ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ವಾಪಸ್‌ಗೆ ಹೋರಾಟ: ಎಸ್.ಆರ್.ಹಿರೇಮಠ

ಸಮಾಜ ಪರಿವರ್ತನಾ ಸಮಾಜದ ಅಧ್ಯಕ್ಷ ಹಿರೇಮಠ
Last Updated 31 ಜನವರಿ 2022, 14:38 IST
ಅಕ್ಷರ ಗಾತ್ರ

ಬೆಳಗಾವಿ: ‘ಮೂರು ಕರಾಳ ಕೃಷಿ ಕಾಯ್ದೆಗಳನ್ನು ರಾಜ್ಯದಲ್ಲೂ ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿ ಅಹಿಂಸಾತ್ಮಕ ಹೋರಾಟ ನಡೆಸಲಾಗುವುದು. ಬಿಜೆಪಿ ಶಾಸಕರ ಮೇಲೆ ಒತ್ತಡ ಹೇರಲಾಗುವುದು’ ಎಂದು ಸಮಾಜ ಪರಿವರ್ತನಾ ಸಮಾಜದ ಅಧ್ಯಕ್ಷ ಎಸ್.ಆರ್. ಹಿರೇಮಠ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು.

‘ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ತಡೆ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು (ತಿದ್ದುಪಡಿ) ಹಿಂಪಡೆಯಬೇಕು. ಎಪಿಎಂಸಿಗಳ ಖಾಸಗೀಕರಣಕ್ಕೆ ಆಸ್ಪದ ನೀಡಬಾರದು’ ಎಂದು ಒತ್ತಾಯಿಸಿದರು.

‘ಜನಾಂದೋಲನ ಮಹಾಮೈತ್ರಿ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ರಾಜ್ಯ ಬಜೆಟ್ ಗಮನದಲ್ಲಿಟ್ಟುಕೊಂಡು ಬೀದರ್ ಜಿಲ್ಲೆಯ ಬಸವಕಲ್ಯಾಣ ಅನುಭವ ಮಂಟಪದಿಂದ‌ ಮತ್ತು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿಗೆ ಜಾಥಾ ನಡೆಸಲಾಗುವುದು. ಕರಾಳ ಕಾಯ್ದೆಗಳ ರದ್ದತಿಗಾಗಿ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನಸಳೆಯಲಾಗುವುದು’ ಎಂದು ತಿಳಿಸಿದರು.

ಖಾಸಗಿ ಮಾರುಕಟ್ಟೆ ಮುಚ್ಚಿಸಿ:

‘ಬೆಳಗಾವಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪರ್ಯಾಯವಾಗಿ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಆರಂಭಿಸಲಾಗಿದೆ. ಕೂಡಲೇ ಅದನ್ನು ಸ್ಥಗಿತಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಎಂದು ಹೆದರಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಎಂಎಸ್‌ಪಿ ಬಗ್ಗೆ ಸಮಿತಿ ರಚಿಸಿದ್ದಾಗಿ ಹೇಳಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಆ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಭಿನ್ನತೆ ಏನಿಲ್ಲ. ರೈತ ವಿರೋಧಿ ಕಾಯ್ದೆಗಳಿಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಇಬ್ಬರೂ ಹೊಣೆಗಾರರಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಶೇ 20 ಇದ್ದ ಅಪರಾಧ ಪ್ರಮಾಣ ಈಗ ಶೇ 40ಕ್ಕೆ ಏರಿದೆ. ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳನ್ನು ಕಿತ್ತೊಗೆದರೆ ಮಾತ್ರ ಜನರಿಗೆ ನ್ಯಾಯ ಸಿಗಲಿದೆ’ ಎಂದರು.

ರದ್ದುಗೊಳಿಸಿ:

ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ, ‘ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಕಾನೂನುಬಾಹಿರವಾಗಿದೆ. ಅದನ್ನು ರದ್ದುಗೊಳಿಸಿ ಎಪಿಎಂಸಿ ಮಾರುಕಟ್ಟೆಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಆ ಮಾರುಕಟ್ಟೆ ವಿರುದ್ಧ ರೈತಪರ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಮಹಿಳಾ, ಯುವಜನ, ಸಾಮಾಜಿಕ ಹೋರಾಟಗಾರರ ನೇತೃತ್ವದಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸಲಾಗುವುದು. ಸಂಯುಕ್ತ ಕಿಸಾನ್ ಮೋರ್ಚಾ ನಡೆಸಿದ ಮಾದರಿಯಲ್ಲಿ ಇಲ್ಲೂ ಹೋರಾಟ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿದೆ’ ಎಂದು ತಿಳಿಸಿದರು.

ರಾಜ್ಯ ರೈತ ಸಂಘ ಕಾರ್ಯದರ್ಶಿ ರವಿಕಿರಣ, ಭೂಮಿ ಹಾಗೂ ವಸತಿವಂಚಿತರ ಸಂಘದ ಅಧ್ಯಕ್ಷ ಸಿರಿಮನೆ ನಾಗರಾಜ, ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಸದಸ್ಯ ಟಿ. ಯಶವಂತ, ಎಐಸಿಇಟಿಯು ಸದಸ್ಯ ಪಿ.ಆರ್‌.ಎಸ್. ಮಣಿ, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ವರದ ರಾಜೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT