ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷ ಕಳೆದರೂ ಆರಂಭಗೊಳ್ಳದ ರೈಲ್ವೆ ಮೇಲ್ಸೇತುವೆ ಕಾಮಗಾರಿ

3ನೇ ರೈಲ್ವೆ ಗೇಟ್‌ ರಸ್ತೆ ಮೇಲ್ಸೇತುವೆ;
Last Updated 25 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕಾಂಗ್ರೆಸ್‌ ರಸ್ತೆಯಲ್ಲಿರುವ 3ನೇ ರೈಲ್ವೆ ಗೇಟ್‌ಗೆ ರಸ್ತೆ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿ ಎರಡು ವರ್ಷಗಳಾಗಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಬೆಳಗಾವಿಯಿಂದ ಖಾನಾಪುರ ಕಡೆ ಹೋಗುವ ರೈಲ್ವೆಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಪ್ರತಿದಿನ 40ರಿಂದ 50 ರೈಲ್ವೆಗಳು ಸಂಚರಿಸುತ್ತವೆ. ಖಾನಾಪುರ, ಪೀರಣವಾಡಿ, ಮಚ್ಛೆಯಿಂದ ಟಿಳಕವಾಡಿ, ಹಿಂದವಾಡಿ, ಶಹಾಪುರ, ಹಳೆ ಪಿ.ಬಿ. ರಸ್ತೆ ಕಡೆ ಹೋಗುವವರು ರೈಲ್ವೆ ಹಳಿ ದಾಟಿಕೊಂಡು ಹೋಗಬೇಕಾಗಿದೆ.

ಪ್ರತಿಬಾರಿ ರೈಲ್ವೆ ಬರುವ ವೇಳೆ 5ರಿಂದ 10 ನಿಮಿಷಗಳ ಕಾಲ ಗೇಟ್‌ ಹಾಕಿ, ವಾಹನಗಳ ಸಂಚಾರ ತಡೆಹಿಡಿಯಲಾಗುತ್ತದೆ. ಅದರಿಂದ ವಾಹನಗಳ ದಟ್ಟಣೆ ಉಂಟಾಗಿ, ಸಂಚಾರ ಅಸ್ತವ್ಯಸ್ಥವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ರಸ್ತೆ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಸಿದ್ಧಪಡಿಸಲಾಯಿತು.

ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರವು ಈ ಯೋಜನೆಗೆ 2017ರಲ್ಲಿ ಹಸಿರು ನಿಶಾನೆ ತೋರಿದವು. ನಿರ್ಮಾಣದ ವೆಚ್ಚವನ್ನು ಭರಿಸಲು ರೈಲ್ವೆ ಇಲಾಖೆ ಸಮ್ಮತಿಸಿದರೆ, ಅಗತ್ಯವಾದ ಭೂಮಿಯನ್ನು ನೀಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿತು. ಸುಮಾರು ₹ 25 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಕೂಡ ಕರೆಯಲಾಗಿತ್ತು. ಆರಂಭದಲ್ಲಿ ಉತ್ಸಾಹ ತೋರಿದ್ದ ರೈಲ್ವೆ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ನಂತರದ ದಿನಗಳಲ್ಲಿ ನಿರ್ಲಕ್ಷ್ಯ ತೋರಿದರು.

ಕಳೆದ ತಿಂಗಳು ಶಂಕುಸ್ಥಾಪನೆ

ಕಳೆದ ತಿಂಗಳು ಜನವರಿಯಲ್ಲಿ ಗೋಗಟೆ ವೃತ್ತದ ಬಳಿ ನಿರ್ಮಾಣವಾಗಿದ್ದ ರಸ್ತೆ ಮೇಲ್ಸೇತುವೆ ಉದ್ಘಾಟನೆ ವೇಳೆ ಈ ಕಾಮಗಾರಿಗೂ ಶಂಕು ಸ್ಥಾಪನೆ ನೆರವೇರಿಸಲಾಯಿತು. ವಾರದಲ್ಲಿಯೇ ಕಾಮಗಾರಿ ಆರಂಭಿಸುವುದಾಗಿ ಅಧಿಕಾರಿಗಳು ನೀಡಿದ್ದ ಭರವಸೆ, ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.

ಅಧಿಸೂಚನೆ ಹೊರಡಿಸಿಲ್ಲ

3ನೇ ರೈಲ್ವೆ ಗೇಟ್‌ ಸಂಚಾರವನ್ನು ಬಂದ್‌ ಮಾಡಿ. 1ನೇ ಹಾಗೂ 2ನೇ ರೈಲ್ವೆ ಗೇಟ್‌ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೆ, ಇದುವರೆಗೆ ಇದರ ಬಗ್ಗೆ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿಲ್ಲ. ಹಳಿಯ ಪಕ್ಕದಲ್ಲಿ ನಾಲ್ಕಾರು ಮರಗಳಿದ್ದು, ಅವುಗಳನ್ನು ತೆರವುಗೊಳಿಸುವ ಕೆಲಸ ಕೂಡ ಶುರುವಾಗಿಲ್ಲ. ಇವೆಲ್ಲ ಕಾರಣಗಳಿಂದಾಗಿ ಮೇಲ್ಸೇತುವೆ ಕಾಮಗಾರಿ ಆರಂಭವಾಗಿಲ್ಲ.

ಹಲವು ಸಲ ಸೂಚನೆ

ಮೇಲ್ಸೇತುವೆ ಕಾಮಗಾರಿಯನ್ನು ಆರಂಭಿಸಬೇಕೆಂದು ಹಲವು ಬಾರಿ ಸಂಸದ ಸುರೇಶ ಅಂಗಡಿ ರೈಲ್ವೆ ಅಧಿಕಾರಿಗಳು, ಮಹಾನಗರ ಪಾಲಿಕೆ ಹಾಗೂ ಟ್ರಾಫಿಕ್‌ ಪೊಲೀಸರ ಸಭೆ ನಡೆಸಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT