ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

198ನೇ ಕಿತ್ತೂರು ಉತ್ಸವಕ್ಕೆ ವೈಭವದ ತೆರೆ, ರಾತ್ರಿಯವರೆಗೂ ಸಾಂಸ್ಕೃತಿಕ ವೈಭವ

‘ಚನ್ನಮ್ಮ ವಿಶ್ವದ ಮಹಿಳೆಯರ ಸಮಾನತೆಯ ಪ್ರತೀಕ’
ಫಾಲೋ ಮಾಡಿ
Comments

ಚನ್ನಮ್ಮನ ಕಿತ್ತೂರು (ರಾಣಿ ಚನ್ನಮ್ಮ ವೇದಿಕೆ): ‘ರಾಣಿ ಚನ್ನಮ್ಮ ದೇಶದ ಸ್ವಾತಂತ್ರ್ಯದ ಹೆಗ್ಗುರುತು ಮಾತ್ರವಲ್ಲ; ವಿಶ್ವದ ಹೆಣ್ಣುಮಕ್ಕಳ ಸಮಾನತೆಯ ಪ್ರತೀಕ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿ ಮಂಗಳವಾರ ನಡೆದ 198ನೇ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ಹೆಣ್ಣುಮಗಳು ಸಮಾಜದಿಂದ ಹೊರ, ಧರ್ಮದಿಂದ ಹೊರ ಎಂಬ ಸಂಪ್ರದಾಯಗಳು ಇದ್ದ ಕಾಲದಲ್ಲಿ ಚನ್ನಮ್ಮ ಖಡ್ಗ ಹಿಡಿದಳು. ಪ್ರಪಂಚದ ಬಹಳಷ್ಟು ರಾಜರು ಮಂತ್ರಿಗಳ ಮಾರ್ಗದರ್ಶನದಲ್ಲಿ ಆಡಳಿತ ನಾಡಸಿದವರು. ಆದರೆ, ಗುರುವಿನ ಅಣತಿಯಂತೆ ಆಡಳಿತ ನಡೆಸಿದ್ದು ಚನ್ನಮ್ಮ ಮಾತ್ರ. ಹಾಗಾಗಿ ಕಿತ್ತೂರು ಉತ್ಸವ ಕೇವಲ ಮನರಂಜನೆಯ ಕಾರ್ಯಕ್ರಮವಲ್ಲ; ಪ್ರತಿಯೊಬ್ಬರ ಅಸ್ಮಿತೆಯ ಹೆಗ್ಗುರುತು’ ಎಂದರು.

‘ಲಿಂಗಾಯತ ಮಠಾಧೀಶರು ಗುಡಿ– ಗುಂಡಾರ ಸುತ್ತವವರಲ್ಲ; ಕಾಯಕ, ದಾಸೋಹದಲ್ಲಿ ಶ್ರದ್ಧೆ ಹೊಂದಿದವರು. ರಾಜಗುರುಗಳು ಚನ್ನಮ್ಮನಿಗೆ ಇದೇ ಸಂದೇಶ ನೀಡಿದ ಕಾರಣ ಆಕೆ ಶರಣೆಯ ರೂಪ ಪಡೆದಳು. ಲಿಂಗಪೂಜೆ, ಶ್ರದ್ಧೆ, ಪ್ರಜಾಪರಿಪಾಲನೆ ಲಿಂಗಾಯತ ರಾಜರ ಹೆಗ್ಗುರುತುಗಳಾಗಿವೆ’ ಎಂದು ಅಭಿಪ್ರಾಯ ಪಟ್ಟರು.

ಸಾನ್ನಿಧ್ಯ ವಹಿಸಿದ್ದ ಕಾದರವಳ್ಳಿಯ ಪಾಲಾಕ್ಷ ಶಿವಯೋಗೀಶ್ವರ ಸ್ವಾಮೀಜಿ, ‘ಕಿತ್ತೂರು ಸಂಸ್ಥಾನ ಚಿಕ್ಕದಾಗಿದ್ದರೂ ಅದು ಸಾಧಿಸಿದ ಐತಿಹಾಸಿಕ ಕೀರ್ತಿ ದೊಡ್ಡದು’ ಎಂದು ಬಣ್ಣಿಸಿದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ನಾನು ಹಠ ಹಿಡಿದು ಉತ್ಸವವನ್ನು ರಾಜ್ಯಮಟ್ಟಕ್ಕೆ ಒಯ್ದಿದ್ದೇನೆ. ಈ ಹಿಂದಿನ ಕ್ಷೇತ್ರದ ಎಲ್ಲ ಶಾಸಕರ ಪ್ರಯತ್ನದ ಫಲವಾಗಿ ಇದು ನನಸಾಗಿದೆ. ಉತ್ಸವದ ಯಶಸ್ಸಿಗೆ ಪೌರಕಾರ್ಮಿಕರಿಂದ ಹಿಡಿದು ಮುಖ್ಯಮಂತ್ರಿವರೆಗೆ ಎಲ್ಲರೂ ಶ್ರಮ ಹಾಕಿದ್ದಾರೆ, ಈ ಋಣ ಮರೆಯುವುದಿಲ್ಲ’ ಎಂದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿ, ‘ವಿಶ್ವದ ಬೇರೆಬೇರೆ ಭಾಗಗಳ ಜನರೂ ಈ ಹಬ್ಬ ವೀಕ್ಷಿಸುವಂತೆ ಲೈವ್‌ ಪ್ರಸಾರ ಮಾಡಿದ್ದೇವೆ. ಬೆಳಗಾವಿ, ಬೈಲಹೊಂಗಲ, ಕಾಕತಿಗಳಲ್ಲಿ ಬೃಹತ್‌ ಎಲ್‌ಇಡಿ ಪರದೆ ಮೂಲಕ ನೇರೆಪ್ರಸಾರ ಮಾಡಿದ್ದೇವೆ’ ಎಂದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಚನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳೆಗಡ್ಡಿ, ಡಾ.ಬಸವರಾಜ ಪರವಣ್ಣರ, ಚನ್ನಬಸಪ್ಪ ಮೊಕಾಶಿ, ಅಪ್ಪಣ್ಣ ಪಾಗಾದ ಇದ್ದರು.

ಕಿತ್ತೂರು ತಾಲ್ಲೂಕಿನ ಹಲವು ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ನಂತರ ನಡೆದ ರಘು ದೀಕ್ಷಿತ್‌ ಹಾಗೂ ಸಂಗಡಿಗರ ಸಂಗೀತ ಸಂಜೆ ಪ್ರೇಕ್ಷಕರನ್ನು ರಂಜಿಸಿತು. ತಡರಾತ್ರಿವರೆಗೂ ಸಂಗೀತ ರಸದೌತಣ ಮೂಲಕ ಉತ್ಸವಕ್ಕೆ ವೈಭವದ ತೆರೆ ಎಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT