ಬೆಳಗಾವಿ: ಜಿಲ್ಲೆಯಲ್ಲಿ ತಡವಾಗಿಯಾದರೂ ಆರಂಭವಾದ ಮುಂಗಾರು ಮಳೆಯಿಂದ ಬಿತ್ತನೆ ಚಟುವಟಿಕೆ ಚುರುಕುಗೊಂಡಿವೆ. ಜುಲೈ 28ರ ವರೆಗೆ ಶೇ 81ರಷ್ಟು ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿ 7.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ಹಾಕಿಕೊಂಡಿತ್ತು. ಆದರೆ, ಮಳೆ ಕೈಕೊಟ್ಟಿದ್ದರಿಂದ ಬಿತ್ತನೆಗೆ ಹಿನ್ನಡೆಯಾಗಿತ್ತು. ಜುಲೈ ಮೊದಲ ವಾರ ಬಂದರೂ ಅರ್ಧದಷ್ಟು ಗುರಿ ಸಾಧನೆಯೂ ಆಗಿರಲಿಲ್ಲ. ಆದರೆ, ನಂತರ ಸುರಿದ ಮಳೆ ಕೃಷಿ ಚಟುವಟಿಕೆಗೆ ಬಲ ತುಂಬಿದೆ. ಕಳೆದ ವಾರ ಬಿಟ್ಟೂಬಿಡದೆ ವರುಣ ಅಬ್ಬರಿಸಿದ್ದರಿಂದ ಬಿತ್ತನೆ ಚಟುವಟಿಕೆಗೆ ವೇಗ ಸಿಕ್ಕಿದ್ದು, ಈವರೆಗೆ 5.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.
ವರುಣನನ್ನು ನಂಬಿ ಜಿಲ್ಲೆಯ ಕೆಲವೆಡೆ ಜೂನ್‌ನಲ್ಲೇ ಬಿತ್ತನೆ ಮಾಡಿದ್ದ ರೈತರು, ಈಗ ಬೆಳೆಯೇ ಬಾರದ್ದರಿಂದ ಕಂಗಾಲಾಗಿದ್ದಾರೆ. ಮರುಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಅವರಿಗೆ ವಿತರಿಸಲು ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿಕೊಂಡಿದೆ.
ಶೇ.7ರಷ್ಟು ಅಧಿಕ ಮಳೆ: ಜಿಲ್ಲೆಯಲ್ಲಿ ಜೂನ್‍ನಲ್ಲಿ 146 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 47 ಮಿ.ಮೀ ಮಳೆಯಾಗಿದ್ದು, ಶೇ 68ರಷ್ಟು ಕೊರತೆಯಾಗಿತ್ತು. ಜುಲೈ 1ರಿಂದ 28ರ ವರೆಗೆ 180 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 302 ಮಿ.ಮೀ(ಶೇ 68 ಹೆಚ್ಚುವರಿ) ಮಳೆ ಸುರಿದಿದೆ. ಒಟ್ಟಾರೆಯಾಗಿ ಈ ಮುಂಗಾರು ಹಂಗಾಮಿನಲ್ಲಿ (ಜೂನ್ 1ರಿಂದ ಜುಲೈ 28ರವರೆಗೆ) 326 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವದಲ್ಲಿ 349 ಮಿ.ಮೀ(ಶೇ 7ರಷ್ಟು ಹೆಚ್ಚು) ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ. ಚನ್ನಮ್ಮನ ಕಿತ್ತೂರು, ಖಾನಾಪುರದಲ್ಲಿ ಅತಿ ಹೆಚ್ಚು(ತಲಾ ಶೇ 96) ಬಿತ್ತನೆಯಾಗಿದ್ದರೆ, ಕಾಗವಾಡದಲ್ಲಿ ಶೇ 61 ಮತ್ತು ಸವದತ್ತಿಯಲ್ಲಿ ಶೇ 64 ಬಿತ್ತನೆ ಪ್ರಕ್ರಿಯೆ ಮುಗಿದಿದೆ.
ನಾಟಿ ಆರಂಭ: ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಹಲವು ರೈತರು ಭತ್ತದ ಸಸಿಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದರು. ಮಳೆಯಾಗಿದ್ದರಿಂದ ಈಗ ಅವುಗಳನ್ನು ನಾಟಿ ಮಾಡುತ್ತಿರುವುದು ಕಂಡುಬರುತ್ತಿದೆ. ಉಳಿದ ತಾಲ್ಲೂಕುಗಳಲ್ಲಿ ಗೋವಿನಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ಜೋಳ, ಹತ್ತಿ, ವಿವಿಧ ತರಕಾರಿಗಳು ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಕೆಲವರು ಬಿತ್ತನೆಗಾಗಿ ಈಗ ಕೃಷಿಭೂಮಿ ಸಿದ್ಧಗೊಳಿಸುತ್ತಿದ್ದಾರೆ.
ಕಬ್ಬು ಬೆಳೆಗಾರರು ನಿರಾಳ: ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಆದರೆ, ಮಳೆಯಾಗದ್ದರಿಂದ ಕೆಲವೆಡೆ ಅದು ಒಣಗುವ ಹಂತಕ್ಕೆ ತಲುಪಿತ್ತು. ಇಳುವರಿ ಕುಸಿತದ ಆತಂಕ ರೈತರನ್ನು ಕಾಡುತ್ತಿತ್ತು. ಆದರೆ, ಜುಲೈನಲ್ಲಿ ಸುರಿದ ಉತ್ತಮ ಮಳೆಯಿಂದ ಕಬ್ಬಿನ ಬೆಳೆ ಚೇತರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.