‘ನಿರ್ಮಲ’ ಗ್ರಾಮಕ್ಕೆ ಮತ್ತೊಂದು ಗರಿ

7
‘ಗಾಂಧಿ ಗ್ರಾಮ ಪುರಸ್ಕಾರ’ ಪಡೆದ ಬೈಲೂರು

‘ನಿರ್ಮಲ’ ಗ್ರಾಮಕ್ಕೆ ಮತ್ತೊಂದು ಗರಿ

Published:
Updated:
Deccan Herald

ಚನ್ನಮ್ಮನ ಕಿತ್ತೂರು: ಶುದ್ಧ ಕುಡಿಯುವ ನೀರು ಪೂರೈಕೆ, ಚರಂಡಿ ವ್ಯವಸ್ಥೆ, ಉತ್ತಮ ಬೀದಿಗಳು, ಸಾರ್ವಜನಿಕರಿಗೆ ಉತ್ತಮ ಸೇವೆ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತಂದ ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯ್ತಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಭಾಜನವಾಗಿದೆ.

ಸ್ವಚ್ಛತೆ ಮತ್ತು ಉತ್ತಮ ಜನಸೇವೆಗಾಗಿ ಈ ಹಿಂದೆ ವಿಶ್ವಸಂಸ್ಥೆಯಿಂದ ನೀಡಲಾಗುವ ‘ನಿರ್ಮಲ ಗ್ರಾಮ’ ಪ್ರಶಸ್ತಿ ಕೂಡ ದೊರೆತಿತ್ತು. ಈಗ ರಾಜ್ಯ ಸರ್ಕಾರದಿಂದ ಕೊಡಲಾಗುವ ‘ಗಾಂಧಿ’ ಹೆಸರಿನ ಪುರಸ್ಕಾರ ಪಡೆದು ಬೀಗುತ್ತಿದೆ. ‘ಬೈಲೂರು ನಿಜಗುಣಾನಂದ ಸ್ವಾಮೀಜಿ ಹಾಗೂ  ಊರಿನ ಹಿರಿಯರ ಮಾರ್ಗದರ್ಶನ, ಹಿಂದೆ ಪಂಚಾಯ್ತಿಗೆ ಆಯ್ಕೆಯಾಗಿದ್ದ ಸದಸ್ಯರು ಮತ್ತು ಈಗಿರುವ ಸದಸ್ಯರ ಶ್ರಮದ ಫಲವಾಗಿ ಈ ಪ್ರಶಸ್ತಿ ದೊರೆತಿದೆ’ ಎಂದು ಸ್ಥಳೀಯರು ಹೇಳುತ್ತಾರೆ.

ಶರಣರ ಹೆಜ್ಜೆ ಗುರುತು: ಚನ್ನಮ್ಮನ ಕಿತ್ತೂರಿನಿಂದ 5 ಕಿ.ಮೀ. ದೂರದಲ್ಲಿರುವ 12ನೇ ಶತಮಾನದ ಶರಣರು ಮೆಟ್ಟಿದ ಪಾವನ ಭೂಮಿ ಬೈಲೂರು. ಬೈಲೂರು, ದೇಗಲೊಳ್ಳಿ ಗ್ರಾಮಗಳು ಪಂಚಾಯ್ತಿಗೆ ಸೇರಿವೆ. ಮಲೆನಾಡಿನ ಸೆರಗು ಎಂದು ಕರೆಸಿಕೊಳ್ಳುವ ಗ್ರಾಮ ವ್ಯಾಪ್ತಿಯ ಮುಖ್ಯ ಬೆಳೆ ಭತ್ತ ಮತ್ತು ಕಬ್ಬು. ಅಮರಶಿಲ್ಪಿ ಜಕಾಣಾಚಾರಿ ಕೆತ್ತಿದ ಈಶ್ವರಲಿಂಗ ದೇವಸ್ಥಾನ ಈ ಪಂಚಾಯ್ತಿ ವ್ಯಾಪ್ತಿಯ ದೇಗುಲೊಳ್ಳಿ ಗ್ರಾಮದಲ್ಲಿದೆ.

‘ಬೈಲೂರು ಗ್ರಾಮದಲ್ಲಿ 896, ದೇಗುಲೊಳ್ಳಿಯಲ್ಲಿ 244 ಕುಟುಂಬಗಳಿವೆ. ಇವೆರಡೂ ಗ್ರಾಮಗಳಲ್ಲಿ ಶೇ 99 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಬೈಲೂರು ಗ್ರಾಮದಲ್ಲಿ ಸಾಮೂಹಿಕ ಶೌಚಾಲಯವನ್ನೂ ನಿರ್ಮಿಸಲಾಗಿದೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯ್ತಿಯೆಂದು ಇದೇ ವರ್ಷ ಜುಲೈನಲ್ಲಿ ಘೋಷಣೆ ಮಾಡಲಾಗಿದೆ’ ಎಂದು ಪಿಡಿಒ ಜಯರಾಮ್ ಕಾದ್ರೊಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ನೀರಿನ ಘಟಕ: ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಚರಂಡಿ ವ್ಯವಸ್ಥೆ ಉತ್ತಮವಾಗಿದೆ. ವಿದ್ಯುತ್ ದೀಪಗಳಿಗೆ ಟೈಮರ್ ಅಳವಡಿಸಲಾಗಿದೆ. ಇವು  ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ. ಇಂಧನ ಮಿತವ್ಯಯಕ್ಕಾಗಿ, ರಸ್ತೆಬದಿ ಕಂಬಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಮೇಲ್ಮಟ್ಟದ ಜಲಸಂಗ್ರಹಾಗಾರದಿಂದ ನೀರು ಪೂರೈಸುವ ವ್ಯವಸ್ಥೆ ಇದೆ. ಇದರಿಂದ ಎಲ್ಲ ಕುಟುಂಬಗಳಿಗೂ ನೀರಿನ ಸೌಲಭ್ಯ ದೊರೆಯುತ್ತದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ಉತ್ತಮ ಪ್ರಗತಿಯನ್ನು ತೋರಿದೆ’ ಎಂದರು.

‘ತಂತ್ರಾಂಶವನ್ನು ಸಮರ್ಪಕ ಬಳಸಲಾಗುತ್ತಿದೆ. ನಗದು ರಹಿತ ವ್ಯವಹಾರ ಮಾಡಲಾಗುತ್ತಿದೆ. ಗ್ರಾಮ ಸಭೆ, ವಾರ್ಡ್‌ ಸಭೆಗಳಲ್ಲಿ, ವಸತಿ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಅನುಸರಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಯಡಿ ಮನೆ ನಿರ್ಮಾಣದಲ್ಲಿ ಶೇ 75ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !