ಪಟ್ಟಣಶೆಟ್ಟಿ ಸಾಧನೆ; ಚಿಮಣಿ ಬೆಳಕಲ್ಲಿ ಓದಿದವ ಈಗ ಜಿಲ್ಲಾ ಮಟ್ಟದ ಅಧಿಕಾರಿ

ಮೂಡಲಗಿ (ಬೆಳಗಾವಿ ಜಿಲ್ಲೆ): ಚಿಮಣಿ ಬೆಳಕಿನಲ್ಲಿ ಓದಿದ ವ್ಯಕ್ತಿ ಈಗ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಶ್ರದ್ಧೆ, ಪರಿಶ್ರಮವಿದ್ದರೆ ಯಶಸ್ಸು ಸಿಗುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ. ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.
ಈ ಸಾಧಕರ ಹೆಸರು ಶಿವಾನಂದ ಪಟ್ಟಣಶೆಟ್ಟಿ. ಮೂಡಲಗಿ ಶೈಕ್ಷಣಿಕ ವಲಯದ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಸರ್ಕಾರಿ ನೌಕರಿಗೆ ಸೇರಿದ್ದಾರೆ.
ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಸೈದಾಪುರದಲ್ಲಿ ಗುಡಿಸಲಿನಲ್ಲಿದ್ದುಕೊಂಡು, ಚಿಮಣಿ ಬೆಳಕಲ್ಲಿ ಓದಿ 2009ರಲ್ಲಿ ತಾಲ್ಲೂಕಿನ ಖಾನಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 94.98ರಷ್ಟು ಅಂಕ ಪಡೆದಿದ್ದರು. ಮೂಡಲಗಿ ಶೈಕ್ಷಣಿಕ ವಲಯಕ್ಕೆ ಪ್ರಥಮ ಸ್ಥಾನ ಗಳಿಸಿ ಗಮನಸೆಳೆದಿದ್ದರು.
ಬಾಲ್ಯದಲ್ಲೇ ತಂದೆ ಕಳೆದುಕೊಂಡಿದ್ದ ಅವರನ್ನು ತಾಯಿ ಕೂಲಿ ಮಾಡಿ ಸಾಕುತ್ತಿದ್ದರು. ಕಿತ್ತು ತಿನ್ನುವ ಬಡತನ ಇದ್ದಿದ್ದರಿಂದಾಗಿ ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಪಡೆಯುವುದೇ ಪ್ರಶ್ನೆಯಾಗಿತ್ತು. ‘ಚಿಮಣಿ ಬೆಳಕಲ್ಲಿ ಅರಳಿದ ಗ್ರಾಮೀಣ ಪ್ರತಿಭೆ’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ‘ಯಲ್ಲಿ ವಿಶೇಷ ವರದಿ (2009ರ ಮೇ 4ರಂದು) ಪ್ರಕಟವಾಗಿತ್ತು. ಅದನ್ನು ಗಮನಿಸಿದ ಓದುಗರು ಶಿವಾನಂದ ಅವರಿಗೆ ನೆರವಾಗಿದ್ದರು.
ಧಾರವಾಡದ ವಿದ್ಯಾಪೋಷಕ ಸಂಸ್ಥೆ, ವಿವಿಧ ಸಂಘ–ಸಂಸ್ಥೆಗಳವರು, ಶಿಕ್ಷಕರು, ವೈದ್ಯರು ಸೇರಿದಂತೆ ದಾನಿಗಳು ಆರ್ಥಿಕ ಸಹಾಯ ಮಾಡಿ ಕಲಿಕೆಗೆ ಆಸರೆಯಾದರು. ಓದಗರು ಮತ್ತು ಜನರಿಟ್ಟಿದ್ದ ಸಹಾಯವನ್ನು ಶಿವಾನಂದ ಹುಸಿ ಮಾಡಲಿಲ್ಲ. ದ್ವಿತೀಯ ಪಿಯುಸಿ ಮತ್ತು ಸಿಇಟಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. 2015ರಲ್ಲಿ ಬಿಇ ಪದವಿ ಪಡೆದಿದ್ದಾರೆ.
ಕ್ಯಾಂಪಸ್ ಸಂದರ್ಶನದಲ್ಲಿ ಕಂಪನಿಯೊಂದರ ನೌಕರಿಗೆ ಆಯ್ಕೆಯಾಗಿದ್ದರು. ಅದನ್ನು ಬಿಟ್ಟು ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಿದರು. ನಾಲ್ಕು ವರ್ಷಗಳ ಪ್ರಯತ್ನದಲ್ಲಿ ಯಶ ಗಳಿಸಿದ್ದಾರೆ. 2018ರಲ್ಲಿ ಕೆಪಿಎಸ್‌ಸಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಗಳಿಸಿ ಆಯ್ಕೆಯಾಗಿದ್ದಾರೆ.
‘ಐಎಎಸ್ ಅಧಿಕಾರಿ ಆಗಬೇಕೆಂಬ ಕನಸಿದೆ. ಅದಕ್ಕಾಗಿ ಖಾಸಗಿ ಕಂಪನಿಯೊಂದರ ನೌಕರಿ ಬಿಟ್ಟೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೂರು ಬಾರಿ ಪ್ರಿಲಿಮಿನರಿ ಹಂತ ಪಾಸ್ ಮಾಡಿದ್ದೆ. ಈಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹುದ್ದೆ ದೊರೆತಿದ್ದು ಸಂತೋಷ ನೀಡಿದೆ. ಜನರೇ ನನ್ನನ್ನು ಬೆಳೆಸಿದ್ದಾರೆ. ಜನರ ಪ್ರೀತಿ, ಸಹಾಯ ಮರೆಯುವುದಿಲ್ಲ. ವಿಶೇಷವಾಗಿ ‘ಪ್ರಜಾವಾಣಿ’ಯ ನೆರವನ್ನೂ ಮರೆಯಲಾರೆ’ ಎಂದು ಸ್ಮರಿಸಿದರು.
‘ಈಗ ಸಿಕ್ಕಿರುವ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆ ಎದುರಿಸುತ್ತೇನೆ. ಬಡತನದ ಕಷ್ಟ ಗೊತ್ತಿದೆ. ಜನರಿಗೆ ಪ್ರಾಮಾಣಿಕವಾಗಿ ಸಹಾಯ ಮಾಡುತ್ತೇನೆ’ ಎಂದು ಹೇಳಿದರು.
ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಅವರು ಶಿವಾನಂದ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಶುಭ ಕೋರಿದ್ದಾರೆ. ಇನ್ನೂ ಸ್ಥಳ ನಿಗದಿಯಾಗಿಲ್ಲ.
ಗುರುತಿಸಿದ್ದ ಯಡಿಯೂರಪ್ಪ
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಗಮನಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿವಾನಂದ ಅವರಿಗೆ ನೆರವಾಗಿದ್ದರು. 2009ರಲ್ಲಿ ಆಗಿನ ರಾಜ್ಯಪಾಲರಾಗಿದ್ದ ಎಚ್.ಆರ್. ಭಾರದ್ವಾಜ್ ಅವರಿಂದ ‘ಎಸ್ಸೆಸ್ಸೆಲ್ಸಿ ಪ್ರತಿಭಾ ಪುರಸ್ಕಾರ’ ಕೊಡಿಸಿದ್ದರು. 2011ರಲ್ಲಿ ಸಿಇಟಿ ಪರೀಕ್ಷೆಯಲ್ಲಿ 124ನೇ ರ‍್ಯಾಂಕ್ ಪಡೆದಾಗಲೂ ಯಡಿಯೂರಪ್ಪ ಅವರು ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿದ್ದರು. ವರದಿ ಗಮನಿಸಿ ‘ಪ್ರಜಾವಾಣಿ’ ಸಂಪಾದಕರಿಗೆ ಪತ್ರ ಬರೆದು ಅಭಿನಂದಿಸಿದ್ದರು.
ಹಣ ಕೊಟ್ಟಿಲ್ಲ
ಸರ್ಕಾರಿ ನೌಕರಿಯು ಲಂಚದ ಮೇಲೆ ದೊರೆಯುತ್ತವೆ ಎನ್ನುವುದು ಸುಳ್ಳು. ನನಗೆ ಪ್ರತಿಭೆಯಿಂದಾಗಿ ಕೆಲಸ ಸಿಕ್ಕಿದೆ. ಎಲ್ಲಿಯೂ, ಯಾರಿಗೂ ಹಣ ಕೊಟ್ಟಿಲ್ಲ.
-ಶಿವಾನಂದ ಪಟ್ಟಣಶೆಟ್ಟಿ
ಮಾದರಿಯಾಗಿದ್ದಾರೆ
ಕಡು ಬಡತನದಲ್ಲಿಯೂ ಶಿವಾನಂದ ಪಟ್ಟಣಶೆಟ್ಟಿ ಛಲ ಬಿಡದೆ ಓದಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
-ಅಜಿತ್ ಮನ್ನಿಕೇರಿ, ಬಿಇಒ, ಮೂಡಲಗಿ ವಲಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.