ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಸಾವಿರ ಯುವ ಮತದಾರರ ನೋಂದಣಿ

Last Updated 25 ಜನವರಿ 2019, 9:07 IST
ಅಕ್ಷರ ಗಾತ್ರ

ಬೆಳಗಾವಿ: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 60ಸಾವಿರ ಯುವ ಮತದಾರರು ಹೆಸರು ನೋಂದಾಯಿಸಿದ್ದಾರೆ. ಶೀಘ್ರದಲ್ಲೇ ಬರಲಿರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಪರಿಷ್ಕರಣೆ ಕಾರ್ಯ ಮಹತ್ವ ಪಡೆದುಕೊಂಡಿದೆ.

18 ವರ್ಷ ವಯಸ್ಸಿನವರು ಮತದಾನದ ಹಕ್ಕು ಪಡೆಯುತ್ತಾರೆ. ಇದನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು. ಹೆಚ್ಚಿನ ಯುವ ಮತದಾರರನ್ನು ನೋಂದಣಿ ಮಾಡಿಸುವಲ್ಲಿ ಯಶಸ್ವಿಯಾಗಿರುವ ಜಿಲ್ಲಾಡಳಿತವು ಆಯೋಗದಿಂದ ಮೆಚ್ಚುಗೆಯನ್ನೂ ಗಳಿಸಿದೆ.

ಕೆಲವರು ಅರಿವಿನ ಕೊರತೆಯಿಂದಾಗಿ ಹೆಸರು ನೋಂದಾಯಿಸಲು ಹಿಂಜರಿಕೆ ಪಟ್ಟಿರುವುದನ್ನು ಪರಿಷ್ಕರಣೆ ಪ್ರಕ್ರಿಯೆ ವೇಳೆ ಗುರುತಿಸಲಾಗಿದೆ. ಅಂಥವರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡಲಾಗಿದೆ. ಈ ಹಿಂದಿನ ಪಟ್ಟಿಯಲ್ಲಿ 11ಸಾವಿರ ಫೋಟೊಗಳಿರಲಿಲ್ಲ. ಈ ಪೈಕಿ ಈಗಾಗಲೇ 10ಸಾವಿರ ಫೋಟೊಗಳನ್ನು ಸಂಗ್ರಹಿಸಲಾಗಿದೆ. ಪ್ರಕ್ರಿಯೆ ಮುಂದುವರಿದಿದೆ.

ಜಾಗೃತಿ ಕಾರ್ಯಕ್ರಮ: ‘ಜಿಲ್ಲೆಯ ಎಲ್ಲ ಬಿಎಲ್‌ಒಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಕಾಲೇಜುಗಳು, ಐಟಿಐಗಳು, ಡಿಪ್ಲೊಮಾ ಕಾಲೇಜುಗಳು ಹಾಗೂ ತಾಂತ್ರಿಕ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮತದಾನದ ಮಹತ್ವ ಸಾರುವ ಪ್ರಚಾರ ಫಲಕಗಳನ್ನು ಅಲ್ಲಲ್ಲಿ ಹಾಕಲಾಗಿದೆ. ಚುನಾವಣಾ ಆಯೋಗದಿಂದಲೂ ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ನಡೆದಿದೆ. ಇದೆಲ್ಲದರಿಂದಾಗಿ ಯುವಜನರ ನೋಂದಣಿ ಗಮನಾರ್ಹ ಪ್ರಮಾಣದಲ್ಲಿ ನಡೆದಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯು, ನಾಮಪತ್ರಗಳನ್ನು ಸಲ್ಲಿಸಲು ನಿಗದಿ‍ಪಡಿಸಲಾಗುವ ಕೊನೆಯ ದಿನದವರೆಗೂ ನಡೆಯಲಿದೆ. ಹೀಗಾಗಿ, ಹೆಸರು ಸೇರಿಸಲು, ವಿಳಾಸ ಸರಿಪಡಿಸಲು, ದೋಷಗಳಿದ್ದಲ್ಲಿ ಸರಿ ಮಾಡಿಸಲು ಹಾಗೂ ಹೆಸರು ತೆಗೆದು ಹಾಕಿಸಲು ಅವಕಾಶವಿದೆ’ ಎನ್ನುತ್ತಾರೆ ಅವರು.

ಉತ್ತಮ ಸಮಾಜಕ್ಕಾಗಿ: ‘ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು, ಉತ್ತಮ ಸಮಾಜಕ್ಕಾಗಿ ಉತ್ತಮ ವ್ಯಕ್ತಿಗಳನ್ನು ನಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲು ಮತದಾನ ಮಾಡಬೇಕಾಗುತ್ತದೆ. ಇದಕ್ಕೆ ಅರ್ಹರಾದವರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬೇಕು. ಹಕ್ಕು ಚಲಾಯಿಸದೇ, ಕರ್ತವ್ಯವನ್ನು ನಿರ್ವಹಿಸದೇ ವ್ಯವಸ್ಥೆ ಸರಿ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಪ್ರತಿ ಮತಕ್ಕೂ ಬಹಳ ಮೌಲ್ಯವಿದೆ. ಇದಕ್ಕಾಗಿ, ಮತದಾನದ ಹಕ್ಕು ಚಲಾಯಿಸುವುದು ಪ್ರಮುಖ ಜವಾಬ್ದಾರಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT