ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸರ್ಕಾರದ ಹಸ್ತಕ್ಷೇಪ ಖಂಡಿಸಿ ಎಬಿವಿಪಿ ಪ್ರತಿಭಟನೆ

Last Updated 16 ಡಿಸೆಂಬರ್ 2021, 11:03 IST
ಅಕ್ಷರ ಗಾತ್ರ

ಬೆಳಗಾವಿ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಹಣಕಾಸಿನ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಖಂಡಿಸಿ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದರು.

‘ರಾಜ್ಯದ ಏಕೈಕ ವೈದ್ಯಕೀಯ ವಿಶ್ವವಿದ್ಯಾಲಯವು ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಅಗ್ರಸ್ಥಾನದಲ್ಲಿದೆ. ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಿಂದ ಬರುತ್ತಾರೆ. ಪ್ರಸ್ತುತ ರಾಜ್ಯ ಸರ್ಕಾರವು ವಿ.ವಿ.ಯ ಹಣಕಾಸಿನ ವಿಷಯಗಳನ್ನು ಇನ್ಮುಂದೆ ತನ್ನ ಅಧೀನಕ್ಕೆ ತರಲು ಕಾಯ್ದೆ ತಿದ್ದುಪಡಿ ಮಾಡುತ್ತಿರುವುದು ಖಂಡನೀಯ’ ಎಂದರು.

‘ವಿಶ್ವವಿದ್ಯಾಲಯದ ಒಪ್ಪಿಗೆ ಇಲ್ಲದೆ ಸರ್ಕಾರವೇ ಏಕಪಕ್ಷಿಯವಾಗಿ ಅನುದಾನ ಖರ್ಚು ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಿನ ತಿದ್ದುಪಡಿಗೆ ಹೊರಟಿರುವುದು ಸಮಂಜಸವಲ್ಲ. ಬಳಕೆ ಕುರಿತ ಎಲ್ಲ ನಿರ್ಣಯವನ್ನೂ ವಿ.ವಿ.ಯ ಆಡಳಿತ ಮಂಡಳಿಗೇ ಬಿಡಬೇಕು’ ಎಂದು ಒತ್ತಾಯಿಸಿದರು.

‘ಒಂದು ವೇಳೆ ಸರ್ಕಾರವು ವಿಶ್ವವಿದ್ಯಾಲಯದ ಅನುದಾನ ನಿರ್ವಹಣೆಯ ಅವಕಾಶ ಪಡೆದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರದ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಕಾನೂನು ತಿದ್ದುಪಡಿ ಮಾಡಬಾರದು’ ಎಂದು ಆಗ್ರಹಿಸಿದರು.

‘ಶಿಕ್ಷಣ ಸಂಸ್ಥೆಗಳ ಒಟ್ಟು ಹಣಕಾಸಿನ ವಿಚಾರಗಳು ಸರ್ಕಾರದ ಅಧೀನಕ್ಕೆ ಬಂದರೆ ವಿವಿಯ ಹಣವು ಸರಿಯಾಗಿ ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ಉಪಯೋಗ ಆಗುವುದಿಲ್ಲ ಮತ್ತು ಸರ್ಕಾರಗಳ ಹಿತಾಸಕ್ತಿಯ ಆಧಾರದ ಮೇಲೆ ನಡೆಯುತ್ತದೆ ಎಂಬ ಆತಂಕ ಶಿಕ್ಷಣ ತಜ್ಞರದ್ದು. ಅದರಲ್ಲೂ ಅತಿ ಹೆಚ್ಚು ಹಣಕಾಸಿನ ಠೇವಣಿ ಹೊಂದಿರುವ ವಿ.ವಿ.ಯಲ್ಲಿ ಭ್ರಷ್ಟಾಚಾರ ರಹಿತವಾದ ಹಣಕಾಸಿನ ನಿರ್ವಹಣೆ ಅವಶ್ಯವಿದೆ. ಸ್ವಾಯತ್ತತೆ ದೃಷ್ಟಿಯಿಂದ ಸರ್ಕಾರ ತನ್ನ ಪ್ರಸ್ತಾವ ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಜಂಗೋಣಿ, ಕಿರಣ್ ದುಖಾಂದಾರ, ಕೃಷ್ಣ ಜೋಷಿ, ಆನಂದ ಸಾಲದಳ್ಳಿ, ಶಿವಾನಂದ ಬಿಜ್ಜರಗಿ, ಪ್ರಶಾಂತ ಮುತಾಲಿಕ್, ಮಲ್ಲಿಕಾರ್ಜುನ ಪೂಜಾರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT