ಬಡ್ತಿ ಮೀಸಲಾತಿ ಕಾಯ್ದೆ–2018ಕ್ಕೆ ವಿರೋಧ

7
ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ನೌಕರರ ಪ್ರತಿಭಟನೆ

ಬಡ್ತಿ ಮೀಸಲಾತಿ ಕಾಯ್ದೆ–2018ಕ್ಕೆ ವಿರೋಧ

Published:
Updated:
Deccan Herald

ಬೆಳಗಾವಿ: ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಬಡ್ತಿ ಮೀಸಲಾತಿ ಕಾಯ್ದೆ–2018ನ್ನು ವಿರೋಧಿಸಿ ಹಾಗೂ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ಒತ್ತಾಯಿಸಿ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳಲ್ಲಿ ಸೇವಾನಿರತ ಮತ್ತು ನಿವೃತ್ತ ನೌಕರರ ಹಿತರಕ್ಷಣಾ ಒಕ್ಕೂಟ) ಸಂಘಟನೆ ಜಿಲ್ಲಾ ಘಟಕದ ಸದಸ್ಯರು ಇಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

‘ರಾಜ್ಯ ಸರ್ಕಾರವು 1978ರಲ್ಲಿ ಬಡ್ತಿಯಲ್ಲೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ನೀಡುವುದನ್ನು ಜಾರಿಗೊಳಿಸಿತು. ಇದು ಕೇವಲ ಲೋಯರ್‌ ಕ್ಲಾಸ್–1 ಹುದ್ದೆವರೆಗೆ ಇದೆ. ಆದರೆ, ಬಡ್ತಿ ಮೀಸಲಾತಿಯಿಂದ ಬಡ್ತಿ ಹುದ್ದೆಗಳನ್ನು ಪಡೆದರೆ ಅವರು ವೇಗೋತ್ಕರ್ಷ ಜೇಷ್ಠತೆಯನ್ನು ಸರ್ಕಾರ ನೀಡುತ್ತಾ ಬಂದಿತು. ಈ ನೀತಿಯಿಂದ ಬಡ್ತಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಲಭಿಸಿ, ಶೇ 82ರಷ್ಟಿರುವ ಇತರ ವರ್ಗಗಳ ನೌಕರರಿಗೆ ಅನ್ಯಾಯವಾಗುತ್ತಿದೆ’ ಎಂದು ತಿಳಿಸಿದರು.

ಆದೇಶ ಜಾರಿಗೊಳಿಸಿಲ್ಲ

‘ಈ ವೇಗೋತ್ಕರ್ಷ ಜೇಷ್ಠತೆ ಅನುಸರಿಸುವ ಬಗ್ಗೆ ಸಾಮಾನ್ಯ ವರ್ಗದ ನೌಕರರಿಂದ 1992ರಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲಾಯಿತು. ನಂತರ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಅಂತಿಮವಾಗಿ 2017ರ ಫೆ.9ರಂದು ಸಾಮಾನ್ಯ ವರ್ಗದವರಿಗೆ ನ್ಯಾಯ ದೊರೆತಿದೆ. ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿಲ್ಲ. ಆದರೆ, ವೇಗೋತ್ಕರ್ಷ ಜೇಷ್ಠತೆ ನೀಡಲು ಬರುವುದಿಲ್ಲವೆಂದು ತಿಳಿಸಿದೆ. ಈ ಆದೇಶವನ್ನು ತಿಂಗಳೊಳಗೆ ಜಾರಿಗೊಳಿಸಬೇಕು ಎಂದು ತಿಳಿಸಿತ್ತು’ ಎಂದು ಹೇಳಿದರು.

‘ಸರ್ಕಾರವು ಈ ಆದೇಶ ಜಾರಿ ಮಾಡದಿರುವುದರಿಂದ ಕೋರ್ಟ್‌ನಲ್ಲಿ ನಿಂದನಾ ಅರ್ಜಿ ಹಾಕಲಾಗಿದೆ. ಸರ್ಕಾರವು ಆದೇಶ ಸಂಪೂರ್ಣವಾಗಿ ಜಾರಿಗೊಳಿಸದೇ ಅಸಿಂಧುಗೊಳಿಸಲು ಬಡ್ತಿ ಮೀಸಲಾತಿ ಕಾಯ್ದೆ–2018ನ್ನು ತಂದಿದೆ. ಈ ಕಾಯ್ದೆಯನ್ನೂ ಪ್ರಶ್ನಿಸಲಾಗಿದೆ. ಈ ಎರಡೂ ಅರ್ಜಿಗಳನ್ನು ಒಟ್ಟಾಗಿ ಸೇರಿಸಿ ವಿಚಾರಣೆ ನಡೆಸಲು ಕೋರ್ಟ್‌ ತೀರ್ಮಾನಿಸಿದೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮೌಖಿಕವಾಗಿ ತಿಳಿಸಿದೆ. ಈ ನಡುವೆ, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಸರ್ಕಾರದ ಮೇಲೆ ಒತ್ತಡ ಹೇರಿ ಬಡ್ತಿ ನೀಡಲು ಕೋರುತ್ತಿದ್ದಾರೆ. ಇದರಿಂದ ನ್ಯಾಯಾಲಯದ ಆದೇಶ ನಿಂದನೆ ಮಾಡಿದಂತಾಗುತ್ತದೆ’ ಎಂದು ಮಾಹಿತಿ ನೀಡಿದರು.

ಅಸಹಕಾರ ನೀಡಬೇಕಾದೀತು

‘ಸರ್ಕಾರವು ಶೇ 18ರಷ್ಟು ನೌಕರರ ರಕ್ಷಣೆಗೆ ಮಾತ್ರ ಮುಂದಾಗುವುದು ಸರಿಯಲ್ಲ. ಬಹುಸಂಖ್ಯಾತ ನೌಕರರು ಕೂಡ ಬಡ್ತಿ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅನ್ಯಾಯವಾಗಲು ಅವಕಾಶ ಕೊಡಬಾರದು. ಸುಪ್ರೀಂ ಕೋರ್ಟ್‌ ಆದೇಶದಂತೆ ಸರ್ಕಾರವು ಯಥಾಸ್ಥಿತಿ ಕಾಪಾಡಬೇಕು’ ಎಂದು ಕೋರಿದರು.

‘ಕೆಲವು ಸಚಿವರ ಒತ್ತಾಯಕ್ಕೆ ಮಣಿದರೆ, ರಾಜ್ಯದಾದ್ಯಂತ 10 ಲಕ್ಷಕ್ಕೂ ಹೆಚ್ಚಿನ ನಿವೃತ್ತ ಹಾಗೂ ಕಾರ್ಯನಿರತ ನೌಕರರಿಂದ ಅಸಹಕಾರ ಚಳವಳಿ ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ.ಡಿ. ನಸಲಾಪುರೆ, ಉಪಾಧ್ಯಕ್ಷ ಶಿವಾನಂದ ಹೂಗಾರ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !