ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಚಾಲಕನ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ ಪ್ರಕರಣ: ನಾಲ್ವರ ಬಂಧನ

Last Updated 6 ಫೆಬ್ರುವರಿ 2021, 14:42 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕದ ಚಾಲಕರೊಬ್ಬರ ಮೇಲೆ ಮಹಾರಾಷ್ಟ್ರದ ಸಾತಾರಾ ಟೋಲ್ ಬಳಿ ಶುಕ್ರವಾರ ರಾತ್ರಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ರಾಜ್ಯದ ಭೂಂಜ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವ ಅಲ್ಲಿನ ಪೊಲೀಸರು, ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಶಿರಾದ ಗೋವಿಂದರಾಜು ಹಲ್ಲೆಗೊಳಗಾದವರು. ಟೋಲ್‌ನಲ್ಲಿ ಅವರು ತಡೆದಿದ್ದ ಆರೋಪಿಗಳು, ಮರಾಠಿಯಲ್ಲಿ ಮಾತನಾಡುವಂತೆ ಬಲವಂತಪಡಿಸಿದ್ದರು. ಮರಾಠಿ ಗೊತ್ತಿಲ್ಲ ಎಂದಿದ್ದಕ್ಕೆ ಅರೆಬೆತ್ತಲೆಯಾಗಿಸಿ ಥಳಿಸಿದ್ದರು. ಗೋವಿಂದರಾಜು ಈ ವಿಷಯವನ್ನು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಆಶೋಕ ಚಂದರಗಿ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಚಂದರಗಿ, ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಗಮನಕ್ಕೆ ತಂದಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಎಸ್ಪಿ ತನಿಖೆ ನಡೆಸುವಂತೆ ಅಥಣಿ ಡಿವೈಎಸ್ಪಿ ಗಿರೀಶ್ ಅವರಿಗೆ ಸೂಚಿಸಿದ್ದರು. ಸಾತಾರ ಎಸ್ಪಿ ಜೊತೆಗೂ ಚರ್ಚಿಸಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ.

‘ಶನಿವಾರ ಮಧ್ಯಾಹ್ನ ಸಂಕೇಶ್ವರ ತಲುಪಿದ ಚಾಲಕನನ್ನು ಪಿಎಸ್‌ಐ ಜೊತೆ ಕಳುಹಿಸಿಕೊಟ್ಟಿದ್ದೆವು. ಅವರು ಭೂಂಜ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಅಲ್ಲಿನ ಪೊಲೀಸರು ಸ್ಥಳೀಯರಾದ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ಯಾವುದೇ ಸಂಘಟನೆ ಜೊತೆ ಗುರುತಿಸಿಕೊಂಡಿಲ್ಲ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ’ ಎಂದು ಎಸ್ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಾರಾಷ್ಟ್ರದಲ್ಲಿ ಭಾಷಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮೂಲದವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಆಗುತ್ತಿರುವುದು ಇದೇ ಮೊದಲನೇ ಬಾರಿಯಾಗಿದೆ. ತುರ್ತಾಗಿ ಕ್ರಮ ಕೈಗೊಂಡ ಎರಡೂ ರಾಜ್ಯಗಳ ಪೊಲೀಸರು ಅಭಿನಂದನಾರ್ಹರು’ ಎಂದು ಚಂದರಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT