ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಒಂದೂವರೆ ವರ್ಷದಲ್ಲಿ 47 ಸೈಬರ್ ವಂಚನೆ ಪ್ರಕರಣಗಳು

ಸೈಬರ್‌ ವಂಚನೆಗೊಳಗಾದಲ್ಲಿ ಗಂಟೆಯೊಳಗೆ ದೂರು ನೀಡಲು ಡಿಸಿಪಿ ಮನವಿ
Last Updated 3 ಜುಲೈ 2021, 14:10 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2020ರಿಂದ ಈವರೆಗೆ ಅಂದರೆ ಒಂದೂವರೆ ವರ್ಷದಲ್ಲಿ 47 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ₹ 65 ಲಕ್ಷ ವಂಚಿಸಿರುವುದು ವರದಿಯಾಗಿದೆ. ₹ 29.13 ಲಕ್ಷವನ್ನು ನೊಂದವರ ಖಾತೆಗಳಿಗೆ ಮರು ಜಮಾ ಆಗುವಂತೆ ಮಾಡಲಾಗಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದರು.

‘2020ರಲ್ಲಿ 38 ಮತ್ತು 2021ರಲ್ಲಿ 9 ವಂಚನೆ ಪ್ರಕರಣಗಳು ಸಿಇಎನ್ (ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆಯಲ್ಲಿ ದಾಖಲಾಗಿವೆ. ಬಹುತೇಕರು ಬಹಳ ತಡವಾಗಿ ಬಂದು ದೂರು ಕೊಟ್ಟಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

‘ಈ ಪೈಕಿ ಅಪರಾಧ ಘಟಿಸಿದ ಕೂಡಲೇ ಅಂದರೆ ಒಂದು ಗಂಟೆಯೊಳಗೆ ಮಾಹಿತಿ ಅಥವಾ ದೂರು ನೀಡಿರುವ ಪ್ರಕರಣಗಳಲ್ಲಿ ಸಂಬಂಧಿಸಿದವರ ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಿಸಿ ₹ 13,41,527 ಅನ್ನು ವಂಚನೆಗೆ ಒಳಗಾದವರ ಖಾತೆ ಮರು ಜಮಾ ಆಗುವಂತೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅಂತೆಯೇ 2020ರಲ್ಲಿ 43 ಹಾಗೂ 2021ರಲ್ಲಿ 13 ಸೈಬರ್‌ ವಂಚನೆಗೆ ಸಂಬಂಧಿಸಿದ ‘ಅರ್ಜಿ’ಗಳನ್ನು ಸಿಇಎನ್ ಠಾಣೆಯಲ್ಲಿ ಸ್ವೀಕರಿಸಲಾಗಿದೆ. ಇವುಗಳ ಪೈಕಿ ಅರ್ಜಿದಾರರು ಗಂಟೆಯೊಳಗಾಗಿ ಮಾಹಿತಿ ನೀಡಿದವುಗಳಿಗೆ ಸಂಬಂಧಿಸಿದಂತೆ ತಕ್ಷಣ ಅಂಥವರ ಬ್ಯಾಂಕ್‌ ಖಾತೆ‍ ಫ್ರೀಜ್‌ ಮಾಡಿಸಿ ₹ 15,71,776 ಅನ್ನು ನೊಂದವರ ಖಾತೆಗೆ ಮರು ಜಮಾ ಆಗುವಂತೆ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ಒಟಿಪಿ, ಆನ್‌ಲೈನ್‌ ಮಾರಾಟ ವೇದಿಕೆಗಳು, ಸಾಮಾಜಿಕ ಜಾಲತಾಣ, ಕ್ಯೂ ಅಂಡ್ ಆರ್ ಕೋಡ್ ಮತ್ತು ಹಣಕ್ಕಾಗಿ ಆನ್‌ಲೈನ್‌ನಲ್ಲಿ ಮನವಿ ಪ್ರಕರಣಗಳು 47 ಪ್ರಕರಣಗಳಲ್ಲಿ ಸೇರಿವೆ. ಉದ್ಯೋಗ ಕೊಡಿಸುವುದಾಗಿ, ಉಡುಗೊರೆ ನೀಡುವುದಾಗಿ, ವಿಮೆ ವಂಚನೆ ಪ್ರಕರಣಗಳು ಕೂಡ ವರದಿಯಾಗಿವೆ. ಪ್ರವಾಸ ಕರೆದೊಯ್ಯುವುದಾಗಿ ನಂಬಿಸಿಯೂ ವಂಚಿಸಲಾಗಿದೆ. ಮ್ಯಾಟ್ರಿಮೋನಿ ಜಾಲತಾಣಗಳ ಮೂಲಕವೂ ಬಲೆ ಬೀಸಲಾಗಿದೆ. ನಕಲಿ ಜಾಲತಾಣಗಳನ್ನು ಸೃಷ್ಟಿಸಿ ವಂಚಿಸಿರುವುದು, ಗೃಹ ನಿರ್ಮಾಣಕ್ಕೆ ಸಾಲ ಕೊಡುವುದಾಗಿ, ಆನ್‌ಲೈನ್‌ನಲ್ಲಿ ಜ್ಯೋತಿಷ ಹೇಳುವುದಾಗಿಯೂ ತಿಳಿಸುವ ಮೂಲಕ ಮತ್ತು ಬ್ಯಾಂಕ್‌ನವರು ಎಂದು ಹೇಳಿಕೊಂಡು ಕರೆ ಮಾಡಿ ಕೆವೈಎಸ್ ಮಾಹಿತಿ ಪಡೆಯುವ ನೆಪವನ್ನಿಟ್ಟುಕೊಂಡು ವಂಚನೆ ಮಾಡಲಾಗಿದೆ’ ಎಂದು ವಿವರ ನೀಡಿದರು.

‘ಹಲವು ರೀತಿಯಲ್ಲಿ ವಂಚಿಸುವವರು ಹುಟ್ಟಿಕೊಂಡಿದ್ದಾರೆ. ಸೈಬರ್‌ ವಂಚನೆ ಪ್ರಕರಣಗಳಲ್ಲಿ ತಕ್ಷಣವೇ ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಸಾರ್ವಜನಿಕರು ತಕ್ಷಣ ಸಿಇಎನ್ ಠಾಣೆಯ ಇನ್‌ಸ್ಪೆಕ್ಟರ್ ಮೊ.ಸಂಖ್ಯೆ 9480804084 ಅಥವಾ ಸಹಾಯವಾಣಿ 112 ಅಥವಾ ಠಾಣೆಯ ದೂರವಾಣಿ ಸಂಖ್ಯೆ 0831–2405233 ಕರೆ ಮಾಡಿ ಮಾಹಿತಿ ನೀಡಿ ಕೂಡಲೇ ದೂರು ದಾಖಲಿಸಬೇಕು. ಸಂಬಂಧಿಸಿದ ಬ್ಯಾಂಕ್‌ಗಳವರನ್ನು ಸಂಪರ್ಕಿಸಿ ಸಹಾಯ ಪಡೆಯಬೇಕು’ ಎಂದು ಕೋರಿದರು.

ಹಂಚಿಕೊಳ್ಳಬೇಡಿ
ಸಾರ್ವಜನಿಕರು ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸದೆ ಇತರರೊಂದಿಗೆ ಹಂಚಿಕೊಳ್ಳಬಾರದು. ಮುನ್ನೆಚ್ಚರಿಕೆ ವಹಿಸಬೇಕು. ಸೈಬರ್‌ ವಂಚನೆಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಬೇಕು.
-ವಿಕ್ರಂ ಅಮಟೆ, ಡಿಸಿಪಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT