ಬೆಳಗಾವಿ: ಒಂದೇ ದಿನ ಎರಡು ಪರೀಕ್ಷೆ ನಿಗದಿಯಾದ ಕಾರಣ, ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(ಆರ್‌ಸಿಯು) ಬಿ.ಎ 4ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಆರ್‌ಸಿಯು ವ್ಯಾಪ್ತಿಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 421 ಪದವಿ ಕಾಲೇಜುಗಳಿವೆ. ಬಿ.ಎ 4ನೇ ಸೆಮಿಸ್ಟರ್‌ನಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಅವರಿಗೆ ಸೆ.29, 30ರಂದು ಐಚ್ಛಿಕ ಕನ್ನಡ ವಿಷಯದ ಪರೀಕ್ಷೆ ನಿಗದಿಪಡಿಸಲಾಗಿದೆ.
ಆದರೆ, ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಕಡ್ಡಾಯ ಕನ್ನಡ ವಿಷಯದ ಸ್ಪರ್ಧಾತ್ಮಕ ಪರೀಕ್ಷೆಯೂ ಸೆ.29ರಂದೇ ಇದೆ. ಆರ್‌ಸಿಯುನ ಹಲವು ವಿದ್ಯಾರ್ಥಿಗಳು ಆ ಪರೀಕ್ಷೆಗೂ ನೋಂದಣಿ ಮಾಡಿಕೊಂಡಿದ್ದಾರೆ.
ಅವಕಾಶ ಕೈತಪ್ಪುತ್ತದೆ: ‘ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಯ ಪರೀಕ್ಷೆಗೆ ₹750 ಶುಲ್ಕ ಭರಿಸಿದ್ದೇನೆ. ಎರಡೂ ಪರೀಕ್ಷೆ ಒಂದೇ ದಿನ ನಿಗದಿಯಾದ ಹಿನ್ನೆಲೆಯಲ್ಲಿ ಇಕ್ಕಟ್ಟಿಗೆ ಸಿಲುಕಿದ್ದೇನೆ. ಹಿಂದಿನ ವೇಳಾಪಟ್ಟಿ ಪ್ರಕಾರ, ಸೆ.20, 21ರಂದು ಐಚ್ಛಿಕ ಕನ್ನಡ ವಿಷಯದ ಪರೀಕ್ಷೆ ನಡೆಯಬೇಕಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಸೆ.29, 30ಕ್ಕೆ ಅದನ್ನು ಮುಂದೂಡಿದ್ದರಿಂದ ಸಮಸ್ಯೆಯಾಗಿದೆ. ಒಂದು ಅವಕಾಶ ಕೈತಪ್ಪುತ್ತದೆ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.
‘ಗ್ರಾಮ ಲೆಕ್ಕಾಧಿಕಾರಿ ಹುದ್ದೆ ಸ್ಪರ್ಧಾತ್ಮಕ ಪರೀಕ್ಷೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ಇದೆ. ಐಚ್ಛಿಕ ಕನ್ನಡ ವಿಷಯದ ಪರೀಕ್ಷೆ ಮಧ್ಯಾಹ್ನ 2ಕ್ಕೆ ಆರಂಭವಾಗುತ್ತದೆ. ಒಂದು ಪರೀಕ್ಷೆ ಮುಗಿದ ಸಮಯದಿಂದ ಮತ್ತೊಂದು ಪರೀಕ್ಷೆಗೆ ಒಂದೂವರೆ ತಾಸು ಸಮಯವಿದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆ ಯಾವ ಕೇಂದ್ರದಲ್ಲಿ ನಡೆಯುತ್ತದೆ ಎಂದು ಇನ್ನೂ ಗೊತ್ತಾಗಿಲ್ಲ. ಬೆಳಗಾವಿಯಲ್ಲಿ ಮಾತ್ರ ಕೇಂದ್ರ ತೆರೆದರೆ, ಇಲ್ಲಿ ಪರೀಕ್ಷೆ ಬರೆದು ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿನ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ’ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದರು.
‘ಈಗ ಸರ್ಕಾರಿ ಹುದ್ದೆಗಳಿಗೆ ಮೊದಲೇ ನೇಮಕಾತಿ ನಡೆಯುತ್ತಿಲ್ಲ. ಈಗ ಪಿಯು ವಿದ್ಯಾರ್ಹತೆ ಮೇಲೆ ನಡೆಯುತ್ತಿರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿಗೆ ಎಲ್ಲ ರೀತಿಯಿಂದ ತಯಾರಿ ಮಾಡಿಕೊಂಡಿದ್ದೇವೆ. ಹಾಗಾಗಿ ಪದವಿ ಪದವಿ ಪರೀಕ್ಷೆ ಮುಂದೂಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.