ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಚೌಡಯ್ಯ ವಚನಗಳಲ್ಲಿ ಬದುಕಿನ ಸೂತ್ರ

ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
Last Updated 21 ಜನವರಿ 2020, 16:00 IST
ಅಕ್ಷರ ಗಾತ್ರ

ಬೆಳಗಾವಿ: ‘ಅಂಬಿಗರ ಚೌಡಯ್ಯ ತಮ್ಮ ವಚನಗಳ ಮೂಲಕ ಸಮಾನತೆ ಮತ್ತು ಸಹೋದರತೆಯನ್ನು ಸಾರಿದ್ದಾರೆ. ನೇರ ನುಡಿಯ ವಚನಕಾರರಾದ ಅವರು ಒಂದು ಜಾತಿ ಅಥವಾ ಕುಲಕ್ಕೆ ಸೀಮಿತವಾದವರಲ್ಲ. ಅವರ ವಚನಗಳಲ್ಲಿ ಬದುಕಿನ ಸೂತ್ರಗಳಿದ್ದು, ಅವುಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹಂಪಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಂ.ವೈ. ಭಜಂತ್ರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ ವತಿಯಿಂದ ಇಲ್ಲಿನ ಕುಮಾರಗಂಧರ್ವ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಿಜಶರಣ ಅಂಬಿಗರ ಚೌಡಯ್ಯ’ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗೌತಮ ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ನಡೆದ ದಾರಿಯಲ್ಲಿ ನಡೆಯಬೇಕು. 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಜಾತಿ ತಾರತಮ್ಯದ ವಿರುದ್ಧದ ಧ್ವನಿಯಾಗಿತ್ತು. ಚೌಡಯ್ಯನವರು ಜಾತಿಯನ್ನು ಸ್ಪಷ್ಟವಾಗಿ ವಿರೋಧಿಸಿದವರು. ಕನ್ನಡದ ಮೊಟ್ಟಮೊದಲ ಬಂಡಾಯ ಕವಿಯೂ ಹೌದು’ ಎಂದು ಸ್ಮರಿಸಿದರು.

‘ತಮ್ಮ ವಚನಗಳ ಮೂಲಕ ಜನಸಾಮಾನ್ಯರಲ್ಲಿನ ಮೂಢನಂಬಿಕೆಗಳನ್ನು ಹಾಗೂ ಅರ್ಥವಿಲ್ಲದ ಆಚರಣೆಗಳನ್ನು ಹೋಗಲಾಡಿಸಲು ಶ್ರಮಿಸಿದರು. ಅವರು ಶರಣ ಮಾತ್ರವಲ್ಲ ಅನೇಕ ಪವಾಡಗಳನ್ನು ಮಾಡಿದವರು. ಅಂಬಿಗಸ್ಥ ಸಮಾಜ ನಂಬಿಗಸ್ಥ ಸಮಾಜ’ ಎಂದರು.

ಸಮಾಜದ ಮುಖಂಡ ಬಸವರಾಜ ಸುಣಗಾರ ಮಾತನಾಡಿ, ‘ಜಯಂತಿ ಆಚರಣೆ ಕಾರ್ಯಕ್ರಮಗಳ ಮೂಲಕ ಶರಣರ ವಿಚಾರಗಳು ನಾಡಿನ ತುಂಬಾ ಪ್ರಚಾರವಾಗುತ್ತಿವೆ. ಇದು ಸಂತಸದ ಸಂಗತಿ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮುಖಂಡರಾದ ಬಿ. ಸುರೇಖಾ, ಯಲ್ಲಪ್ಪ ಹುದಲಿ, ಜಿ.ಜಿ. ತಳವಾರ, ಎಸ್.ಕೆ. ಗಸ್ತಿ ಇದ್ದರು. ರಾಜಶ್ರೀ ನಿರೂಪಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಆರಂಭವಾದ ಚೌಡಯ್ಯ ಫೋಟೊ ಮೆರವಣಿಗೆಗೆ ಉತ್ತರ ಮತಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಮಾಜದ ಮುಖಂಡರಾದ ಅಪ್ಪಾಸಾಹೇಬ ಪೂಜಾರಿ, ಮಧುಶ್ರೀ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT