ಬೆಳಗಾವಿ: 2ನೇ ದಿನದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

7

ಬೆಳಗಾವಿ: 2ನೇ ದಿನದ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

Published:
Updated:
Prajavani

ಬೆಳಗಾವಿ: ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಎರಡನೇ ದಿನದ ಮುಷ್ಕರಕ್ಕೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾಲಾ– ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಸ್‌, ಆಟೊಗಳ ಸಂಚಾರ ಸಾಮಾನ್ಯವಾಗಿತ್ತು. ವ್ಯಾಪಾರ ವಹಿವಾಟು ನಡೆಯಿತು. ಜನಜೀವನ ಸಾಮಾನ್ಯವಾಗಿತ್ತು.

ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಬೆಳಿಗ್ಗೆಯಿಂದಲೇ ಓಡಾಟ ಆರಂಭಿಸಿದ್ದವು. ಗ್ರಾಮೀಣ ಭಾಗದ, ನಗರದೊಳಗಿನ ಹಾಗೂ ಹೊರ ಜಿಲ್ಲೆಗಳಿಗೆ ಬಸ್‌ಗಳು ಸಂಚರಿಸಿದವು. ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳತ್ತಲೂ ಬಸ್‌ಗಳು ಓಡಾಟ ನಡೆಸಿದವು. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಎಲ್ಲಿಯೂ ಬಸ್‌ಗಳಿಗೆ ಹಾನಿಯಾದ ಬಗ್ಗೆ ವರದಿಗಳಾಗಿಲ್ಲ.

ಆಟೊ, ಖಾಸಗಿ ಬಸ್‌ಗಳು– ಟೆಂಪೊಗಳು ಕೂಡ ಸಂಚರಿಸಿದವು. ಶಾಲಾ ಆಟೊಗಳು, ವ್ಯಾನ್‌ಗಳು ಕೂಡ ರಸ್ತೆಗೆ ಇಳಿದವು. ಜನರ ಓಡಾಟಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗಲಿಲ್ಲ.

ಮುಷ್ಕರದ ಮೊದಲ ದಿನ ಮಾತ್ರ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅವರು ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಎರಡನೇ ದಿನವಾದ ಬುಧವಾರ ಎಂದಿನಂತೆ ಶಾಲಾ– ಕಾಲೇಜುಗಳು ಪ್ರಾರಂಭವಾದವು. ವಿದ್ಯಾರ್ಥಿಗಳು ಸಮಯಕ್ಕೆ ಹಾಜರಾದರು. ಹಾಜರಾತಿ ಸಾಮಾನ್ಯವಾಗಿತ್ತು. ಪಾಠ ಪ್ರವಚನಗಳು ಎಂದಿನಂತೆ ನಡೆದವು.

ಸರ್ಕಾರಿ ಕಚೇರಿಗಳಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳ ಹಾಜರಾತಿ ಸಾಮಾನ್ಯವಾಗಿತ್ತು. ರಸ್ತೆಗಳಲ್ಲಿ ಜನರ ಓಡಾಟ ಸಾಮಾನ್ಯವಾಗಿತ್ತು.

ವ್ಯಾಪಾರ ವಹಿವಾಟು ಜೋರು:

ನಗರದ ಪ್ರಮುಖ ಮಾರುಕಟ್ಟೆಯಾದ ರವಿವಾರಪೇಟೆಯಲ್ಲಿ ಕಾಯಿಪಲ್ಲೆ, ಆಹಾರ ಧಾನ್ಯ, ದಿನಸಿ ಅಂಗಡಿಗಳು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಮಾರಾಟ ವಹಿವಾಟು ಜೋರಾಗಿ ನಡೆಯಿತು. ಅಕ್ಕಪಕ್ಕದ ಗ್ರಾಮಗಳಿಂದ ಬಂದಿದ್ದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರು. ಅಂಗಡಿ– ಮುಂಗಟ್ಟುಗಳು ತೆರೆದಿದ್ದವು. ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.

ಪ್ರತಿಭಟನಾ ಮೆರವಣಿಗೆ:

ಕಾರ್ಮಿಕ ಸಂಘಟನೆಗಳ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಗೋಗಟೆ ರಸ್ತೆ ಮೇಲ್ಸೇತುವೆ, ಶನಿವಾರಪೇಟೆ, ಟಿಳಕವಾಡಿ,  ಎಲ್‌ಐಸಿ, ಗೋವಾವೇಸ್‌ ವೃತ್ತದವರೆಗೆ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಮುಖಂಡರು, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು. ಮುಖಂಡರಾದ ಮಂದಣ್ಣ ನೇವಗಿ, ವಿದ್ಯಾ ನಾಯಕ, ಮೀನಾಕ್ಷಿ ತೋಟಗೇರ, ನಾಗೇಶ ಸಾತೇರಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !