ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020| ರಾಜಕೀಯವಾಗಿ ಶಕ್ತಿ ತುಂಬಿದ ವರ್ಷ

ಹಲವರಿಗೆ ಮಹತ್ವದ ಹುದ್ದೆಗಳು; ರಾಜಕೀಯ ಚಟುವಟಿಕೆ
Last Updated 28 ಡಿಸೆಂಬರ್ 2020, 7:16 IST
ಅಕ್ಷರ ಗಾತ್ರ

ಬೆಳಗಾವಿ: 2020ನೇ ವರ್ಷವು ಜಿಲ್ಲೆಗೆ ರಾಜಕೀಯವಾಗಿ ಶಕ್ತಿ ತುಂಬಿತು.

ಇಲ್ಲಿನ ಹಲವು ನಾಯಕರು ಪ್ರಮುಖ ಹುದ್ದೆಗಳನ್ನು ಪಡೆದರು. ಕೆಲವು ಅಚ್ಚರಿಯ ಆಯ್ಕೆಗಳೂ ನಡೆದವು.

ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ನಾಲ್ವರಿಗೆ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳು ಸಿಕ್ಕವು. ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ ಸಚಿವ ಗಾದಿಗೇರಿದರು. ಆನಂದ ಮಾಮನಿ ವಿಧಾನಸಭೆ ಉಪಾಧ್ಯಕ್ಷರಾದರೆ, ಮಹಾಂತೇಶ ಕವಟಗಿಮಠ ವಿಧಾನಪರಿಷತ್ ಮುಖ್ಯಸಚೇತಕ (ಸರ್ಕಾರದ)ರಾದರು. ಬಿಜೆಪಿಯ ಹಲವು ಶಾಸಕರು ಹಾಗೂ ಮುಖಂಡರಿಗೆ ನಿಗಮ–ಮಂಡಳಿಗಳಲ್ಲಿ ಸ್ಥಾನಗಳು ಸಿಕ್ಕವು. ಬಿಜೆಪಿ ಬಲ ಹೆಚ್ಚಿದ ವಸಂತವಿದು.

ಬಿಜೆಪಿ ಕಾರ್ಯಕರ್ತ ಈರಣ್ಣ ಕಡಾಡಿ ಅವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ದೊರೆತರೆ, ಪ್ರೊ.ಸಾಬಣ್ಣ ತಳವಾರ ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡರು.

ಸತೀಶ ಜಾರಕಿಹೊಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ, ಲಕ್ಷ್ಮಿ ಹೆಬ್ಬಾಳಕರ ಹಾಗೂ ಡಾ.ಅಂಜಲಿ ನಿಂಬಾಳ್ಕರ್‌ ವಕ್ತಾರರಾದರು. ಕಾಂಗ್ರೆಸ್‌ ಭವನ ಉದ್ಘಾಟನೆಗೊಂಡಿತು.

ಗ್ರಾಮ ಪಂಚಾಯಿತಿ ಚುನಾವಣೆ 2 ಹಂತಗಳಲ್ಲಿ ನಡೆಯಿತು. ರಾಜಕೀಯ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರಿಂದ ಜಿದ್ದಾಜಿದ್ದಿ ಕಂಡುಬಂತು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿಯ ಬಣಗಳು ಒಂದಾಗಿದ್ದು ಮತ್ತು ಬಹುತೇಕ ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಗೆ ಶ್ರಮಿಸಿದ್ದು ವಿಶೇಷ. ಮಹಿಳೆಯೊಬ್ಬರು (ಡಾ.ಅಂಜಲಿ ನಿಂಬಾಳ್ಕರ್) ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದು ದಾಖಲೆ. ರಮೇಶ ಕತ್ತಿ (ಅಧ್ಯಕ್ಷ) ಹಾಗೂ ಸುಭಾಷ ಢವಳೇಶ್ವರ (ಉಪಾಧ್ಯಕ್ಷ) ಅವಿರೋಧವಾಗಿ ಪುನರಾಯ್ಕೆ.

ಬಿಜೆಪಿ ಸಮನ್ವಯ ಸಮಿತಿ ಸಭೆ ಹಾಗೂ ರಾಜ್ಯ ಕಾರ್ಯಕಾರಿಣಿ ನಡೆಯಿತು. ಆ ಪಕ್ಷದ ರಾಜ್ಯದ ನೂತನ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ ಬೆಳಗಾವಿಯಿಂದಲೇ ಆರಂಭವಾಗಿದ್ದು ವಿಶೇಷ.

ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗುವ ಭಾಗ್ಯ ಸಿಕ್ಕಿತು. ಯರಗಟ್ಟಿ ತಾಲ್ಲೂಕು ಘೋಷಣೆಯಾಯಿತು. ಸುವರ್ಣ ವಿಧಾನಸೌಧಕ್ಕೆ ಜಿಲ್ಲಾ ಮಟ್ಟದ ಕೆಲವು ಕಚೇರಿಗಳು ಸ್ಥಳಾಂತರಗೊಂಡವು. ನಗರಪಾಲಿಕೆ ಚುನಾವಣೆ, ವಿಧಾನಮಂಡಲ ಅಧಿವೇಶನ ನಡೆಯಲಿಲ್ಲ.

ಆ.1ರಂದು ನೂತನ ಕಿತ್ತೂರು ತಾ.ಪಂ. ಪ್ರಥಮ ಅಧ್ಯಕ್ಷೆಯಾಗಿ ಚನ್ನಮ್ಮ ಹೊಸಮನಿ, ಉಪಾಧ್ಯಕ್ಷೆಯಾಗಿ ಹೇಮಾವತಿ ಬೇಕವಾಡಕರ ಅವಿರೋಧ ಆಯ್ಕೆಯಾದರು. ಎಂ. ಕೆ. ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ನಾಸೀರ್ ಬಾಗವಾನ್, ಉಪಾಧ್ಯಕ್ಷೆಯಾಗಿ ಲಕ್ಷ್ಮಿ ಅರಳಿಕಟ್ಟಿ ಆಯ್ಕೆಯಾದರು. ಕಿತ್ತೂರಿನ ಹಣಮಂತ ಕೊಟಬಾಗಿ ರಾಜ್ಯ ಮದ್ಯಪಾನ ಮಂಡಳಿ ಅಧ್ಯಕ್ಷರಾಗಿ ನೇಮಕವಾದರು.

ಕಾಗವಾಡ, ಯರಗಟ್ಟಿ, ಮಚ್ಚೆ, ಪೀರನವಾಡಿ ಮತ್ತು ಧೂಪದಾಳ, ಅಂಕಲಗಿ ಹಾಗೂ ಅಕ್ಕತಂಗೇರಹಾಳ ಗ್ರಾ.ಪಂ.ಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೆ.

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ 2ನೇ ಪುತ್ರಿ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ ಸೊಸೆ ಶ್ರದ್ಧಾ ಶೆಟ್ಟರ್‌ ಡಿ. 25ರಂದು ಮೊದಲ ಬಾರಿಗೆ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗಿ.

ಸಾಂಸ್ಕೃತಿಕ ಚಟುವಟಿಕೆಗಳು

ಕೋವಿಡ್‌ನಿಂದಾಗಿ ರಾಜ್ಯೋತ್ಸವ, ಉತ್ಸವಗಳು, ದಾರ್ಶನಿಕರು–ಮಹಾತ್ಮರ ಜಯಂತಿಗಳು ಸರಳವಾಗಿ ನಡೆದವು.

* ಜ.5: ಮಾನವ‌ ಬಂಧುತ್ವ ವೇದಿಕೆಯಿಂದ ಸಾವಿತ್ರಿಬಾಯಿ ಫುಲೆ ‌ಜಯಂತಿ, ಆದರ್ಶ ‌ಶಿಕ್ಷಕಿ ಪ್ರಶಸ್ತಿ ಪ್ರದಾನ.

* ಜ. 8–10: ಅಥಣಿಯ ಮೋಟಗಿ ಮಠದಲ್ಲಿ ಲಿಂ.ಚನ್ನಬಸವ ಶಿವಯೋಗಿಗಳ 95ನೇ ಸ್ಮರಣೋತ್ಸವ. ‘ಶರಣ ಸಂಸ್ಕೃತಿ ಉತ್ಸವ’ ನಡೆಯಿತು. ಬಸವಲಿಂಗ ಪಟ್ಟದೇವರು ಮತ್ತು ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ ಅವರಿಗೆ ‘ಬಸವಭೂಷಣ’ ಪ್ರಶಸ್ತಿ ಪ್ರದಾನ.

* ಜ.20: ಬೆಳಗಾವಿಯ ಸಂಗೀತ ಕಲಾಮಂಚ್‌ನಿಂದ ಕುಮಾರಗಂಧರ್ವ ಸ್ಮೃತಿ ಸಂಗೀತ ಸಮ್ಮೇಳನ, ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲರಾವ ಯಾಳಗಿ ಅವರಿಗೆ ‘ಬೆಳಗಾವಿ ಭೂಷಣ ಪ್ರಶಸ್ತಿ’ ಪ್ರದಾನ.

* ಫೆ.1: ಗೋಕಾಕದ ಶೂನ್ಯ ಸಂಪಾದನ ಮಠದಿಂದ ಲಿಂ.ಬಸವ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ. ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ‘ಕಾಯಕ ಶ್ರೀ’ ಪ್ರಶಸ್ತಿಗೆ ಭಾಜನ.

* ಜೂನ್ 23: ಪ್ರೊ.ಸಿದ್ದಣ್ಣ ಉತ್ನಾಳ ಅವರಿಗೆ 2019–20ನೇ ಸಾಲಿನ ‘ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ’ ಪ್ರಶಸ್ತಿ.

* ಬಯಲಾಟ ಕಲಾವಿದೆ ಕೆಂಪವ್ವ ಹರಿಜನ, ಅಶೋಕ ಶೆಟ್ಟರ್‌ ಹಾಗೂ ಅನಂತ ತೇರದಾಳ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ.

* ಡಿ. 27: ಬಸವರಾಜ ಕಟ್ಟೀಮನಿ ಪ್ರತಿಷ್ಠಾನದಿಂದ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸರಜೂ ಕಾಟ್ಕರ್‌ ಹಾಗೂ ಯುವ ಸಾಹಿತ್ಯ ಪುರಸ್ಕಾರವನ್ನು ಕಪಿಲ ಪಿ. ಹುಮನಾಬಾದೆ ಮತ್ತು ಶಶಿ ತರೀಕೆರೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT