ಗುರುವಾರ , ಮಾರ್ಚ್ 23, 2023
32 °C
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ

ಕೌಶಲ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ₹ 16.43 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ವೇಗವಾಗಿ ಬದಲಾಗುತ್ತಿರುವ ತಾಂತ್ರಿಕತೆಯಲ್ಲಿ ಕೌಶಲ ವೃದ್ಧಿಯ ಪ್ರಾಮುಖ್ಯತೆಗೆ ಅನುಗುಣವಾಗಿ ಬೆಳಗಾವಿಯಲ್ಲಿ ಕಾರ್ಯಾರಂಭವಾಗಿರುವ ಅಂತರರಾಷ್ಟ್ರೀಯ ಗುಣಮಟ್ಟದ ಕರ್ನಾಟಕ-ಜರ್ಮನ್ ಬಹುಕೌಶಲ ಅಭಿವೃದ್ಧಿ ಕೇಂದ್ರಕ್ಕೆ ₹ 16.43 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಪ್ರಸ್ತಾವಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.

‘ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ- ಜರ್ಮನ್ ಬಹುಕೌಶಲ ಅಭಿವೃದ್ಧಿ ಕೇಂದ್ರ ಸೊಸೈಟಿ ತಾಂತ್ರಿಕ ಸಹಯೋಗದೊಂದಿಗೆ ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಅಂತರರಾಷ್ಟ್ರೀಯ ಗುಣಮಟ್ಟದ 5 ಕರ್ನಾಟಕ ಜರ್ಮನ್ ಬಹುಕೌಶಲ ಅಭಿವೃದ್ಧಿ ಕೇಂದ್ರಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಸ್ಥಾಪಿಸಲಾಗಿದೆ. ಬೆಳಗಾವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕೇಂದ್ರ ನಡೆಯುತ್ತಿದೆ’.

‘ಸ್ವಂತ ಕಟ್ಟಡ ಹೊಂದಲು ಜಮೀನು ಕೂಡ ಮಂಜೂರಾಗಿದೆ. ಅಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಸಚಿವ ಸಂಪುಟ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ರಾಜ್ಯದ ಈ ತರಬೇತಿ ಸಂಸ್ಥೆಗಳು ಪ್ರತಿ ವರ್ಷಕ್ಕೆ 4ಸಾವಿರ ಅಭ್ಯರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡುತ್ತದೆ. ಈ ಕಟ್ಟಡ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಪ್ರಾರಂಭಿಸಲಾಗುವುದು. ಅಲ್ಪಾವಧಿ ಹಾಗೂ ದೀರ್ಘಾವಧಿ ತರಬೇತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯದ ಅಭ್ಯರ್ಥಿಗಳು ತರಬೇತಿ ಪಡೆದು ಸ್ವಾವಲಂಬಿಯಾಗಿ ಜೀವನ ನಡೆಸಲು ಅನುಕೂಲವಾಗಲಿದೆ’ ಎಂದಿದ್ದಾರೆ.

‘ಯುವ ಜನತೆಯು ತಂತ್ರಜ್ಞಾನ ಅಳವಡಿಸಿಕೊಂಡು ಇಂದಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಪರಿಣತಿ ಪಡೆದ ಅಭ್ಯರ್ಥಿಗಳು ಸ್ವಾವಲಂಬಿಗಳಾಗಿ ಜೀವನ ನಡೆಸಲು ಬಹಳಷ್ಟು ಅವಕಾಶಗಳಿವೆ. ಅದಕ್ಕೆ ಪೂರಕವಾಗಿ ಉತ್ತಮ ಗುಣಮಟ್ಟದ ತರಬೇತಿಯನ್ನು ಈ ಕೇಂದ್ರವು ನೀಡಲಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು