ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ಮೇಲೊಂದು ಸರ್ಕಾರಿ ಕಾಲೇಜು

ಕಟ್ಟಡ ಥಳಕು; ಸಂಪರ್ಕ ರಸ್ತೆ ಮಾತ್ರ ಹುಳುಕು
Last Updated 8 ಏಪ್ರಿಲ್ 2021, 5:44 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಕಿತ್ತೂರಿನ ಹೊರವಲಯದಲ್ಲಿ ಚಿಗುರ ಬೆಟ್ಟದ ಮೇಲೆ ಕಂಗೊಳಿಸುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಾರಂಭವಾಗಿ ಒಂದೂವರೆ ದಶಕ ಸಮೀಪಿಸುತ್ತಿದೆ. 2007ನೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕೇವಲ 36 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಕಾಲೇಜು ಆರಂಭವಾಗಿತ್ತು. ಈಗಿಲ್ಲಿ 736 ವಿದ್ಯಾರ್ಥಿಗಳು ವಿವಿಧ ಪದವಿ ವಿಭಾಗದಲ್ಲಿ ಓದುತ್ತಿದ್ದಾರೆ.

ಐದು ಎಕರೆ ವಿಶಾಲ ಜಾಗಯಲ್ಲಿರುವ ಕಾಲೇಜಿನ ಸುತ್ತಲಿನ ವಾತಾವರಣವೆ ವಿದ್ಯಾರ್ಥಿಗಳಿಗೆ ಮುದ ನೀಡುವಂತಿದೆ. ವಾಹನ ಗಲಾಟೆ ಇಲ್ಲಿಲ್ಲ, ಶುದ್ಧ ಗಾಳಿಗೂ ಕೊರತೆ ಇಲ್ಲ.

ಬಡ ವಿದ್ಯಾರ್ಥಿಗಳಿಗೆ ಆಧಾರ

‘ಖಾಸಗಿ ಕಾಲೇಜುಗಳ ಶುಲ್ಕದ ಭಾರದಿಂದ ತತ್ತರಿಸಿರುವ ಗ್ರಾಮೀಣ ಭಾಗದ ಪೋಷಕರಿಗೆ ಈ ಕಾಲೇಜು ಆಶಾಕಿರಣವಾಗಿದೆ. ನ್ಯಾಕ್ ಮತ್ತು ಯುಜಿಸಿ 12ಬಿ ಮಾನ್ಯತೆ ಕಾಲೇಜು ಪಡೆದಿದ್ದು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಶಾಶ್ವತ ಸಂಯೋಜನೆ ಹೊಂದಿದೆ’ ಎಂದು ಪ್ರಾಚಾರ್ಯ ಮಾರುತಿ ಎಂ. ತಿಳಿಸುತ್ತಾರೆ.

‘ಗುಣಾತ್ಮಕ ಶಿಕ್ಷಣ, ಜಾಗತಿಕ ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು, ಸಂಶೋಧನೆಗೆ ಅವಕಾಶ, ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಹಾಗೂ ಪರಿಣಾಮಕಾರಿ ಸಂವಹನ ಕೌಶಲ ಅಭಿವೃದ್ಧಿಗೆ ಅಗತ್ಯ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.

ಹೆಗ್ಗಳಿಕೆ

ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ವಿಭಾಗಗಳಿವೆ. ತಾಲ್ಲೂಕಿನ ವಿಜ್ಞಾನ ವಿಷಯ ಹೊಂದಿರುವ ಏಕೈಕ ಸರ್ಕಾರಿ ಪದವಿ ಕಾಲೇಜು ಎಂಬ ಹೆಗ್ಗಳಿಕೆ ಇಲ್ಲಿನದು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಡಿಯಲ್ಲಿ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ತರಬೇತಿ ನೀಡುವ ಏಕೈಕ ಕಾಲೇಜು ಎಂಬ ಕೀರ್ತಿ ಇದಕ್ಕಿದೆ. ಮೈಸೂರು ಸಾಂಸ್ಕೃತಿಕ ಉತ್ಸವದಲ್ಲಿ ಉತ್ತರ ಕರ್ನಾಟಕ ಪ್ರತಿನಿಧಿಸಿದ ಏಕೈಕ ಸರ್ಕಾರಿ ಕಾಲೇಜು ಇದಾಗಿದೆ ಎಂಭ ಹೆಮ್ಮೆ ಪ್ರಾಚಾರ್ಯರದ್ದು.

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಗಮನಾರ್ಹ ಸಾಧನೆಯನ್ನು ಸರ್ಕಾರಿ ಕಾಲೇಜು ಮಾಡಿದೆ. ಜ. 26ರ ಗಣರಾಜ್ಯೋತ್ಸವ ಜಿಲ್ಲಾ ಮಟ್ಟದ ಪಥಸಂಚಲನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಪಡೆದಿದ್ದಾರೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ವಾಲಿಬಾಲ್ ಟೂರ್ನಿಯಲ್ಲಿ ‘ಹ್ಯಾಟ್ರಿಕ್’ ಚಾಂಪಿಯನ್ ಆಗಿ ಕಾಲೇಜು ಹೊರಹೊಮ್ಮಿದೆ. ಜುಡೋ, ಕುಸ್ತಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡು ಕೀರ್ತಿ ತಂದ ವಿದ್ಯಾರ್ಥಿಗಳೂ ಇಲ್ಲಿದ್ದಾರೆ.

ಉತ್ತಮ ಪರಿಸರದಲ್ಲಿಯ ಕಟ್ಟಡ, ಕೊರತೆಯಿಲ್ಲದ ಶ್ರೇಷ್ಠ ಬೋಧಕ ಸಿಬ್ಬಂದಿ, ವಿಶಾಲ ಕೊಠಡಿಗಳು ವಿದ್ಯಾರ್ಥಿಗಳ ಓದಿಗೆ ಪೂರಕ ವಾತಾವರಣ ಕಲ್ಪಿಸಿವೆ ಎನ್ನುತ್ತಾರೆ ಪ್ರಾಚಾರ್ಯರು.

ಕಲ್ಲುಗಳ ರಸ್ತೆ

ಕಾಲೇಜು ವಾತಾವರಣ ವಿದ್ಯಾರ್ಥಿಗಳಿಗೆ ಸಹನೀಯವಾಗಿದ್ದರೆ, ಅದಕ್ಕೆ ಹೋಗುವ ರಸ್ತೆ ಮಾತ್ರ ತೀರಾ ಹದಗೆಟ್ಟು ಹೋಗಿದೆ. ಮುಷ್ಠಿ ಗಾತ್ರದ ಕಲ್ಲುಗಳು ಎದ್ದು ಕುಳಿತಿವೆ. ವಾಹನ ಸಾಗಿದರೆ ಆಚೇಗೆ ಸಿಡಿಯುತ್ತವೆ. ಬುಟ್ಟಿ ಮಣ್ಣನಾದರೂ ಈ ರಸ್ತೆಗೆ ಹಾಕಿಸಿ, ಸುಧಾರಿಸುವ ಕಾಳಜಿಯೂ ಇಲ್ಲಿನ ಜನಪ್ರತಿನಿಧಿ ಇಲ್ಲಿಲ್ಲವಲ್ಲ ಎಂಬ ಕೊರಗು ಪೋಷಕರು ಮತ್ತು ವಿದ್ಯಾರ್ಥಿಗಳದಾಗಿದೆ.

***

ಕಾಲೇಜಿನಲ್ಲಿ ಎಪಿಜೆ ಅಬ್ದುಲ್ ಕಲಾಂ ಸ್ಪರ್ಧಾತ್ಮಕ ಪರೀಕ್ಷೆ ಘಟಕ ತೆರೆಯಲಾಗಿದೆ. ಅದಕ್ಕೆ ವೈಯಕ್ತಿಕವಾಗಿ ₹ 24ಸಾವಿರ ವೆಚ್ಚದಲ್ಲಿ ಪುಸ್ತಕಗಳನ್ನು ಕೊಡುಗೆ ನೀಡಿದ್ದೇನೆ

- ಮಾರುತಿ ಎಂ. ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT