ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಇಯಿಂದ ಮಹಿಳಾ ಶಿಕ್ಷಣಕ್ಕೆ ಒತ್ತು: ಡಾ.ಡಿ. ನಾಗೇಶ್ವರ ರೆಡ್ಡಿ ಶ್ಲಾಘನೆ

Last Updated 19 ಆಗಸ್ಟ್ 2021, 11:50 IST
ಅಕ್ಷರ ಗಾತ್ರ

ಬೆಳಗಾವಿ: ‘ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಮಹಿಳಾ ಶಿಕ್ಷಣಕ್ಕೂ ಒತ್ತು ನೀಡಿರುವುದು ಶ್ಲಾಘನೀಯ’ ಎಂದು ಹೈದರಾಬಾದ್‌ನ ಏಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಗ್ಯಾಸ್ಟ್ರೋಎಂಟ್ರಾಲಾಜಿ ಆಸ್ಪತ್ರೆಯ ಕಾರ್ಯಾಧ್ಯಕ್ಷ ಡಾ.ಡಿ. ನಾಗೇಶ್ವರ ರೆಡ್ಡಿ ಹೇಳಿದರು.

ಇಲ್ಲಿನ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಗುರುವಾರ ಆಯೋಜಿಸಿದ್ದ 11ನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ‘ಕಲಿಕೆಗೆ ಅತ್ಯುತ್ತಮವಾದ ಪರಿಸರವನ್ನು ಸಂಸ್ಥೆ ರೂಪಿಸಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಸುವರ್ಣ ಪದಕಗಳನ್ನು ಪಡೆಯುವ ಮೂಲಕ ಶಕ್ತಿ ಪ್ರದರ್ಶಿಸಿದ್ದಾರೆ. 35ರಲ್ಲಿ 27 ಚಿನ್ನದ ಪದಕಗಳನ್ನು ವಿದ್ಯಾರ್ಥಿನಿಯರೇ ಬಾಚಿಕೊಂಡಿದ್ದಾರೆ. ಅದಕ್ಕೆ ಬೆಂಬಲವಾಗಿ ಈ ಅಕಾಡೆಮಿಯು ಕೆಲಸ ಮಾಡಿದೆ’ ಎಂದು ತಿಳಿಸಿದರು.

ಪ್ರಮಾಣ ಕಡಿಮೆ ಆಗಬಹುದು:‘ಇಲ್ಲಿನ ಅತ್ಯುತ್ತಮ ಹಾಗೂ ಹಸಿರು ಕ್ಯಾಂಪಸ್ ಹೆಸರುವಾಸಿಯಾಗಿದೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು, ವಿಶ್ವ ದರ್ಜೆಯ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ಅತ್ಯುತ್ತಮವಾದ ವಿಧಾನದಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದರು.

‘ಮಾನವನ ಆರೋಗ್ಯವು ಜೀವನಶೈಲಿ, ಆಹಾರ, ಚುಚ್ಚುಮದ್ದು ಹಾಗೂ ಶುದ್ಧ ಕುಡಿಯುವ ನೀರನ್ನು ಅವಲಂಬಿಸಿದೆ. 2019ರಲ್ಲಿ ಬಂದ ಕೋವಿಡ್-19 ಸಾಂಕ್ರಾಮಿಕದ ಮೂರನೇ ಅಲೆ ಬಂದಿದೆ. ಇಷ್ಟರಲ್ಲೇ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಈಗ ನಮ್ಮ ಬಳಿ ಲಸಿಕೆ ಇದೆ. 4ನೇ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆ ಆಗಬಹುದು’ ಎಂದು ಅಭಿಪ್ರಾಯಪಟ್ಟರು.

‘ವೈದ್ಯರಿಗೆ ಕನಸು ದೊಡ್ಡದಾಗಿರಬೇಕು. ಆದರೆ, ಇಡುವ ಹೆಜ್ಜೆ ಮಾತ್ರ ಚಿಕ್ಕದಾಗಿರಬೇಕು. ನಿತ್ಯವೂ ಕ್ಷೇತ್ರದ ಮೂರು ಹೊಸ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಅದು ಜ್ಞಾನದ ಮಟ್ಟ ಹೆಚ್ಚಿಸುತ್ತದೆ. ಕಠಿಣ ಪರಿಶ್ರಮ ಹಾಗೂ ಸ್ಮಾರ್ಟ್‌ ಕೆಲಸದಿಂದ ಸಾಧನೆ ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮದಿಂದ ನಮ್ಮ ಕ್ಷೇತ್ರದಲ್ಲಿ ಪರಿಣತಿ ಹೊಂದಬಹುದು’ ಎಂದು ತಿಳಿಸಿದರು.

ಕೌಶಲ ಬೆಳೆಸಿಕೊಳ್ಳಬೇಕು:‘ಮಕ್ಕಳು ತಂದೆ–ತಾಯಿ ಮೇಲೆ ನಂಬಿಕೆ ಇಡಬೇಕು. ಅವರು ನಮ್ಮನ್ನು ಗುರಿ ಮುಟ್ಟಿಸುತ್ತಾರೆ’ ಎಂದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದರೆ ಸಾಲದು. ಉತ್ತಮ ಸಂವಹನ ಕೌಶಲವನ್ನೂ ಹೊಂದಿರಬೇಕು. ಅವರು ಉತ್ತಮ ವೈದ್ಯರಾಗಲು ಸಾಧ್ಯವಿದೆ. ಸೋಲು ಕೊನೆ ಅಲ್ಲ. ತಪ್ಪು ಮಾಡಿದಾಗಲೇ ಗುರಿಯ ದಾರಿ ಸುಲಭವಾಗುತ್ತದೆ. ನಮ್ಮ ಸುತ್ತಲೂ ಧನಾತ್ಮಕ ಚಿಂತನೆಯ ಜನರನ್ನು ಇಟ್ಟುಕೊಂಡಿರಬೇಕು’ ಎಂದು ಸಲಹೆ ನೀಡಿದರು.

ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೋಜಿ ವಾರ್ಷಿಕ ವರದಿ ಮಂಡಿಸಿದರು.

ಘಟಿಕೋತ್ಸವದಲ್ಲಿ 1,531 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 35 ವಿದ್ಯಾರ್ಥಿಗಳು ಸುವರ್ಣ ಪದಕಕ್ಕೆ ಕೊರಳೊಡ್ಡಿದರು. 18 ಮಂದಿ ಪಿಎಚ್‌.ಡಿ, 452 ಮಂದಿ ಸ್ನಾತಕೋತ್ತರ, 942 ಪದವಿ, 75 ಪೋಸ್ಟ್‌ ಡಾಕ್ಟರಲ್ (ಡಿಎಂ), 10 ಸರ್ಟಿಫಿಕೇಟ್, 10 ಫೆಲೋಶಿಪ್‌ ಹಾಗೂ 6 ಡಿಪ್ಲೊಮಾ ಪದವಿ ಪಡೆದಿದ್ದಾರೆ. ಎಂಬಿಬಿಎಸ್‌ನಲ್ಲಿ ಡಾ.ಮೋಹಿನಿ ಅಗರ್ವಾಲ್‌ ಮತ್ತು ಬಿಎಎಂಎಸ್‌ನಲ್ಲಿ ಡಾ.ಅಕ್ಷತಾ ಲಡಗಿ ತಲಾ 3 ಮತ್ತು ಬಿಪಿಟಿಯಲ್ಲಿ ರುತುಜಾ ಬಲೋಲಿಯಾ 2 ಚಿನ್ನದ ಪದಕಗಳನ್ನು ಪಡೆದು ಗಮನಸೆಳೆದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಕುಲಾಧಿಪತಿ ಪ್ರಭಾಕರ ಕೋರೆ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಪರೀಕ್ಷಾ ನಿಯಂತ್ರಕಿ ಡಾ.ಜ್ಯೋತಿ ನಾಗಮೋತಿ, ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ನಿರ್ದೇಶಕರಾದ ಡಾ.ವಿ.ಎಸ್. ಸಾಧುನವರ, ಎಸ್‌.ಸಿ. ಮೆಟಗುಡ್, ಕಾರ್ಯದರ್ಶಿ ಡಾ.ಬಿ.ಜಿ. ದೇಸಾಯಿ, ಡಾ.ವಿ.ಡಿ. ಪಾಟೀಲ, ಡಾ.ಎಂ.ವಿ. ಜಾಲಿ, ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ.ಪ್ರಶಾಂತ ಜಾಡರ, ಸುಧಾ ರೆಡ್ಡಿ, ಎಂ.ಎಸ್. ಗಣಾಚಾರಿ ಉಪಸ್ಥಿತರಿದ್ದರು.

***

ಕರುಣೆಯೂ ಬೇಕು

ವೈದ್ಯರಿಗೆ ವಿಜ್ಞಾನದ ಜ್ಞಾನದ ಜೊತೆ ಕರುಣೆಯೂ ಬೇಕು. ರೋಗಿಯನ್ನು ಸಂಪೂರ್ಣ ಅಧ್ಯಯನ ಮಾಡಿದಾಗ ಚಿಕಿತ್ಸೆಗೆ ಅಗತ್ಯವಾದ ಶೇ.90ರಷ್ಟು ಸಿದ್ಧತೆ ಮುಗಿಯುತ್ತದೆ.

– ಡಾ.ಡಿ. ನಾಗೇಶ್ವರ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT