ಶನಿವಾರ, ಆಗಸ್ಟ್ 17, 2019
27 °C
ಏರ್‌ಮಾರ್ಷಲ್‌ ಎಸ್‌.ಕೆ. ಘೋಟಿಯಾ ಮಾಹಿತಿ

ಹೆಲಿಕಾಪ್ಟರ್‌ ಕಾರ್ಯಾಚರಣೆ: 700 ಮಂದಿ ರಕ್ಷಣೆ

Published:
Updated:

ಬೆಳಗಾವಿ: ‘ಜಿಲ್ಲೆಯೂ ಸೇರಿದಂತೆ ವಿವಿಧೆಡೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ 700ಕ್ಕೂ ಹೆಚ್ಚಿನ ಜನರನ್ನು 5 ಹೆಲಿಕಾಪ್ಟರ್‌ಗಳ ಕಾರ್ಯಾಚರಣೆ ಮೂಲಕ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ಏರ್‌ಮಾರ್ಷಲ್‌ ಎಸ್‌.ಕೆ. ಘೋಟಿಯಾ ತಿಳಿಸಿದರು.

ತಾಲ್ಲೂಕಿನ ಸಾಂಬ್ರಾದಲ್ಲಿರುವ ಏರ್‌ಮನ್‌ ತರಬೇತಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.‌

‘ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಆ. 8ರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದೆ. ಹಲವು ಪ್ರದೇಶಗಳಿಗೆ ಆಹಾರದ ಪೊಟ್ಟಣ, ಕುಡಿಯುವ ನೀರಿನ ಬಾಟಲಿಗಳು ಹಾಗೂ ಪರಿಹಾರ ಸಾಮಗ್ರಿಗಳನ್ನು ಇಳಿಸಿ ಜನರಿಗೆ ನೆರವಾಗಿದ್ದೇವೆ. ನಿರಾಶ್ರಿತರ ವಸ್ತುಗಳನ್ನು ಕೂಡ ಸಾಗಿಸಿದ್ದೇವೆ. ಹಂಪಿ ಪ್ರದೇಶವೊಂದರಲ್ಲೇ 200ಕ್ಕೂ ಹೆಚ್ಚಿನ ಜನರನ್ನು ರಕ್ಷಣೆ ಮಾಡಿದ್ದೇವೆ. ಇದರಲ್ಲಿ ಅನೇಕ ವಿದೇಶಿಯರೂ ಸೇರಿದ್ದಾರೆ. ಅನೇಕ ಕಡೆಗಳಲ್ಲಿ ಹವಾಮಾನ ಸಹಕರಿಸುತ್ತಿರಲಿಲ್ಲ. ಈ ನಡುವೆಯೂ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಪೈಲಟ್‌ಗಳು ಅತ್ಯಂತ ‌ಪರಿಣತರಿದ್ದಾರೆ. ಸೋಮವಾರ ಕೊಪ್ಪಳ ಜಿಲ್ಲೆಯ ವಿರೂಪಾಪುರ ಗಡ್ಡೆಯಲ್ಲಿ ನಡು ನೀರಿನಲ್ಲಿ ಸಿಲುಕಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ಕೂಡ ರಕ್ಷಣೆ ಮಾಡಿದ್ದಾರೆ. ಪ್ರತಿಕೂಲ ಸಂದರ್ಭದಲ್ಲೂ ನೆರವಾಗಿದ್ದಾರೆ. ಸಂಕಷ್ಟದಲ್ಲಿರುವವರು ನಮ್ಮ ಕುಟುಂಬದವರು ಎಂದು ಭಾವಿಸಿ ವಾಯುಪಡೆಯ ಯೋಧರು ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‘ನಮಗೆ ಸರ್ಕಾರದಿಂದ ಸ್ಥಳದ ಮಾಹಿತಿ ಸಿಕ್ಕ ಕಾರ್ಯಾಚರಣೆ ಆರಂಭಿಸುತ್ತಿದ್ದೆವು. ಅವಶ್ಯವಿರುವ ಕಡೆಗಳಲ್ಲಿ ಆಹಾರದ ಪೊಟ್ಟಣಗಳನ್ನೂ ಪೂರೈಸಿದ್ದೇವೆ. ರಕ್ಷಿಸಿದವರನ್ನು ಜಿಲ್ಲಾಡಳಿತ ಸುಪರ್ದಿಗೆ ನೀಡುತ್ತಿದ್ದೇವೆ’ ಎಂದರು.

ಬಳಿಕ ಏರ್‌ಫೋರ್ಟ್‌ ಸ್ಟೇಷನ್‌ನಲ್ಲಿ ಮಳೆಯಿಂದ ಆಗಿರುವ ಹಾನಿಯನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಏರ್‌ಮನ್ ಟ್ರೈನಿಂಗ್‌ ಸ್ಕೂಲ್‌ನ ಏರ್‌ಆಫೀಸರ್ ಕಮಾಂಡಿಂಗ್‌ ಆರ್‌. ರವಿಶಂಕರ್ ಇದ್ದರು.

Post Comments (+)