ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಸಾಹಿತಿ ಗುರುದೇವಿ ಹುಲೆಪ್ಪನವರಮಠ ಅಭಿಮತ

‘ಮಾನವನ ಸ್ವಾರ್ಥದಿಂದ ಪ್ರಕೃತಿ ವಿಕೋಪ’

Published:
Updated:
Prajavani

ಬೆಳಗಾವಿ: ‘ಮಾನವನ ದುರಾಸೆ ಹಾಗೂ ಸ್ವಾರ್ಥ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ’ ಎಂದು ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದಿಂದ ಇಲ್ಲಿನ ಶಿವಬಸವ ನಗರದಲ್ಲಿ ಅಮಾವಾಸ್ಯೆ ಕಾರ್ಯಕ್ರಮ ಅಂಗವಾಗಿ ಈಚೆಗೆ ಆಯೋಜಿಸಿದ್ದ ‘ವಚನ ಸಾಹಿತ್ಯದಲ್ಲಿ ಪ್ರಕೃತಿ ಪ್ರಕೋಪ ಹಾಗೂ ಪರಿಹಾರ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಕೃತಿಯ ಭಾಗವಾದ ನಾವು ಅದಕ್ಕೆ ಪೂರಕವಾಗಿ ಜೀವನ ನಡೆಸಬೇಕು. ಪ್ರಕೃತಿಗೆ ನಾವು ಎಸಗುತ್ತಿರುವ ಕ್ರೌರ್ಯದ ಪ್ರತಿಫಲವಾಗಿಯೇ ಹಲವು ಅವಘಡಗಳು ನಡೆಯುತ್ತಿವೆ. ಬಸವಣ್ಣ ಹೇಳುವಂತೆ ಪ್ರಕೃತಿ ಸಹಜವಾದ ಬದುಕು ನಮ್ಮದಾಗಬೇಕು. ಪರಿಸರದಲ್ಲಿ ಸಮತೋಲನ ಕಾಯ್ದುಕೊಂಡರೆ ಮಾತ್ರ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯ’ ಎಂದು ತಿಳಿಸಿದರು.

ಆರ್‌ಸಿಯು ಸಹಾಯಕ ಪ್ರಾಧ್ಯಾಪಕಿ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಮಾತನಾಡಿ, ‘ವಿಜ್ಞಾನ, ತಂತ್ರಜ್ಞಾನ ಬೆಳೆದಿದೆ. ಆದರೆ, ಸದ್ಬಳಕೆಯ ಕೊರತೆಯು ಪ್ರಾಕೃತಿಕ ತೊಂದರೆಗಳಿಗೆ ದಾರಿ ಮಾಡಿಕೊಡುತ್ತಿದೆ. ಯಾವುದನ್ನು ಕಾಯಬೇಕು, ಕೊಲ್ಲಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಿಸರ್ಗಕ್ಕಿದೆ. ವಚನಗಳಲ್ಲಿನ ಸಾರ ಅಳವಡಿಸಿಕೊಳ್ಳುವುದರಿಂದ ಪ್ರಾಕೃತಿಕ ವಿಕೋಪಗಳನ್ನು ತಡೆಯಬಹುದು’ ಎಂದರು.

ಲೇಖಕ ಡಾ.ಮಹೇಶ ಗುರನಗೌಡರ ಮಾತನಾಡಿ, ‘ಪ್ರಕೃತಿಯನ್ನು ಪ್ರೀತಿಸುವ ಮನೋಭಾವ ನಮ್ಮದಾದರೆ ತೊಂದರೆಗಳನ್ನು ತಡೆಗಟ್ಟಬಹುದು. ಮರಗಳನ್ನು ಪೋಷಿಸಿ, ಬೆಳೆಸುವ ಮೂಲಕ ಪರಿಸರ ಕಾಪಾಡಬಹುದು’ ಎಂದು ಹೇಳಿದರು.

ಪ್ರೊ.ವಿ.ಬಿ. ದೊಡಮನಿ, ಭಾರತಿ ತೊರಗಲ್ಲ, ಜ್ಯೋತಿ ಬಾದಾಮಿ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ‘ಎಲ್ಲ ಸಮಸ್ಯೆಗಳಿಗೂ ಶರಣರ ವಚನಗಳಲ್ಲಿ ಪರಿಹಾರವಿದೆ. ಅವುಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಡಾ.ವಿಜಯಲಕ್ಷ್ಮಿ ಪುಟ್ಟಿ, ಕಲ್ಯಾಣರಾವ್ ಮುಚಳಂಬಿ, ಪ್ರೊ.ಎ.ಬಿ. ಕೊರಬು, ಯ.ರು. ಪಾಟೀಲ, ಜ್ಯೋತಿ ಭಾವಿಕಟ್ಟಿ ಉಪಸ್ಥಿತರಿದ್ದರು.

ಡಾ.ಭಾರತಿ ಮಠದ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ವಕೀಲ ವಿ.ಕೆ. ಪಾಟೀಲ ವಂದಿಸಿದರು.

Post Comments (+)