ಭಾನುವಾರ, ಸೆಪ್ಟೆಂಬರ್ 27, 2020
28 °C
ಚಿಕ್ಕೋಡಿ ತಾಲ್ಲೂಕಿನಲ್ಲಿ ಇಲಾಖೆಯಿಂದ ಕ್ರಮ

ಚಿಕ್ಕೋಡಿಯಲ್ಲಿ 1.27 ಲಕ್ಷ ಸಸಿ ನೆಡುವ ಗುರಿ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಲಯ ಅರಣ್ಯ ಇಲಾಖೆಯು ತಾಲ್ಲೂಕಿನಲ್ಲಿ ರಾಷ್ಟ್ರೀಯ ಗ್ರಾಮೀಣ ಅರಣ್ಯೀಕರಣ ಯೋಜನೆಯಡಿ 90 ಹೆಕ್ಟೇರ್ ಪ್ರದೇಶದಲ್ಲಿ 1.27 ಲಕ್ಷ ವಿವಿಧ ಜಾತಿಯ ಸಸಿಗಳನ್ನು ನೆಡುವ ಗುರಿ ಹೊಂದಿದೆ. ಇದರಲ್ಲಿ ಶೇ 50ಕ್ಕೂ ಹೆಚ್ಚಿನ ಸಸಿಗಳನ್ನು ನೆಡಲಾಗಿದೆ.

ತಾಲ್ಲೂಕಿನ ಜೈನಾಪುರದ ಸಸ್ಯಪಾಲನಾ ಕೇಂದ್ರದಲ್ಲಿ 74,370 ಮತ್ತು ಚಿಂಚಣಿ ಸಸ್ಯಪಾಲನಾ ಕೇಂದ್ರದಲ್ಲಿ 53,250 ವಿವಿಧ ಅಳತೆಯ ಬ್ಯಾಗ್‌ಗಳಲ್ಲಿ ಅರಣ್ಯ ಮತ್ತು ಹಣ್ಣಿನ ಸಸಿಗಳನ್ನು ಬೆಳೆಸಿದ್ದು, ಅವುಗಳ ನಾಟಿ ಕಾರ್ಯ ಪ್ರಗತಿಯಲ್ಲಿದೆ.

2020-21ನೇ ಸಾಲಿನಲ್ಲಿ ಕರೋಶಿ ಮತ್ತು ಹಿರೇಕೋಡಿ ಗ್ರಾಮಗಳ ವ್ಯಾಪ್ತಿಯ ತಲಾ 25 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ತಲಾ 25ಸಾವಿರ, ಕರೋಶಿಯ ಇನ್ನೊಂದೆಡೆ ಇರುವ 20 ಹೆಕ್ಟೇರ್ ಪ್ರದೇಶದಲ್ಲಿ 20ಸಾವಿರ, ಮಾಂಗನೂರ ಗ್ರಾಮ ವ್ಯಾಪ್ತಿಯ 18 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 18ಸಾವಿರ, ನಾಗರಾಳದಿಂದ ನನದಿ ಹಾಲಸಿದ್ದನಾಥ ಗುಡಿವರೆಗೆ 3 ಕಿ.ಮೀ. ರಸ್ತೆ ಇಕ್ಕೆಲಗಳಲ್ಲಿ 900, ಚಿಕ್ಕೋಡಿ ಮತ್ತು ಸದಲಗಾ ಪಟ್ಟಣಗಳ ವಿವಿಧೆಡೆ ತಲಾ ಒಂದೂವರೆ ಕಿ.ಮೀ. ಉದ್ದದಲ್ಲಿ ತಲಾ 450 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ವಿವಿಧೆಡೆ ನಾಟಿ ಕಾರ್ಯ ಮುಕ್ತಾಯದ ಹಂತದಲ್ಲಿದೆ.

ಚಿಂಚಣಿ ಮತ್ತು ಜೈನಾಪುರ ನರ್ಸರಿಗಳಲ್ಲಿ ತಪಸಿ, ಅರಳಿ, ಹುಲಗಲಿ, ಗೋಣಿ, ನೇರಳೆ, ಬೇವು, ಹುಣಸೆ, ಪತ್ರಿ, ಹೆಬ್ಬೇವು, ನೆಲ್ಲಿ, ಬಿದಿರು, ಸೀತಾಫಲ, ಸೀಮಾರೋಬಾ, ದಾಳಿಂಬೆ, ಪೇರಲ, ಸಾಗವಾನಿ, ಕರಿಬೇವು, ಮತ್ತಿ, ಶ್ರೀಗಂಧ ಮೊದಲಾದ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಕೃಷಿ ಭೂಮಿಯಲ್ಲೂ ಸಸಿಗಳನ್ನು ಬೆಳೆಸಲು ರೈತರಿಗೆ ಇಲಾಖೆಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ. ಬದುಕುಳಿಯುವ ತಲಾ ಒಂದು ಸಸಿಗೆ ಮೂರು ವರ್ಷಗಳವರೆಗೆ ಒಟ್ಟು ₹ 100ಗಳನ್ನು ಸಸಿಗಳ ಪೋಷಣೆಗಾಗಿ ರೈತರಿಗೆ ನೀಡಲಾಗುತ್ತದೆ. ಅಲ್ಲದೇ, ನರ್ಸರಿಯಲ್ಲಿ ಬೆಳೆದಿರುವ 8x12 ಸೈಜಿನ ಬ್ಯಾಗಲ್ಲಿರುವ ಒಂದು ಸಸಿಯನ್ನು ₹ 3ಕ್ಕೆ ಮತ್ತು 6x9 ಸೈಜಿನ ಬ್ಯಾಗಲ್ಲಿರುವ ಸಸಿಯನ್ನು ₹ 1ಕ್ಕೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 2019-20ನೇ ಸಾಲಿನಲ್ಲಿ 69 ಫಲಾನುಭವಿಗಳಿಗೆ 15,523 ಸಸಿಗಳನ್ನು ವಿತರಿಸಲಾಗಿದೆ. ಒಟ್ಟು ₹ 4.46 ಲಕ್ಷ ಪ್ರೋತ್ಸಾಹಧನ ವಿತರಿಸಬೇಕಾಗಿದ್ದು, ಆ ಪೈಕಿ ₹ 1.11 ಲಕ್ಷ ಪಾವತಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು