ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ 59 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗೆ‘ಅಮೃತ’

Last Updated 29 ಅಕ್ಟೋಬರ್ 2021, 11:15 IST
ಅಕ್ಷರ ಗಾತ್ರ

ಬೆಳಗಾವಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಜಾರಿಗೊಳಿಸಿರುವ ‘ಅಮೃತ’ ಯೋಜನೆಗೆ ಜಿಲ್ಲೆಯ 59 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿ ಸಮಗ್ರ ಅಭಿವೃದ್ಧಿಯ ಗುರಿ ಹೊಂದಲಾಗಿದೆ.

ರಾಜ್ಯದಲ್ಲಿ ಒಟ್ಟು 750 ಗ್ರಾಮ ಪಂಚಾಯ್ತಿಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಜಿಲ್ಲೆಯ 14 ತಾಲ್ಲೂಕುಗಳ ಆಯ್ದ ಪಂಚಾಯ್ತಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬೆಳಗಾವಿ, ಹುಕ್ಕೇರಿ ಹಾಗೂ ಖಾನಾಪುರ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಅಂದರೆ ತಲಾ 6 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅತಿ ಕಡಿಮೆ ಎಂದರೆ ಕಾಗವಾಡ ತಾಲ್ಲೂಕಿನಲ್ಲಿದೆ. ಅಲ್ಲಿ 2 ಗ್ರಾ.ಪಂ.ಗಳಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗುತ್ತಿದೆ.

ಹುಕ್ಕೇರಿ ಮತಕ್ಷೇತ್ರದ ಶಾಸಕ, ಅರಣ್ಯ ಸಚಿವ ಉಮೇಶ ಕತ್ತಿ ಅವರ ಸ್ವಗ್ರಾಮ ಬೆಲ್ಲದಬಾಗೇವಾಡಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಕೆಂಪವಾಡವನ್ನು ಆಯ್ಕೆ ಮಾಡಲಾಗಿದೆ.

ಬೀದಿದೀಪ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ, ಶೇ 100ರಷ್ಟು ಘನತ್ಯಾಜ್ಯ ವಿಲೇವಾರಿ, ತ್ಯಾಜ್ಯ ನೀರಿನ ವೈಜ್ಞಾನಿಕ ಸಂಸ್ಕರಣೆ, ಗ್ರಾಮ ಪಂಚಾಯ್ತಿ ಕಟ್ಟಡಗಳ ಮೇಲೆ ಸೌರ ವಿದ್ಯುತ್ ಉತ್ಪಾದನೆ ಘಟಕ ಅಳವಡಿಕೆ, ಅಮೃತ ಉದ್ಯಾನಗಳನಿರ್ಮಾಣ, ಡಿಜಿಟಲ್ ಗ್ರಂಥಾಲಯ ನಿರ್ಮಿಸಿರುವುದು, ವಸತಿರಹಿತರಿಗೆ ಮನೆಗಳ ನಿರ್ಮಾಣ ಕಾರ್ಯವು ಜೊತೆಜೊತೆಯಲ್ಲಿ ನಡೆಯಬೇಕು ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಒಗ್ಗೂಡಿಸಿ ‍ಪ್ರಗತಿ ಕಾಣುವಂತೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಏನೇನು ಕೆಲಸ?:

ಅಲ್ಲಿನ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಶೌಚಾಲಯನಿರ್ಮಾಣ, ಶಾಲೆ ಆವರಣದಲ್ಲಿ ಆಟದ ಮೈದಾನ ಅಭಿವೃದ್ಧಿಪಡಿಸಿರುವುದು, ಕಾಂಪೌಂಡ್ ನಿರ್ಮಾಣ, ಕೆರೆ–ಕಲ್ಯಾಣಿಗಳ ಪುನಶ್ಚೇತಕ್ಕೆ ಕ್ರಮ ವಹಿಸಲಾಗುತ್ತಿದೆ. ವಿವಿಧ ಯೋಜನೆಗಳನ್ನು ಒಗ್ಗೂಡಿಸುವುದರಿಂದ ಹೆಚ್ಚಿನ ಹಣ ಲಭ್ಯವಾಗಲಿದೆ. ಜಲಜೀವನ ಮಿಷನ್ ಅಭಿಯಾನದಲ್ಲಿ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲಾಗುವುದು. 2020ರ ಮಾರ್ಚ್ 31ರೊಳಗೆ ಯೋಜನೆ ಪೂರ್ಣಗೊಳಿಸಿದ ಪಂಚಾಯಿತಿಗಳಿಗೆ ₹ 25 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

15ನೇ ಹಣಕಾಸು ಯೋಜನೆ, ಎನ್‌ಆರ್‌ಎಲ್‌ಎಂ, ಜಲಜೀವನ ಮಿಷನ್, ಪಂಚಾಯ್ತಿಗಳ ಸಂಪನ್ಮೂಲ, ಸ್ಥಳೀಯ ಕ್ಷೇತ್ರ ಪ್ರದೇಶಾಭಿವೃದ್ಧಿಗೆ ದೊರೆಯುವ ಅನುದಾನ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೊದಲಾದವುಗಳನ್ನು ಒಗ್ಗೂಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಹಳ್ಳಿ ಜನರ ಜೀವನಮಟ್ಟ ಸುಧಾರಿಸಬೇಕು. ಅಲ್ಲಿಯೇ ಸೌಲಭ್ಯಗಳು ದೊರೆಯುವಂತಾಗಬೇಕು. ಜೊತೆಗೆ ವ್ಯವಸ್ಥಿತ ಅಭಿವೃದ್ಧಿ ಸಾಧ್ಯವಾಗಬೇಕು. ಡಿಜಿಟಲ್ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಅನುಕೂಲ ಕಲ್ಪಿಸಬೇಕು ಎನ್ನುವ ಆಶಯ ಹೊಂದಲಾಗಿದೆ.

ಖಾನಾಪುರ ತಾಲ್ಲೂಕಿನ ನಂದಗಡ, ಸವದತ್ತಿ ತಾಲ್ಲೂಕಿನ ಮುಗಳಿಹಾಳ, ಸತ್ತಿಗೇರಿ ಮೊದಲಾದ ಕಡೆಗಳಲ್ಲಿ ಈಗಾಗಲೇ ಕೆಲವು ಕಾಮಗಾರಿಗಳು ನಡೆದಿವೆ. ಮನೆ ಮನೆಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು ಮಹತ್ವದ್ದಾಗಿದೆ.

‘ಅಮೃತ’ ವಿವರ

ತಾಲ್ಲೂಕು;ಸಂಖ್ಯೆ;ಗ್ರಾಮ ಪಂಚಾಯ್ತಿಗಳು

ಅಥಣಿ;5;ಅಥಣಿ ಗ್ರಾಮೀಣ, ತೆಲಸಂಗ, ರಡ್ಡೇರಹಟ್ಟಿ, ಮಲಾಬಾದ, ಬಡಚಿ

ಬೈಲಹೊಂಗಲ;4;ದೇವಲಾಪೂರ, ತುರ್ಕರಶೀಗಿಹಳ್ಳಿ, ಸಂಪಗಾಂವ, ನೇಸರಗಿ

ಬೆಳಗಾವಿ;6;ಹಿರೇಬಾಗೇವಾಡಿ, ಹಲಗಾ, ಉಚಗಾಂವ, ಧರನಟ್ಟಿ, ಹೊಸವಂಟಮೂರಿ, ಯಳ್ಳೂರು

ಚಿಕ್ಕೋಡಿ;4;ಚಂದೂರು, ಕರೋಶಿ, ಪಟ್ಟಣಕುಡಿ, ಜೋಡಕುರಳಿ

ಗೋಕಾಕ;4;ಕೊಣ್ಣೂರು (ಗ್ರಾಮೀಣ), ಮಿಡಕನಟ್ಟಿ, ಪಾಮನದಿನ್ನಿ, ತಳಕಟನಾಳ

ಹುಕ್ಕೇರಿ;6;ಬೆಲ್ಲದಬಾಗೇವಾಡಿ, ಬೆಣಿವಾಡ, ಹರಗಾಪುರ, ಬುಗಟೆ ಆಲೂರ, ಪಾಶ್ಚಾಪೂರ, ಉಳ್ಳಾಗಡ್ಡಿ ಖಾನಾಪುರ

ಕಾಗವಾಡ;2;ಕೆಂಪವಾಡ, ಮೋಳೆ

ಖಾನಾಪುರ;6;ಲೋಂಡಾ, ಬೈಲೂರ, ದೇವಲತ್ತಿ, ರಾಮಗುರವಾಡಿ, ನಂದಗಡ, ಗುಂಜಿ

ಕಿತ್ತೂರು;3;ಬೈಲೂರ, ದಾಸ್ತಿಕೊಪ್ಪ, ತುರುಮುರಿ

ಮೂಡಲಗಿ;3;ವಡೇರಹಟ್ಟಿ, ಹುಣಶ್ಯಾಳ ಪಿ.ಜಿ., ಹಳ್ಳೂರ

ನಿಪ್ಪಾಣಿ;3;ಅಪ್ಪಾಚಿವಾಡಿ, ಕುನ್ನೂರ, ಕುರ್ಲಿ

ರಾಮದುರ್ಗ;4;ಬಟಕುರ್ಕಿ, ಹೊಸಕೋಟಿ, ಘಟಕನೂರ, ಸುನ್ನಾಳ

ರಾಯಬಾಗ;4;ನಸಲಾಪೂರ, ಮೇಖಳಿ, ಖನದಾಳ, ಅಳಗವಾಡಿ

ಸವದತ್ತಿ 5;ಇನಾಮಹೊಂಗಲ, ಮುಗಳಿಹಾಳ, ರುದ್ರಾಪೂರ, ಸಂಗ್ರೇಶಕೊಪ್ಪ, ಸತ್ತಿಗೇರಿ

ಮುಗಿದ ನಂತರ

ಹಾಲಿ ಇರುವ ಯೋಜನೆಗಳನ್ನು ಒಗ್ಗೂಡಿಸಿ ಆ ಪಂಚಾಯ್ತಿಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಪಂಚಾಯ್ತಿಗಳಿಗೆ ತಲಾ ₹ 25 ಲಕ್ಷ ದೊರೆಯಲಿದೆ.

–ಎಚ್‌.ವಿ. ದರ್ಶನ್‌, ಸಿಇಒ, ಜಿಲ್ಲಾ ‍‍ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT