ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯ ತಾಣವೆಂದು ಘೋಷಿಸಲು ಕ್ರಮ: ಅನಂತ ಹೆಗಡೆ ಅಶೀಸರ ಹೇಳಿಕೆ

Last Updated 12 ಫೆಬ್ರುವರಿ 2021, 14:25 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಮದುರ್ಗದ ಶಬರಿಕೊಳ್ಳ, ಗೋಕಾಕದ ಯೋಗಿಕೊಳ್ಳ, ಗೊಡಚಿನಮಲ್ಕಿ, ಹೊರವಲಯದ ಕಣಬರಗಿ ಸಿದ್ಧೇಶ್ವರ ದೇವಸ್ಥಾನ, ಕಾಕತಿ ಸಮೀಪದ ಬಸವನಕೊಳ್ಳ ಸೇರಿದಂತೆ ವಿವಿಧ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಅವುಗಳನ್ನು ಜೀವವೈವಿಧ್ಯ ತಾಣಗಳನ್ನಾಗಿ ಘೋಷಿಸಲು ನಿರ್ಧರಿಸಲಾಗುವುದು’ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಜೀವವೈವಿಧ್ಯ ವಿಶೇಷತೆ ಒಳಗೊಂಡಿರುವ ಕೆರೆ, ಗುಡ್ಡ ಮತ್ತಿತರ ಪ್ರದೇಶಗಳನ್ನು ಗುರುತಿಸಿ ಅವುಗಳ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸದ್ಯದಲ್ಲೇ ರೂಪುರೇಷೆಗಳನ್ನು ರೂಪಿಸಲಾಗುವುದು. ಅರಣ್ಯ ಭೂಮಿ ರಕ್ಷಣೆಗೆ ಸಂಬಂಧಿಸಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆ ಸೂಕ್ತ ಯೋಜನೆ ರೂಪಿಸಬೇಕು’ ಎಂದು ಸೂಚಿಸಿದರು.

‘ಹೋಟೆಲ್, ವಸತಿನಿಲಯ ಮತ್ತಿತರ ಕಡೆಗಳಲ್ಲಿ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆಗೆ ಸಣ್ಣ ಘಟಕಗಳನ್ನು ನಿರ್ಮಿಸಲು ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಆದ್ಯತೆ ನೀಡಬೇಕು. ಎಸ್‌ಸಿಪಿ–ಟಿಎಸ್‌ಪಿ ಅನುದಾನದಲ್ಲಿ ಫಲಾನುಭವಿಗಳಿಗೆ ಸೋಲಾರ್ ದೀಪಗಳನ್ನು ವಿತರಿಸಬೇಕು’ ಎಂದು ಸಲಹೆ ನೀಡಿದರು.

‘ನಗರದ ವ್ಯಾಕ್ಸಿನ್ ಡಿಪೊವನ್ನು ಜೀವವೈವಿಧ್ಯ ತಾಣ ಎಂದು ಘೋಷಿಸುವ ಕುರಿತು ಪರಿಶೀಲಿಸಬಹುದು. ಆರೋಗ್ಯ ಇಲಾಖೆಯ ಕೆಲ ಕಚೇರಿಗಳು ಅಲ್ಲಿದ್ದು, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ಎಸ್.ಕೆ. ಕಲ್ಲೋಳಕರ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ್ ಹೊನಕೇರಿ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಎಚ್.ಡಿ. ಕೋಳೇಕರ, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ ಇದ್ದರು.

‘ಕೆರೆಗಳ ರಕ್ಷಣೆಗೆ ಕ್ರಮ’
ಬೆಳಗಾವಿ:
‘ಪರಿಸರ ಸಂಪನ್ಮೂಲಕ್ಕೆ ಹಾನಿ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಇದಕ್ಕಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿ ರಚಿಸಲಾಗಿದೆ. ಕೆರೆ, ಬೆಟ್ಟ, ಅರಣ್ಯ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅನಂತ ಅಶೀಸರ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಇದೆ. ಇದರ ರಕ್ಷಣೆಗೆ ಆದ್ಯತೆ ನೀಡಲು ತಿಳಿಸಲಾಗಿದೆ. ಇದಕ್ಕಾಗಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಯೋಜನೆ ರೂಪಿಸಲು ನಿರ್ಧಾರಿಸಲಾಗಿದೆ’ ಎಂದರು.

‘ಮೇ 22ರಂದು ಜೀವವೈವಿಧ್ಯ ದಿನಾಚರಣೆ. ಅಂದು ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. 2019ರಲ್ಲಿ 4.15 ಮತ್ತು 2020ರಲ್ಲಿ 4 ಲಕ್ಷ ಸಸಿಗಳನ್ನು ನೆಡಲಾಗಿದೆ. ಕೆರೆಗಳ ಅಭಿವೃದ್ಧಿ ಬಹಳ ಮುಖ್ಯವಾಗಿದೆ. ಇದರಿಂದ ಸುತ್ತಮುತ್ತ ಒಳ್ಳೆಯ ವಾತಾವರಣ ಸೃಷ್ಟಿಸಲು ಸಾಧ್ಯ. ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದೊಂದಿಗೆ ಕೆರೆಕಟ್ಟೆಗಳ ಜೊತೆಗೆ ಜೀವವೈವಿಧ್ಯ ರಕ್ಷಣೆಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

‘ಗ್ರಾಮ ಪಂಚಾಯ್ತಿ ಮಟ್ಟದ ಸಮಿತಿಗಳನ್ನು ಸಬಲೀಕರಣಗೊಳಿಸಿ ಕಾರ್ಯಚಟುವಟಿಕೆಗಳನ್ನು ಆರಂಭಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT