ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಯುಗೆ 170 ಎಕರೆ ಜಾಗ ಶೀಘ್ರ ಹಸ್ತಾಂತರ: ಸಚಿವ ಜಿ.ಟಿ. ದೇವೇಗೌಡ ಭರವಸೆ

Last Updated 29 ಮೇ 2019, 13:19 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸುತ್ತಮುತ್ತಲು ಇರುವ ಅರಣ್ಯ ಇಲಾಖೆಯ 170 ಎಕರೆ ಜಾಗವನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವಂತೆ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಸದ್ಯದಲ್ಲಿಯೇ ಭೂಮಿ ಹಸ್ತಾಂತರಗೊಳ್ಳಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಭರವಸೆ ನೀಡಿದರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ನಿಲಯ, ಸಭಾಂಗಣ ಹಾಗೂ ಇತರ ಕಟ್ಟಡಗಳನ್ನು ನಿರ್ಮಿಸಲು ಜಾಗದ ಕೊರತೆ ಇದೆ. ಅದಕ್ಕಾಗಿ ವಿಶ್ವವಿದ್ಯಾಲಯದ ಸುತ್ತಮುತ್ತಲಿರುವ ಜಾಗವನ್ನು ಹಸ್ತಾಂತರಿಸಬೇಕೆಂದು ಕೇಂದ್ರ ಅರಣ್ಯ ಇಲಾಖೆಗೆ ರಾಜ್ಯ ಸರ್ಕಾರದ ವತಿಯಿಂದ ಪತ್ರ ಬರೆದಿದ್ದೇವೆ. ಸದ್ಯದಲ್ಲಿಯೇ ಮಂಜೂರಾಗಬಹುದು’ ಎಂದು ಹೇಳಿದರು.

‘ಸದ್ಯ ₹ 80 ಕೋಟಿ ಹಣವಿದೆ. ಈ ಹಣವನ್ನು ಬಳಸಿಕೊಂಡು ಗ್ರಂಥಾಲಯ, ಸಭಾಂಗಣ, ವಸತಿ ನಿಲಯಗಳನ್ನು ವಿಶ್ವವಿದ್ಯಾಲಯ ನಿರ್ಮಿಸಿಕೊಳ್ಳಬಹುದು’ ಎಂದರು.

ದತ್ತು ತೆಗೆದುಕೊಳ್ಳಿ:

‘ವಿಶ್ವವಿದ್ಯಾಲಯಗಳ ಕುಲಪತಿಗಳು ತಮ್ಮ ಜ್ಞಾನವನ್ನು ಕೇವಲ ಕೊಠಡಿಗಳಲ್ಲಿ ವ್ಯರ್ಥ ಮಾಡಬಾರದು. ತಮ್ಮ ವ್ಯಾಪ್ತಿಯ 5 ಗ್ರಾಮಗಳನ್ನು ದತ್ತು ತೆಗೆದುಕೊಂಡು, ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ, ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್‌, ‘ಇಂದಿನ ಜೀವನದಲ್ಲಿ ಬಹು ಕೌಶಲಗಳು, ಜ್ಞಾನ ಹಾಗೂ ಅರಿವಿನ ಅಗತ್ಯತೆ ಇದೆ. ನಾನು ಮೊದಲು ಭೌತಶಾಸ್ತ್ರಜ್ಞನಾಗಿದ್ದೆ. ನಂತರ ಬಾಹ್ಯಾಕಾಶ ತಂತ್ರಗಳನ್ನು ಕಲಿತೆ, ಸಿಸ್ಟಮ್‌ ನಿರ್ವಹಣೆ ಕಲಿತೆ, ಇಸ್ರೊ ಅಧ್ಯಕ್ಷ ಸ್ಥಾನ ನನ್ನನ್ನು ಹುಡುಕಿಕೊಂಡು ಬಂದಾಗ, ಕೇವಲ ವಿಜ್ಞಾನ– ತಂತ್ರಜ್ಞಾನ ಅಷ್ಟೇ ಅಲ್ಲ, ಸಾಮಾಜಿಕ– ಆರ್ಥಿಕ ದೃಷ್ಟಿಕೋನವನ್ನೂ ಕಲಿತೆ’ ಎಂದು ಹೇಳಿದರು.

‘ಸಾಮರಸ್ಯ ಕಾಯ್ದುಕೊಳ್ಳುವುದೇ ಶಿಕ್ಷಣದ ಮೂಲಸ್ವರೂಪ ಎನ್ನುವುದನ್ನು ಮರೆಯಬಾರದು. ಹಿಂದೆಂದಿಗಿಂತಲೂ ಈಗ ಸಾಮರಸ್ಯದ ಅವಶ್ಯಕತೆ ಹೆಚ್ಚಾಗಿದೆ. ವಿಜ್ಞಾನ ಹಾಗೂ ಧಾರ್ಮಿಕತೆಯ ನಡುವೆ ಸಾಮರಸ್ಯ ಮೂಡಿಸಬೇಕಾಗಿದೆ’ ಎಂದು ಹೇಳಿದರು.

ಕುಲಪತಿ ಶಿವಾನಂದ ಹೊಸಮನಿ, ಕುಲಸಚಿವ (ಮೌಲ್ಯಮಾಪನ) ರಂಗರಾಜ ವನದುರ್ಗ, ಕುಲಸಚಿವ ಸಿದ್ದು ಅಲಗೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT