಚ್ಚಾಗಿ ಅವಲಂಬನೆ ಹೊಂದದೆ ದಿನಪತ್ರಿಕೆಗಳು ಹಾಗೂ ವಿಷಯವಾರು ಪುಸ್ತಕಗಳನ್ನು ಧರ್ಮ ಗ್ರಂಥಗಳನ್ನು ಓದುವಂತೆ ಶ್ರದ್ಧೆಯಿಂದ ಓದಬೇಕು’ ಎಂದು ಹೇಳಿದರು.

‘ನಾಗರಿಕ ಸೇವಾ ಹುದ್ದೆಗಳಿಗೆ ಸೇರಲೇಬೇಕು ಎನ್ನುವ ಆಸಕ್ತಿ, ತುಡಿತ ಮನಸ್ಸಿನಾಳದಿಂದ ಬಂದವರು ಮಾತ್ರ ಈ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ತಂದೆ– ತಾಯಿ ಒತ್ತಡ, ಅಕ್ಕಪಕ್ಕದ ಮನೆಯವರ ಜೊತೆಗಿನ ಸ್ಪರ್ಧೆಗೆ ಪರೀಕ್ಷೆ ಬರೆಯಬೇಡಿ. ಇಂತಹ ಪ್ರಯತ್ನಗಳು ಕೈಗೂಡುವುದಿಲ್ಲ’ ಎಂದು ತಿಳಿಸಿದರು.

‘ಆಸಕ್ತಿ ಬೆಳೆಸಿಕೊಳ್ಳಬೇಕು, ಸಿಲೆಬಸ್‌ ತಿಳಿದುಕೊಳ್ಳಬೇಕು, ಯೋಜನಾಬದ್ಧವಾಗಿ ಅಧ್ಯಯನ ಮಾಡಬೇಕು, ಓದಬೇಕು– ತಿಳಿದುಕೊಳ್ಳಬೇಕು– ಮನನ ಮಾಡಿಕೊಳ್ಳಬೇಕು, ಗುಂಪು ಅಧ್ಯಯನ ಮಾಡಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು