4
ಸೊಳ್ಳೆಗಳ ನಿಯಂತ್ರಣಕ್ಕೆ ಸಲಹೆ

6 ತಿಂಗಳಲ್ಲಿ 23 ಡೆಂಗಿ ಪ್ರಕರಣಗಳು

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಜೂನ್‌ವರೆಗೆ 23 ಡೆಂಗಿ ಪ್ರಕರಣಗಳು ಪತ್ತೆಯಾಗಿರುವುದು ವರದಿಯಾಗಿದೆ.

ನಗರದಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬಂದಿವೆ. ಅಥಣಿ, ಹುಕ್ಕೇರಿ ಹಾಗೂ ಖಾನಾಪೂರ ತಾಲ್ಲೂಕುಗಳಲ್ಲಿ ಈ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಎಸ್‌. ಪಲ್ಲೇದ ತಿಳಿಸಿದ್ದಾರೆ. ನಗರದಲ್ಲಿ 6, ಚಿಕ್ಕೋಡಿ ಹಾಗೂ ಸವದತ್ತಿಯಲ್ಲಿ ತಲಾ 5, ಬೆಳಗಾವಿ ಗ್ರಾಮೀಣದಲ್ಲಿ 3, ಬೈಲಹೊಂಗಲ ಮತ್ತು ರಾಮದುರ್ಗದಲ್ಲಿ ತಲಾ 2, ಗೋಕಾಕ ಮತ್ತು ರಾಯಬಾಗದಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ. 2017ರಲ್ಲಿ ಜಿಲ್ಲೆಯಲ್ಲಿ 51 ಪ್ರಕರಣಗಳು ವರದಿಯಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ.

ಜನವರಿಯಿಂದ ಜೂನ್‌ವರೆಗೆ 34 ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ ಹಾಗೂ ರಾಮದುರ್ಗ ತಾಲ್ಲೂಕುಗಳಲ್ಲಿ ವರದಿಯಾಗಿಲ್ಲ. ನಗರವೊಂದರಲ್ಲೇ 20, ರಾಯಬಾಗದಲ್ಲಿ 8, ಅಥಣಿಯಲ್ಲಿ 3, ಬೈಲಹೊಂಗಲ, ಬೆಳಗಾವಿ ಗ್ರಾಮೀಣ ಹಾಗೂ ಸವದತ್ತಿಯಲ್ಲಿ ತಲಾ ಒಂದು ಪ್ರಕರಣಗಳು ಕಂಡುಬಂದಿವೆ. ಹೋದ ವರ್ಷ 11 ಪ್ರಕರಣಗಳು ವರದಿಯಾಗಿದ್ದವು ಎಂದು ಹೇಳಿದ್ದಾರೆ.

ಒಂದೇ ಲಕ್ಷಣಗಳು:

ಡೆಂಗಿ ಜ್ವರ ವೈರಸ್‌ನಿಂದ ಹರಡುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ.

ರೋಗ ಲಕ್ಷಣ: ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ.

ಚಿಕೂನ್‌ಗುನ್ಯಾ ಮತ್ತು ಡೆಂಗಿಯು ಸಾಧಾರಣವಾಗಿ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತವೆ. ಜ್ವರ ಬರುವುದು, ಕಣ್ಣು ಕೆಂಪಾಗುವುದು, ಕೈ–ಕಾಲಿನಲ್ಲಿ ನೋವು, ಕೀಲು ಸಂದುಗಳಲ್ಲಿ ಉಂಟಾಗುವ ನೋವಿನಿಂದ ಕೈ ಕಾಲುಗಳನ್ನು ಅಲುಗಾಡಿಸುವುದಕ್ಕೆ ಕಷ್ಟವಾಗುತ್ತದೆ. ಇವೆಲ್ಲ ಲಕ್ಷಣಗಳೊಂದಿಗೆ ಸುಸ್ತು ಉಂಟಾಗುತ್ತದೆ.

ನಿಯಂತ್ರಣಕ್ಕೆ:

ಸೊಳ್ಳೆಗಳ ನಿಯಂತ್ರಣದಿಂದ ಈ ರೋಗಗಳನ್ನು ಹತೋಟಿಗೆ ತರಬಹುದು. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಚಪ್ಪಡಿಯಿಂದ ಕಟ್ಟಿದ ತೊಟ್ಟಿ, ಡ್ರಮ್‌, ಮಣ್ಣಿನ ಮಡಿಕೆ, ಉಪಯೋಗಿಸಿದ ಒರಳುಕಲ್ಲು ಮೊದಲಾದ ಕಡೆಗಳಲ್ಲಿ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ, ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ಡೆಂಗಿ ಬಂದಾಗ ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳ ಕೊರತೆಯಾಗುವುದೆಂಬ ವದಂತಿ ಜನಸಾಮಾನ್ಯರಲ್ಲಿ ಹರಡಿದೆ. ಆದರೆ, ಪ್ಲೇಟ್‌ಲೆಟ್ ಕಡಿಮೆಯಾದ ರೋಗಿಗಳಿಗೆ ವೈದ್ಯರು ನೀಡುವ ಐ.ವಿ. ದ್ರಾವಣದಿಂದ ತಕ್ಷಣ ಪ್ಲೇಟ್‌ಲೆಟ್ ಪ್ರಮಾಣ ಹೆಚ್ಚಾಗಿ ರೋಗಿ ಚೇತರಿಸಿಕೊಳ್ಳುತ್ತಾನೆ. ಕಾಯಿಲೆಯು ಗಂಭೀರ ಸ್ಥಿತಿಯಲ್ಲಿರುವ ಪ್ರಕರಣಗಳ ಸಮರ್ಪಕ ನಿರ್ವಹಣೆಗಾಗಿ ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ಚಿಕಿತ್ಸೆ ಲಭ್ಯವಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !