₹ 238 ಕೋಟಿ ‘ಬಚ್ಚಿಟ್ಟ ವಹಿವಾಟು’ ಪತ್ತೆ

7
ಜಿಎಸ್‌ಟಿ ಜಾರಿಯಾದ ವರ್ತಕರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು

₹ 238 ಕೋಟಿ ‘ಬಚ್ಚಿಟ್ಟ ವಹಿವಾಟು’ ಪತ್ತೆ

Published:
Updated:
ರವಿ ಜೆ. ಸ್ಯಾಂಕ್ಟಸ್

ಬೆಳಗಾವಿ: ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಉತ್ತರ ವಲಯದ ಸರಕು ಮತ್ತು ಸೇವಾ ತೆರಿಗೆ (ಜಾರಿ) ಅಧಿಕಾರಿಗಳು ಫೆಬ್ರುವರಿಯಿಂದ ಈವರೆಗೆ 319 ದಾಳಿಗಳನ್ನು ನಡೆಸಿ, ₹ 238 ಕೋಟಿ ‘ಬಚ್ಚಿಟ್ಟ ವಹಿವಾಟು’ ಪತ್ತೆ ಹಚ್ಚಿದ್ದಾರೆ.

ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ವರ್ಷ ಕಳದಿದೆ. ಆದರೆ, ಆರಂಭದಲ್ಲಿ ಹೊಸ ವ್ಯವಸ್ಥೆಯ ಕುರಿತು ವರ್ತಕರಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೊಂದಿಕೊಳ್ಳಲು ಅವಕಾಶ ನೀಡಲಾಗಿತ್ತು. ಫೆಬ್ರುವರಿಯಿಂದ ತೆರಿಗೆ ವಂಚಕರಿಗೆ ‘ದಂಡಂ ದಶಗುಣಂ’ ಪ್ರಯೋಗ ಮಾಡಲು ಇಲಾಖೆಯು ಆರಂಭಿಸಿದೆ. ತಪಾಸಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

‘ಸರಕು ಸಾಗಣೆಗೆ ವಿದ್ಯುನ್ಮಾನ ಬಿಲ್ (ಇ–ವೇ ಬಿಲ್) ಜಾರಿಯಾದ ನಂತರ 23,300 ವಾಹನಗಳನ್ನು ತಪಾಸಣೆ ಮಾಡಿ ನಿಯಮ ಉಲ್ಲಂಘಿಸಿರುವುದು ಖಚಿತಗೊಂಡಿದ್ದರಿಂದ ₹ 3.30 ಕೋಟಿ ದಂಡ ವಸೂಲಿ ಮಾಡಲಾಗಿದೆ. ಜಿಎಸ್‌ಟಿಗೆ ಸಂಬಂಧಿಸಿದಂತೆ ಇನ್ನೂ 150 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಇವು ದೊಡ್ಡ ಗುತ್ತಿಗೆದಾರರಿಗೆ ಸಂಬಂಧಿಸಿದವು. ಇವು ಇತ್ಯರ್ಥಗೊಂಡರೆ ಬಚ್ಚಿಟ್ಟ ವಹಿವಾಟು ಮತ್ತಷ್ಟು ಪತ್ತೆಯಾಗಲಿದೆ’ ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ (ಜಾರಿ) ರವಿ ಜೆ. ಸ್ಯಾಂಕ್ಟಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನಿಯಮಿತ ದಾಳಿ: ‘ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ದಾಳಿ ನಡೆಸಿ, ಮಾಲ್, ವಾಣಿಜ್ಯ ಸಂಕೀರ್ಣ, ಮಳಿಗೆಗಳು, ವಾಹನ ಚಾಲನಾ ತರಬೇತಿ ಶಾಲೆಗಳು, ಭದ್ರತಾ ಸೇವಾ ಸಂಸ್ಥೆಗಳು, ಟೂರ್ಸ್ ಅಂಡ್ ಟ್ರಾವೆಲ್ಸ್, ಆಸ್ಪತ್ರೆ, ಕಲ್ಯಾಣಮಂಟಪ, ಸೊಸೈಟಿ, ಔಷಧ ತಯಾರಕರು, ಗುತ್ತಿಗೆದಾರರ ತಪಾಸಣೆ ನಿಯಮಿತವಾಗಿ ನಡೆಸಲಾಗುತ್ತಿದೆ. ಸರಕು ಸಾಗಣೆ ವಾಹನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ’ ಎನ್ನುತ್ತಾರೆ ಅವರು.

‘ಜಿಎಸ್‌ಟಿ ಜಾರಿಯಾದ ನಂತರ, ವ್ಯಾಟ್‌ನಿಂದ ಜಿಎಸ್‌ಟಿಗೆ ಪರಿವರ್ತನೆಗೊಳಿಸಲು ಕ್ರಮ ವಹಿಸಲಾಗಿದೆ. ವಲಯದಲ್ಲಿರುವ 62ಸಾವಿರ ವರ್ತಕರು ನೋಂದಾಯಿಸಿದ್ದಾರೆ. ಜಾಗೃತಿ ಮೂಡಿಸಲು 2174 ಕಾರ್ಯಕ್ರಮಗಳನ್ನು ನಡೆಸಿದ್ದೇವೆ’ ಎಂದು ವಿವರಿಸಿದರು.

‘ಜಿಎಸ್‌ಟಿಗೆ ಜಾರಿಗೆ ಬರುವುದಕ್ಕಿಂತ ವ್ಯಾಟ್ ಜಾರಿಯಲ್ಲಿತ್ತು. ವಲಯದಲ್ಲಿ ಮೂರೂವರೆ ವರ್ಷದಿಂದ 4171 ದಾಳಿಗಳನ್ನು ನಡೆಸಿ, ₹ 1,797 ಬಚ್ಚಿಟ್ಟ ವಹಿವಾಟು ಪತ್ತೆ ಹಚ್ಚಿದ್ದೇವೆ. ₹ 178 ಕೋಟಿ ದಂಡ ವಿಧಿಸಲಾಗಿದೆ. ವರ್ತಕರು ನಿಯಮ ಪಾಲಿಸುತ್ತಿದ್ದಾರೆಯೇ ಇಲ್ಲವೇ ಎನ್ನುವ ನಿಗಾ ವಹಿಸಲು ಗ್ರಾಹಕರಂತೆ ತೆರಳಿ, 4152 ಪರೀಕ್ಷಾರ್ಥ ಖರೀದಿ ತಪಾಸಣೆ ನಡೆಸಲಾಗಿದೆ. ಜುಲೈ 2017ರವರೆಗೆ ₹ 1 ಕೋಟಿ ದಂಡ ವವಿಧಿಸಲಾಗಿದೆ. 4.35 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿ, 10853 ಪ್ರಕರಣಗಳನ್ನು ದಾಖಲಿಸಲಾಗಿದೆ. ₹ 45 ಕೋಟಿ ದಂಡ ವಸೂಲಿ ಮಾಡಲಾಗಿದೆ. ವಲಯದ ಇತಿಹಾಸದಲ್ಲಿಯೇ ಇವೆಲ್ಲವೂ ದಾಖಲೆ’ ಎಂದು ತಿಳಿಸಿದರು.

ಸ್ಟೀಲ್‌ ಅಕ್ರಮ ಸಾಗಣೆಗೆ ಕಡಿವಾಣ:  ‘ಮೂರು ರಾಜ್ಯಗಳ ಗಡಿಯನ್ನು ವಲಯ ಹೊಂದಿದೆ. ಗೋವಾ, ಮೀರಜ್, ಸಾಂಗ್ಲಿ, ಜಾಲ್ನಾ ಮೊದಲಾದ ಕಡೆಗಳಿಂದ ನಿತ್ಯ 1500 ಟನ್‌ನಷ್ಟು ಸ್ಟೀಲ್ ದಾಖಲೆಗಳಿಲ್ಲದೇ ಸಾಗಣೆಯಾಗುತ್ತಿತ್ತು. ಈ ಮಾಫಿಯಾಕ್ಕೆ, ತಪಾಸಣೆ ಮೂಲಕ ಕಡಿವಾಣ ಹಾಕಲಾಗಿದೆ. ಅಥಣಿ, ಕಣಕುಂಬಿ, ನಿಪ್ಪಾಣಿ, ಸಿಂದಗಿ, ಸಾವಳಗಿ, ಇಂಡಿ, ಧೂಳಖೇಡ, ಕಾಗವಾಡ, ಬೋರಗಾಂವ, ಯಕ್ಸಂಬಾದಲ್ಲಿ ವಿಚಕ್ಷಣಾ ದಳದಿಂದ ನಿಗಾ ವವಹಿಸಲಾಗುತ್ತಿದೆ’.

‘ಗುಜರಾತ್‌ನಿಂದ ಕಡಿಮೆ ಲೆಕ್ಕ ತೋರಿಸಿ ಹೆಚ್ಚಿನ ಪ್ರಮಾಣದ ಗ್ರಾನೈಟ್, ಮಾರ್ಬಲ್ಸ್‌ಗಳನ್ನು ನಿತ್ಯ 40ರಿಂದ 45 ವಾಹನಗಳಲ್ಲಿ ಸಾಗಿಸುತ್ತಿದ್ದುದ್ದು ಪತ್ತೆಯಾಗಿತ್ತು. ಭೌತಿಕ ತ‍ಪಾಸಣೆ ಚುರುಕುಗೊಳಿಸಿದ್ದಿರಂದ ಕಡಿವಾಣ ಬಿದ್ದಿದೆ. ದಾಖಲೆಗಳಿಲ್ಲದೇ ಗುಟ್ಕಾ, ಸಿಗೇಟ್ ಕಳ್ಳ ಸಾಗಣೆ, ಸಂಬಾರ ಪದಾರ್ಥ, ತೈಲೋತ್ಪನ್ನ ಅಕ್ರಮವಾಗಿ ಸಾಗಿಸುವುದನ್ನು ತಡೆಯಲಾಗುತ್ತಿದೆ. ವಾರಕ್ಕೆ 2 ಬಾರಿ ಗೋದಾಮುಗಳಿಗೆ ದಿಢೀರ್‌ ದಾಳಿ ನಡೆಸಿ, ಬಿಸಿ ಮುಟ್ಟಿಸಲಾಗುತ್ತಿದೆ’ ಎಂದು ತಿಳಿಸಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !