ಬುಧವಾರ, ನವೆಂಬರ್ 13, 2019
21 °C
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿ

ಸ್ವಜಾತಿಯವರಿಂದಲೇ ಬಹಿಷ್ಕಾರ ಆರೋಪ: ತಹಶೀಲ್ದಾರ್‌ಗೆ ಮನವಿ

Published:
Updated:
Prajavani

ಎಂ.ಕೆ.ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ‘ಸ್ವಜಾತಿಯವರೇ ತಮ್ಮನ್ನು ಸಮುದಾಯದಿಂದ ಬಹಿಷ್ಕರಿಸಿದ್ದಾರೆಂದು’ ಆರೋಪಿಸಿ ದಲಿತ ಕುಟುಂಬವೊಂದು ಕಿತ್ತೂರು ತಹಶೀಲ್ದಾರ್‌ ಕಚೇರಿ ಮೆಟ್ಟಿಲೇರಿದೆ.

ತಮ್ಮನ್ನು ಸಮುದಾಯದಿಂದ ಬಹಿಷ್ಕರಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಳಗಾವಿಯ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯ ಕಾಶವ್ವ ಶಂಕರ ಹಿಂಡಲಗಿ ಕುಟುಂಬ ಗುರುವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಆ.26ರಂದೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗುರುವಾರ ಬೆಳಕಿಗೆ ಬಂದಿದೆ.

‘ಕ್ಷುಲ್ಲಕ ಕಾರಣಕ್ಕಾಗಿ ಸ್ವಜಾತಿ ಬಾಂಧವರೇ ಬಹಿಷ್ಕಾರ ಹಾಕಿದ್ದಾರೆ. ಸ್ಮಶಾನಕ್ಕೂ ನಿರ್ಬಂಧಿಸುವ ಎಚ್ಚರಿಕೆ ನೀಡಿದ್ದಾರೆ. ನಮ್ಮವರಿಂದಲೇ ಹೀಗಾದರೆ ನಮಗೆ ರಕ್ಷಣೆ ಕೊಡುವವರ‍್ಯಾರು? ನಮಗೆ ನ್ಯಾಯ ಬೇಕಿದೆ’ ಎಂದು ಕಾಶವ್ವ ಹಿಂಡಲಗಿ, ಶಂಕರ ಹಿಂಡಲಗಿ, ರಾಜಶೇಖರ ಹಿಂಡಲಿ, ಅದೃಶ್ಯ ಹಿಂಡಲಗಿ ಮನವಿಯಲ್ಲಿ ಆಗ್ರಹಿಸಿದರು.

ವಿಷಯ ಗಮನಕ್ಕೆ ಬರುತ್ತಿದ್ದಂತೆ ಕಿತ್ತೂರು ತಹಶೀಲ್ದಾರ್‌ ಪ್ರವೀಣ ಜೈನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕುಟುಂಬಕ್ಕೆ ಭರವಸೆ ನೀಡಿದರು.

ಏನಿದು ಘಟನೆ: ಎಂ.ಕೆ.ಹುಬ್ಬಳ್ಳಿ ಪಟ್ಟಣದ ಅಂಬೇಡ್ಕರ್ ಗಲ್ಲಿಯಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅಂತ್ಯಕ್ರಿಯೆ ಸಂದರ್ಭ ಸಹಿ ವಿಚಾರಕ್ಕೆ ಸಂಬಂಧಿಸಿದಂತೆ ಅದೃಶ್ಯ ಹಿಂಡಲಗಿ (ಬಹಿಷ್ಕಾರಕ್ಕೊಳಗಾಗಿದ್ದಾರೆ ಎನ್ನಲಾದ ಕುಟುಂಬದ ಸದಸ್ಯ) ಮತ್ತು ಅದೇ ಸಮುದಾಯದ ಪ್ರಮುಖರ ನಡುವೆ ಮನಸ್ತಾಪ ಉಂಟಾಗಿದ್ದೇ ಈ ಪ್ರಕರಣಕ್ಕೆ ಕಾರಣ ಎನ್ನಲಾಗಿದೆ.

* ಹಿಂಡಲಗಿ ಕುಟುಂಬ ಮಾಡಿರುವ ಬಹಿಷ್ಕಾರ ಆರೋಪದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳುತ್ತೇನೆ

-ಪ್ರವೀಣ ಜೈನ್, ತಹಶೀಲ್ದಾರ್‌

* ಹಿರಿಯರು ಕೈಗೊಂಡ ನಿರ್ಧಾರಕ್ಕೆ ಅಡ್ಡಿ ಪಡಿಸಿದ ಅದೃಶ್ಯ ಹಿಂಡಲಗಿಗೆ ಸಮುದಾಯದ ಪ್ರಮುಖರು ತಿಳಿವಳಿಕೆ ನೀಡಿದ್ದಾರೆ. ಬಹಿಷ್ಕಾರದ ಮಾತುಗಳೇ ಬಂದಿಲ್ಲ

-ಬಾಳೇಶ ಪಾಗಾದ, ಪ.ಪಂ ಸದಸ್ಯ ಹಾಗೂ ದಲಿತ ಸಮುದಾಯದ ಪ್ರಮುಖ

ಪ್ರತಿಕ್ರಿಯಿಸಿ (+)