4 ತಿಂಗಳಲ್ಲಿ 26 ರೈತರ ಆತ್ಮಹತ್ಯೆ

7
ಅತಿವೃಷ್ಟಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಪ್ರಗತಿ ಪರಿಶೀಲನೆ

4 ತಿಂಗಳಲ್ಲಿ 26 ರೈತರ ಆತ್ಮಹತ್ಯೆ

Published:
Updated:
Deccan Herald

ಬೆಳಗಾವಿ: ಅತಿವೃಷ್ಟಿಯಿಂದಾದ ಬೆಳೆ ಹಾನಿ ಹಾಗೂ ಮನೆ ಕುಸಿತ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಆ. 7ರೊಳಗೆ ಪರಿಹಾರ ವಿತರಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್‌ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಪರಿಹಾರ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು’ ಎಂದು ತಾಕೀತು ಮಾಡಿದರು.

‘ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ನಿಂದ ಜುಲೈವರೆಗೆ 26 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 21 ಪ್ರಕರಣಗಳು ದೃಢಪಟ್ಟಿವೆ. ಮೂರು ಪ್ರಕರಣಗಳು ಪರಿಹಾರಕ್ಕೆ ತಿರಸ್ಕೃತಗೊಂಡಿವೆ. ಒಂದು ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿ ಬಂದಿಲ್ಲ. ಇನ್ನೊಂದು ಇತ್ತೀಚಿನದಾಗಿದ್ದು, ಪರಿಶೀಲನೆ ಹಂತದಲ್ಲಿದೆ’ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಎಚ್.ಡಿ. ಕೋಳೇಕರ ಮಾಹಿತಿ ನೀಡಿದರು.

‘ಖಜಾನೆ-2 ತಂತ್ರಾಂಶದ ವ್ಯವಸ್ಥೆ ಜಾರಿಯಾಗಿರುವುದರಿಂದ ರೈತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದರು. ‘ಈ ಬಗ್ಗೆ ಚರ್ಚಿಸಿ ಪರಿಹಾರ ಮಾರ್ಗ ಕಂಡುಕೊಳ್ಳಲಾಗುವುದು’ ಎಂದು ರಾಕೇಶ್ ಹೇಳಿದರು.

ಶಾಶ್ವತ ಪರಿಹಾರಕ್ಕೆ ಸೂಚನೆ:  ‘ಬೇಸಿಗೆಯಲ್ಲಿ, ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿರುವ ಗ್ರಾಮಗಳನ್ನು ಗುರುತಿಸಿ ಅವುಗಳಿಗೆ ಶಾಶ್ವತ ನೀರು ಪೂರೈಸುವ ಯೋಜನೆ ರೂಪಿಸಬೇಕು. ಕೊಳವೆಬಾವಿ ಬದಲಿಗೆ ಸ್ಥಳೀಯ ಜಲಮೂಲಗಳಿಂದ ಪೈಪಲೈನ್ ಅಳವಡಿಸಿ ನೀರು ಒದಗಿಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

‘ಪ್ರಕೃತಿ ವಿಕೋಪ ಪರಿಹಾರ ನಿಧಿ ಅನುದಾನದಲ್ಲಿ ಅಂಗನವಾಡಿ ಕಟ್ಟಡಗಳನ್ನು ದುರಸ್ತಿಗೊಳಿಸಲು ಹಣ ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಶಾಲಾ ಆವರಣದಲ್ಲಿ ಜಾಗ ಲಭ್ಯವಿದ್ದರೆ ತಕ್ಷಣ ನೀಡಬೇಕು; ಒಂದು ವೇಳೆ ಹೆಚ್ಚುವರಿ ಕೋಣೆಗಳು ಲಭ್ಯವಿದ್ದರೆ ಒದಗಿಸಬೇಕು’ ಎಂದು ಎಡಿಸಿ ಡಾ.ಎಚ್‌.ಬಿ. ಬೂದೆಪ್ಪ ಅವರಿಗೆ ತಿಳಿಸಿದರು.

ಗುಂಡಿ ಮುಚ್ಚಲು ಹಣ ಕೊಡಿ:  ‘ಮಳೆಯಿಂದಾಗಿ ಬೆಳಗಾವಿ ಹಾಗೂ ಚಿಕ್ಕೋಡಿ ಬಸ್ ನಿಲ್ದಾಣಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ದುರಸ್ತಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಪರಿಹಾರ ಒದಗಿಸಬೇಕು’ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೋರಿದರು.

‘ಅಧಿವೇಶನ ಸಮೀಪಿಸುತ್ತಿರುವುದರಿಂದ, ನಗರದ ರಸ್ತೆಗಳ ದುರಸ್ತಿಗೆ ಕಳೆದ ಬಾರಿಯಂತೆ ವಿಶೇಷ ಅನುದಾನ ನೀಡಬೇಕು’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ಮನವಿ ಮಾಡಿದರು.

‘ಜಿಲ್ಲಾ ಆಸ್ಪತ್ರೆಯ ಕಟ್ಟಡ ನೂರು ವರ್ಷ ಹಳೆಯದಾಗಿದ್ದು, ಪದೇಪದೇ ದುರಸ್ತಿ ಮಾಡಬೇಕಾದ ಸ್ಥಿತಿ ಇದೆ. ಹೆರಿಗೆ, ತುರ್ತು ಚಿಕಿತ್ಸೆ ಮೊದಲಾದ ವಿಭಾಗಗಳು ಬೇರೆ ಬೇರೆ ಕಡೆ ಇರುವುದರಿಂದ ರೋಗಿಗಳಿಗೆ ತೀವ್ರ ಅನಾನುಕೂಲ ಆಗುತ್ತಿದೆ. ಆದ್ದರಿಂದ ಎಲ್ಲ ಸೌಲಭ್ಯವೂ ಒಂದೇ ಸೂರಿನಡಿ ಇರುವಂತಹ 500 ಹಾಸಿಗೆಗಳ ಕಟ್ಟಡ ಅಗತ್ಯವಿದೆ’ ಎಂದು ಡಿಎಚ್‌ಒ ಡಾ. ಅಪ್ಪಾಸಾಹೇಬ ನರಟ್ಟಿ ಹೇಳಿದರು.

‘250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದ್ದು, ಆದಾಗ್ಯೂ ಹೊಸ ಕಟ್ಟಡದ ಅಗತ್ಯವಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !