ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಸ್ಪರ್ಧೆ: 14,842 ಮಕ್ಕಳು ಭಾಗಿ

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಆಯೋಜನೆ
Last Updated 16 ಡಿಸೆಂಬರ್ 2018, 11:24 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವ್ಯಾಕ್ಸಿನ್‌ ಡಿಪೊದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿವಿಧ 356 ಶಾಲೆಗಳ 14,842 ಮಕ್ಕಳು ಭಾಗವಹಿಸಿದ್ದರು. ತಮ್ಮ ಕಲ್ಪನೆಯ ಚಿತ್ರಗಳಿಗೆ ಬಣ್ಣ ತುಂಬಿದರು.

ಶಾಲಾ ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಂಸ್ಕೃತಿಯ ಸೊಗಡನ್ನು ಬೆಳೆಸುವ ಉದ್ದೇಶದಿಂದ ಸತತ 9 ವರ್ಷಗಳಿಂದ ಸ್ಪರ್ಧೆ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಿರಿಯರ ವಿಭಾಗಲ್ಲಿ 1ನೇ ತರಗತಿಯಿಂದ 8ನೇ ತರಗತಿವರೆಗೆ, ಹಿರಿಯರ ವಿಭಾಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಷಯಗಳನ್ನು ನೀಡಲಾಗಿತ್ತು. ಕಿರಿಯರಿಗೆ ಹಣ್ಣು, ಪ್ರಾಣಿ ‍ಪಕ್ಷಿಗಳ ಚಿತ್ರಗಳನ್ನು ಬಿಡಿಸಲು ತಿಳಿಸಲಾಗಿತ್ತು. ಹಿರಿಯರಿಗೆ ಜಾತ್ರೆ, ದನದ ಸಂತೆ, ಲೆಜಿಮ್ ಆಡುವ ಭಂಗಿ... ವಿಷಯಗಳ ಕುರಿತು ಚಿತ್ರ ಬಿಡಿಸಲು ಹೇಳಲಾಗಿತ್ತು. ಮಕ್ಕಳು ಗಿಡಗಳ ನೆರಳಲ್ಲಿ ಕುಳಿತು ಚಿತ್ರಗಳನ್ನು ಬಿಡಿಸಿ ಗಮನಸೆಳೆದರು.

ಈ ವೇಳೆ ಮಾತನಾಡಿದ ಅಭಯ, ‘ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಪೋಷಕರು ಕೂಡ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. 12 ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿ, ಅವುಗಳನ್ನು ದಿನದರ್ಶಿಕೆಯಲ್ಲಿ ಮುದ್ರಿಸಿ ಹಂಚಲಾಗುವುದು. 12 ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಬೈಸಿಕಲ್‌ಗಳನ್ನು ನೀಡಲಾಗುವುದು. ಅವರ ಪೋಷಕರನ್ನೂ ಸತ್ಕರಿಸಲಾಗುವುದು. ನೂರು ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಕೊಡಲಾಗುವುದು. ಜನವರಿಯಲ್ಲಿ ಮಾಲಿನಿ ನಗರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಬಹುಮಾನ ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT