ಮಂಗಳವಾರ, ಅಕ್ಟೋಬರ್ 22, 2019
22 °C
‘ಸ್ಥಿತಿವಂತರು’ ಬಿಪಿಎಲ್‌ ಕಾರ್ಡ್‌ ಹಿಂತಿರುಗಿಸಲು ಸೂಚನೆ

ಬೆಳಗಾವಿ: ಬಿಪಿಎಲ್‌ ಕಾರ್ಡ್‌ ಅಕ್ರಮ – ₹ 49ಸಾವಿರ ದಂಡ ವಸೂಲಿ

Published:
Updated:
Prajavani

ಬೆಳಗಾವಿ: ‘ಆರ್ಥಿಕವಾಗಿ ಸದೃಢವಾಗಿರುವವರು ಪಡೆದಿರುವ ಬಿಪಿಎಲ್‌ ಪಡಿತರ ಚೀಟಿ ಹಿಂತಿರುಗಿಸದಿದ್ದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

‘‌‌ಅಕ್ರಮವಾಗಿ ಪಡೆದಿರುವವರು ಬಿಪಿಎಲ್ ಮತ್ತು ಅಂತ್ಯೋದಯ ಪಡೀತರ ಚೀಟಿಗಳನ್ನು ಸ್ವಯಂಪ್ರೇರಿತವಾಗಿ ಜಿಲ್ಲೆಯ ಆಯಾ ತಾಲ್ಲೂಕಿನ ಆಹಾರ ಶಾಖೆಗೆ ವಾಪಸ್ ಮಾಡಬೇಕು. ಇದಕ್ಕಾಗಿ ಸೆ. 30ರವರೆಗೆ ಗಡವು ನೀಡಲಾಗಿತ್ತು. ಈ ಅವಧಿಯಲ್ಲಿ ಒಟ್ಟು 1,054 ಮಂದಿ ಚೀಟಿಗಳನ್ನು ಹಿಂದಿರುಗಿಸಿದ್ದಾರೆ ಹಾಗೂ ₹ 49ಸಾವಿರವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ’ ಎಂದು ಮಾಹಿತಿ ನೀಡಲಾಗಿದೆ.

‘ಇನ್ನೂ ಯಾರಾದರೂ ಸ್ಥಿತಿವಂತರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಲ್ಲಿ ಸ್ವಯಂಪ್ರೇರಿತವಾಗಿ ಆಯಾ ತಾಲ್ಲೂಕಿನ ಆಹಾರ ಶಾಖೆಗೆ ಹಿಂದಿರುಗಿಸಬೇಕು. ಅಂಥವರಿಗೆ ದಂಡ ಮಾತ್ರ ವಿಧಿಸಲಾಗುವುದು. ಸ್ವಯಂಪ್ರೇರಿತವಾಗಿ ಹಿಂದಿರುಗಿಸದೇ ಇದ್ದಲ್ಲಿ, ಇಲಾಖೆಯ ಅಧಿಕಾರಿಗಳ ಮೂಲಕ ಪತ್ತೆ ಹಚ್ಚಿದ ನಂತರ ಕಂಡುಬಂದಲ್ಲಿ ದಂಡ ಮತ್ತು ಅಕ್ರಮವಾಗಿ ಪಡಿತರ ಚೀಟಿಗಳನ್ನು ಹೊಂದಿರುವ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು ನಗರ, ಪಟ್ಟಣ ಪ್ರದೇಶಗಳಲ್ಲಿ ಸಾವಿರ ಚದರ ಅಡಿಗಿಂತ ದೊಡ್ಡ ಮನೆ ಹೊಂದಿರುವವರು, ಸರ್ಕಾರಿ ನೌಕರರು, ಸಹಕಾರ ಸಂಘಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಗಳ ನೌಕರರು, ಬ್ಯಾಂಕ್ ನೌಕರರು, ಆಸ್ಪತ್ರೆ ನೌಕರರು, ವಕೀಲರು, ಆಡಿಟರ್‌ಗಳು, ದೊಡ್ಡ ಅಂಗಡಿ ಮತ್ತು ಹೋಟೆಲ್ ವರ್ತಕರು, ಸ್ವಂತ ಕಾರು, ಜೆಸಿಬಿ, ಲಾರಿ ಮೊದಲಾದ ವಾಹನ ಹೊಂದಿರುವವರು, ಅನುದಾನಿತ ಶಾಲಾ–ಕಾಲೇಜು ನೌಕರರು, ಗುತ್ತಿಗೆದಾರರು, ಕಮಿಷನ್ ಏಜೆಂಟರು, ಮನೆ, ಕಟ್ಟಡಗಳನ್ನು ಬಾಡಿಗೆ ನೀಡಿರುವವರು, ಬಹು ರಾಷ್ಟ್ರೀಯ ಕಂಪನಿ ಉದ್ದಿಮೆದಾರರು, ನಿವೃತ್ತಿ ವೇತನ ಪಡೆಯುತ್ತಿರುವವರು ಹಾಗೂ ವಾರ್ಷಿಕ ₹ 1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳು ಬಿ.ಪಿ.ಎಲ್ ಕಾರ್ಡ್‌ಗಳನ್ನು ಪಡೆಯುವುದು ಶಿಕ್ಷಾರ್ಹ’ ಎಂದು ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)