ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ರಾಡಿಮಯ ರಸ್ತೆ, ಜನರು ಹೈರಾಣ

ಎರಡು ವರ್ಷವಾದರೂ ಮುಗಿಯದ ನಿರ್ಮಾಣ ಕಾಮಗಾರಿ
Last Updated 14 ಜುಲೈ 2021, 19:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಆ ರಸ್ತೆಯನ್ನು ದೂರದಿಂದ ನೋಡಿದರೆ ಅಲ್ಲೇನೋ ಗಣಿಗಾರಿಕೆ ನಡೆದಿದೆಯೇನೋ ಎಂದೆನಿಸುವಂತೆ ಆಳೆತ್ತರಕ್ಕೆ ಅಗೆಯಲಾಗಿದೆ. ಕೆಲವರು ಮನೆಯಿಂದ ರಸ್ತೆಗೆ ಹೋಗಲು ಮತ್ತು ರಸ್ತೆಯಿಂದ ಮನೆಗೆ ಬರಲು ಏಣಿ ಬಳಸುವ ತಾಪತ್ರಯ ಎದುರಾಗಿದೆ. ಮಳೆಯಾಗಿರುವುದರಿಂದ ರಾಡಿಯಮ ರಸ್ತೆಯಲ್ಲಿ ಸಿಲುಕಿಕೊಳ್ಳುವ ವಾಹನವನ್ನು ಮತ್ತೊಂದು ವಾಹನ ಬಳಸಿ ಹೊರಗೆಳೆಯಬೇಕು!

– ಕಿತ್ತೂರಿನಿಂದ ಕುಲವಳ್ಳಿ ಮಾರ್ಗವಾಗಿ ಅಳ್ನಾವರಕ್ಕೆ ತೆರಳುವ ಮುಖ್ಯರಸ್ತೆಯ ದುಃಸ್ಥಿತಿ ಇದು. ‘ಅಭಿವೃದ್ಧಿ ಹೆಸರಲ್ಲಿ ಸಾರ್ವಜನಿಕರಿಗೆ ಹಲವು ದಿನಗಳಿಂದ ತೊಂದರೆ ಆಗುತ್ತಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಎರಡು ವರ್ಷಗಳಿಂದ ಕಾಮಗಾರಿ ಸಾಗಿದೆ. ಮುಗಿಯುವ ಹಂತಕ್ಕೆ ಇನ್ನೂ ಬರುತ್ತಿಲ್ಲ. ಮಳೆಗಾಲದಲ್ಲಿ ಕತ್ತಿದಡ್ಡಿ, ದಿಂಡಲಕೊಪ್ಪ ಸೇರಿದಂತೆ ಕೆಲವು ಗ್ರಾಮಗಳ ಜನತೆಗೆ ತುಂಬಾ ತೊಂದರೆಯಾಗಿದೆ’ ಎಂದು ಹೇಳಿದರು.

ಸಂಚಾರ ಸರ್ಕಸ್: ‘ಅಪಘಾತ ತಪ್ಪಿಸಲು, ರಸ್ತೆ ದಿಬ್ಬ ಅಗೆಯಲಾಗಿದೆ. ಹೆಚ್ಚು ತಿರುವು ಹೊಂದಿರುವ ರಸ್ತೆಯ ಬದಲಾವಣೆ ಮಾಡಲು ಕೆಲವು ಕಡೆ ಆಳೆತ್ತರದಲ್ಲಿ ರಸ್ತೆ ಅಗೆದು ಹಾಕಲಾಗಿದೆ. ರಸ್ತೆ ವಿಸ್ತರಣೆಯೂ ನಡೆದಿದೆ. ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಮಹಾಂತೇಶ ಎಮ್ಮಿ ಹಾಗೂ ನಿವಾಸಿ ಹುಸೇನ ಮಕಾಂದಾರ ಅಳಲು ತೋಡಿಕೊಂಡರು.

‘‘ಕೆಲವು ವಾಹನಗಳು ಇದೇ ಮಾರ್ಗವಾಗಿ ಹಳಿಯಾಳ, ದಾಂಡೇಲಿ, ಗೋವಾಕ್ಕೂ ತೆರಳುತ್ತವೆ. ಈ ರಸ್ತೆಗೆ ಇಳಿದರೆ ಲಾರಿ ಚಕ್ರಗಳ ಅಧಿಕ ಭಾಗ ಕೆಸರಿನಲ್ಲಿ ಹೂತು ಹೋಗುತ್ತಿವೆ. ಈ ರೀತಿ ತಾಪತ್ರಯಕ್ಕೊಳಗಾದ ಲಾರಿ ಚಾಲಕರು ವಾಹನವನ್ನು ಹೊರಗೆಳೆಯುವುದಕ್ಕಾಗಿ ಅಲ್ಲಿನ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕರ ಮೊರೆ ಹೋಗುತ್ತಿದ್ದಾರೆ. ಮುಂದೊಂದು ಟ್ರ್ಯಾಕ್ಟರ್ ಹಚ್ಚಿ ಅದನ್ನು ಹೊರಕ್ಕೆ ತೆಗೆಯುವ ದುಃಸ್ಥಿತಿ ಬಂದೊದಗಿದೆ’ ಎಂದು ಹೇಳಿದರು.

‘ಬೇಸಿಗೆ ಕಾಲದಲ್ಲಿ ಕಾಮಗಾರಿ ನಡೆಸಬೇಕಿತ್ತು. ರಸ್ತೆ ಅಗೆದದ್ದರಿಂದ ಮಟ್ಟಿಮಣ್ಣಿನಲ್ಲಿ ದ್ವಿಚಕ್ರವಾಹನ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡ ಉದಾಹರಣೆಗಳು ಸಾಕಷ್ಟಿವೆ. ಅಭಿವೃದ್ಧಿಪಡಿಸುತ್ತೇವೆ ಎಂದು ತೀರಾ ಈ ಮಟ್ಟದಲ್ಲಿ ಜನರಿಗೆ ತೊಂದರೆ ಕೊಡಬಾರದಿತ್ತು’ ಎಂದು ಅಲ್ಲಿನ ನಿವಾಸಿಗಳ ಬವಣೆಯನ್ನು ತಿಳಿಸಿದರು.

**
ಏಕಕಾಲಕ್ಕೆ ಅಗೆಯಬಾರದಿತ್ತು
ಏಕಕಾಲಕ್ಕೆ ರಸ್ತೆಯನ್ನು ಬಹಳ ಉದ್ದದವರೆಗೂ ಅಗೆಯಬಾರದಿತ್ತು. ಅರ್ಧ ಅಥವಾ ಒಂದು ಕಿ.ಮೀ. ರಸ್ತೆ ವಿಭಾಗ ಮಾಡಿಕೊಂಡು ಕಾಮಗಾರಿ ನಡೆಸಿದ್ದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರಲಿಲ್ಲ.
–ಮಹಾಂತೇಶ ಎಮ್ಮಿ, ಗ್ರಾಮ ಪಂಚಾಯ್ತಿ ಸದಸ್ಯ

**
ಡಿಸೆಂಬರ್‌ಗೆ ಮುಗಿಸುತ್ತೇವೆ
ಅಲ್ಲಿ ಅಪಘಾತಗಳನ್ನು ತಪ್ಪಿಸಲು ರಸ್ತೆಯನ್ನು ನೇರವಾಗಿ ನಿರ್ಮಿಸಲಾಗುತ್ತಿದೆ. ಡಿಸೆಂಬರ್ ಒಳಗೆ ಕಾಮಗಾರಿ ಮುಗಿಸುತ್ತಾರೆ. ಕೋವಿಡ್‌ನಿಂದಾಗಿ ಸ್ವಲ್ಪ ವಿಳಂಬವಾಗಿದೆ.
–ಪ್ರವೀಣ ಹುಲಜಿ, ಎಇಇ, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT