ಬೆಳಗಾವಿ; 2.07 ಲಕ್ಷ ಅನಕ್ಷರಸ್ಥರ ಪತ್ತೆ; ಅಕ್ಷರಾಭ್ಯಾಸ ನೀಡಲು ಕಾರ್ಯಕ್ರಮ

7

ಬೆಳಗಾವಿ; 2.07 ಲಕ್ಷ ಅನಕ್ಷರಸ್ಥರ ಪತ್ತೆ; ಅಕ್ಷರಾಭ್ಯಾಸ ನೀಡಲು ಕಾರ್ಯಕ್ರಮ

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 2,07,145 ಅನಕ್ಷರಸ್ಥರನ್ನು ಗುರುತಿಸಲಾಗಿದೆ. ಇವರಿಗೆ ಅಕ್ಷರ ಜ್ಞಾನ ನೀಡಲು ಶಿಕ್ಷಣ ಇಲಾಖೆಯ ವಯಸ್ಕರ ವಿಭಾಗವು ಮುಂದಾಗಿದೆ. ಸೇವಾ ಸಂಸ್ಥೆಗಳ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿರ್ಧರಿಸಿದೆ.

ಇದೇ ಮೊದಲ ಬಾರಿಗೆ ಖಾಸಗಿ ಸೇವಾ ಸಂಸ್ಥೆಗಳ ಜೊತೆಗೂಡಿರುವ ಇಲಾಖೆಯು, ಇದಕ್ಕಾಗಿ ಗೌರವ ಧನ ನೀಡಲೂ ಮುಂದಾಗಿದೆ. ಹಿಂದೆ ಸಾಕ್ಷರತಾ ಆಂದೋಲನ ಹಮ್ಮಿಕೊಂಡಿದ್ದಾಗ ಸ್ವಯಂ ಸೇವಕರಿಗೆ ಯಾವುದೇ ರೀತಿಯ ಗೌರವ ಧನ ನೀಡಿರಲಿಲ್ಲ. ಈಗ, ಎನ್‌ಜಿಒಗೆ ಹಾಗೂ ಪ್ರತಿಯೊಬ್ಬ ಬೋಧಕರಿಗೆ ಗೌರವ ಧನ ನೀಡಲಿದೆ.

ಬೋಧಕರನ್ನು ಪೂರೈಸುವ ಎನ್‌ಜಿಒಗಳಿಗೆ ತಲಾ ಒಬ್ಬ ಬೋಧಕರಿಗೆ ₹ 10ರಂತೆ ಗೌರವ ಧನ ನೀಡಲಾಗುತ್ತದೆ. ಒಬ್ಬ ವ್ಯಕ್ತಿಗೆ ಪಾಠ ಬೋಧಿಸಿದರೆ ₹ 90ರಂತೆ ಬೋಧಕರಿಗೆ ನೀಡಲಾಗುತ್ತದೆ. ಇದೇ ತಿಂಗಳ ಅಂತ್ಯದೊಳಗೆ ಪಾಠ ಪ್ರವಚನಗಳು ಆರಂಭಗೊಳ್ಳಲಿವೆ.

3,256 ಗುರಿ:

ಅನಕ್ಷರಸ್ಥರ ಪೈಕಿ ಈ ವರ್ಷ ಅಂದರೆ ಮಾರ್ಚ್‌ ಒಳಗೆ ಮೊದಲ ಹಂತದಲ್ಲಿ 3,256 ಜನರಿಗೆ ಅಕ್ಷರಾಭ್ಯಾಸ ಕಲಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಯಾವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯವರು ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ, ಅಂತಹ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಬೋಧಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಯಸ್ಕರ ಶಿಕ್ಷಣಾಧಿಕಾರಿ ಆರ್‌.ಪಿ. ಜುಟ್ಟನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಆಯಾ ಪ್ರದೇಶಗಳಲ್ಲಿ ವಾಸಿಸುವಂತಹ, ಓದು ಬರಹ ಬರುವಂತಹವರನ್ನು ಎನ್‌ಜಿಒಗಳು ಬೋಧಕರನ್ನಾಗಿ ನೇಮಿಸಿಕೊಳ್ಳಲಿವೆ. ತಲಾ ಹತ್ತು ಜನ ಅನಕ್ಷಸ್ಥರಿಗೆ ಒಬ್ಬ ಬೋಧಕರಿಂದ ಪಾಠ ಮಾಡಿಸಲಾಗುವುದು. ಪ್ರತಿದಿನ ಎರಡು ಗಂಟೆಗಳವರೆಗೆ ಪಾಠ ಪ್ರವಚನಗಳು ನಡೆಯುತ್ತವೆ. ಇದಕ್ಕೆ ಬೇಕಾಗುವ ಕಲಿಕಾ ಸಾಮಗ್ರಿಗಳನ್ನು ಇಲಾಖೆಯಿಂದ ಪೂರೈಕೆ ಮಾಡಲಾಗುವುದು ಎಂದು ಹೇಳಿದರು.

ಇಂದಿನ ಯುವಪೀಳಿಗೆ ಸಾಮಾನ್ಯವಾಗಿ ಶಿಕ್ಷಣ ಪಡೆದಿದ್ದಾರೆ. ಈಗ ಅನಕ್ಷರಸ್ಥರಾಗಿ ಉಳಿದಿರುವವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವವರು, ಕಾರ್ಮಿಕರು ಹಾಗೂ ಮಧ್ಯವಯಸ್ಕರು ಇದ್ದಾರೆ. ಇದರಲ್ಲಿ ಹಲವರು ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿ ಕೊಂಡಿದ್ದಾರೆ. ಇವರು ಇಚ್ಛಿಸಿದ ಸಮಯದಲ್ಲಿ ಬೋಧಕರು ಪಾಠ ಮಾಡುತ್ತಾರೆ. ಬೆಳಿಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ಸಮಯ. ಯಾವ ಸಮಯದಲ್ಲಿ ಅವರು ಲಭ್ಯವಾಗಿರುತ್ತಾರೆಯೋ ಅಂತಹ ಸಮಯದಲ್ಲಿ ಪಾಠ ಮಾಡಲಿದ್ದಾರೆ. ಫೆಬ್ರುವರಿಯವರಿಗೆ ಪಾಠ ಪ್ರವಚನ ಮಾಡಲಾಗುವುದು. ಮಾರ್ಚ್‌ನಲ್ಲಿ ಇವರ ಮೌಲ್ಯಮಾಪನ ಮಾಡಿ, ಸಾಕ್ಷರತೆ ಘೋಷಣೆಯಾಗಲಿದೆ.

ಸಾಕ್ಷರತೆ ವೃದ್ಧಿ;

2011ರಲ್ಲಿ ಕೈಗೊಂಡ ಜನಗಣತಿ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 30,52,032 (ಶೇ 73.48) ಜನರು ಅಕ್ಷರಸ್ಥರಿದ್ದಾರೆ. ಇದರಲ್ಲಿ ಪುರುಷರ ಸಂಖ್ಯೆ 17,25,548 (ಶೇ 82.20) ರಷ್ಟಿದ್ದರೆ, ಮಹಿಳೆಯರ ಸಂಖ್ಯೆ 13,26,484 (ಶೇ 64.58) ರಷ್ಟಿದೆ. ಇದು ಹಿಂದಿನ ದಶಕಕ್ಕೆ ಹೋಲಿಸಿದರೆ ಶೇ 13.4ರ ದರದಲ್ಲಿ ಸಾಕ್ಷರತೆ ವೃದ್ಧಿಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !