ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ವಿಜ್ಞಾನದ ಜ್ಞಾನ ದೇಗುಲ 

ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ
Last Updated 22 ಜುಲೈ 2021, 19:30 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಆವರಣ ಗಿಡ–ಮರಗಳ ಸಾಲು, ಸಸ್ಯೋದ್ಯಾನದ ಹಚ್ಚಹಸುರಿನ ವಾತಾವರಣದಿಂದ ಮುದ ನೀಡುತ್ತದೆ. ಸಸ್ಯಕಾಶಿಯ ಮಧ್ಯದಲ್ಲಿರುವಂತೆ ಭಾಸವಾಗುತ್ತದೆ.

1994ರಲ್ಲಿ ಆರಂಭವಾದ ರಾಜ್ಯದ 2ನೇ ತೋಟಗಾರಿಕೆ ಕಾಲೇಜು ಎನ್ನುವ ಹೆಗ್ಗಳಿಕೆ ಗಳಿಸಿದೆ. ಪ್ರಾರಂಭದಲ್ಲಿ ಸ್ನಾತಕ ಪದವಿಗಳಿಗೆ ಸೀಮಿತವಾಗಿತ್ತು. 1998ರಲ್ಲಿ ಸ್ನಾತಕೋತ್ತರ ಪದವಿ, 2010ರಲ್ಲಿ ಪಿಎಚ್.ಡಿ.ವರೆಗಿನ ಶಿಕ್ಷಣವನ್ನೂ ನೀಡುತ್ತಿದೆ.

135 ಎಕರೆಯ ಕ್ಯಾಂಪಸ್‌ನಲ್ಲಿ ಸುಸಜ್ಜಿತ ಆಡಳಿತ ಕಚೇರಿ ಕಟ್ಟಡ, ಬೋಧನಾ ಕೋಠಡಿಗಳು, ಪ್ರಯೋಗಾಲಯಗಳು, 15ಸಾವಿರಕ್ಕೂ ಅದಿಕ ಗ್ರಂಥಗಳು ಮತ್ತು 55 ಸಂಶೋಧನಾ ನಿಯತಕಾಲಿಕೆಗಳುಳ್ಳ ಗ್ರಂಥಾಲಯ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಸತಿನಿಲಯಗಳು, ಸಿಬ್ಬಂದಿ ವಸತಿಗೃಹಗಳು ಸೇರಿದಂತೆ ಎಲ್ಲ ಮೂಲಸೌಲಭ್ಯಗಳನ್ನು ಹೊಂದಿದೆ. ತೋಟಗಾರಿಕೆ ವಿಜ್ಞಾನದ ‘ಜ್ಞಾನ ದೇಗುಲ’ವಾಗಿದೆ.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಧೀನದಲ್ಲಿರುವ ಈ ಕಾಲೇಜಿನಲ್ಲಿ ತೋಟಗಾರಿಕೆಯಲ್ಲಿ ಬಿ.ಎಸ್ಸಿ., ಎಂ.ಎಸ್ಸಿ ಮತ್ತು ಪಿಎಚ್‌.ಡಿ. ಪದವಿ ಕಲಿಯಲು ಅವಕಾಶವಿದೆ. ಸರ್ಕಾರ ನಡೆಸುವ ಸಿಇಟಿ ಮೂಲಕ ನಾಡಿನ ವಿವಿಧೆಡೆಯ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ತೋಟಗಾರಿಕೆ ವಿಜ್ಞಾನದ ಬೋಧನೆ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಲಾಗುತ್ತಿದೆ.

ಸಂಶೋಧನೆ:

40 ಪ್ರಾಧ್ಯಾಪಕರು ಮತ್ತು ವಿಜ್ಞಾನಿಗಳು ಇದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ತೋಟಗಾರಿಕೆ ಸಂಶೋಧನೆಗಳ ವಿಷಯ ಮಂಡಿಸಿ ಪ್ರಶಂಸೆ ಗಳಿಸಿದ್ದಾರೆ. ಹಲವು ಹೊಸ ತಳಿಗಳನ್ನು ಸಂಶೋಧಿಸಿದ ಕೀರ್ತಿ ಕಾಲೇಜಿನದು. ಭಾಗ್ಯ ನುಗ್ಗೆ, ಅಪೂರ್ವ ಡೊಣ್ಣ ಮೆಣಸಿನಕಾಯಿ, ದುಂಡಿ ಸೇವಂತಿಗೆ ಹೂವು, ಎಎಸಿ-1 ಚೈನಾ ಆಸ್ಕರ್, ಎಜೆಜಿ 85 ನೇರಳೆ, ಡಿಎಚ್ಎಸ್-1 ಚಿಕ್ಕು, ಎಎಎಸ್-2 ಬಳ್ಳೊಳ್ಳಿ ತಳಿಗಳು ಇಲ್ಲಿನವರು ರಾಷ್ಟ್ರಕ್ಕೆ ನೀಡಿರುವ ಕೊಡುಗೆಯಾಗಿವೆ.

2018–19 ಮತ್ತು 2019–20ನೇ ಸಾಲಿನಲ್ಲಿ ನವದೆಹಲಿಯ ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆಯಿಂದ ‘ಉತ್ತಮ ಸಂಶೋಧನಾ ಕೇಂದ್ರ’ ಎಂಬ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

‘ಕಾಲೇಜಿನ ವಿಜ್ಞಾನಿಗಳು ಮಾಡಿರುವ ಹೊಸ ತಳಿಗಳ ಶೋಧ ಮತ್ತು ಸೌಲಭ್ಯಗಳನ್ನು ಪರಿಗಣಿಸಿ ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್ತು 2024ರವರೆಗೆ ಸ್ನಾತಕ ಜೊತೆಗೆ 4 ಸ್ನಾತಕೋತ್ತರ ಮತ್ತು 2 ಪಿಎಚ್.ಡಿ. ಪದವಿಗೆ ಮಾನ್ಯತೆ ನೀಡಿದೆ' ಎಂದು ಡೀನ್ ಡಾ.ತಮ್ಮಯ್ಯ ಎನ್. ಹೇಳಿದರು.

‘ತೋಟಗಾರಿಕೆ ವಿಜ್ಞಾನಗಳ ವಿ.ವಿ. ಕುಲಪತಿ ಮತ್ತು ಹಿಂದಿನ ಡೀನ್‌ಗಳು ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ‘ ಎಂದರು.

ಕಲಿಕೆ ಜೊತೆ ಗಳಿಕೆ:

ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು (ಹಣ್ಣಿನ ಜ್ಯೂಸ್‌, ಜಾಮ್‌, ಜೆಲ್ಲಿ ಇತರೆ) ಅಭವೃದ್ಧಿಪಡಿಸಿ ಮಾರುವ ಮೂಲಕ ಉದ್ಯಮಶೀಲತೆ ಬೆಳೆಸುತ್ತಿದ್ದು, ‘ಕಲಿಕೆ ಜೊತೆಗೆ ಗಳಿಕೆ’ಗೆ ಇಲ್ಲಿ ಅವಕಾಶವಿದೆ.

ಇಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ರಾಜ್ಯ, ಕೇಂದ್ರ ಸರ್ಕಾರ, ವಿಶ್ವವಿದ್ಯಾಲಯ, ಬ್ಯಾಂಕ್‌ಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ವಿದೇಶಗಳಲ್ಲಿ ಕೆಲಸ ಕಂಡುಕೊಂಡಿದ್ದಾರೆ. ಕೆಲವರು ಆದರ್ಶ ರೈತರಾಗಿದ್ದಾರೆ.

ವಿವಿಧ ಘಟಕಗಳು:

ಸಸ್ಯೋತ್ಪಾದನೆ, ಮೆಂಥಾಲ್ ಪುದೀನಾ ತೈಲ ಸಂಸ್ಕರಣೆ, ಮೌಲ್ಯವರ್ಧನೆ ಕೊಯ್ಲೋತ್ತರ ಮತ್ತು ತಂತ್ರಜ್ಞಾನ, ತೋಟಗಾರಿಕೆ ವಿಸ್ತರಣೆ, ಶಿಕ್ಷಣ ಘಟಕಗಳಿವೆ. ಸುಗಂಧದ್ರವ್ಯ ವಿಶ್ಲೇಷಣೆ, ಕೊಯ್ಲೋತ್ತರ ತಂತ್ರಜ್ಞಾನ, ಜೈವಿಕ ಪೀಡೆನಾಶಕಗಳ ಉತ್ಪಾದನೆ, ಮಣ್ಣು ಮತ್ತು ನೀರು ಪರೀಕ್ಷೆ, ಕೀಟವಿಜ್ಞಾನ ಪ್ರಯೋಗಾಲಯಗಳನ್ನು ಹೊಂದಿದೆ. ತರಬೇತಿ, ಕ್ಷೇತ್ರೋತ್ಸವ, ಪ್ರಾತ್ಯಕ್ಷಿಕೆಗಳ ಮೂಲಕ ಕಾಲೇಜು ರೈತರಿಗೆ ತೋಟಗಾರಿಕೆಯಲ್ಲಿ ಮಾಹಿತಿ ಕೇಂದ್ರ ಎನಿಸಿಕೊಂಡಿದೆ. ಈವರೆಗೆ ₹11 ಕೋಟಿ ಅನುದಾನದ ಬಾಹ್ಯ ಅನುದಾನಿತ ಸಂಶೋಧನಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

ಸಂಶೋಧನೆಗೆ ಒತ್ತು

ತೋಟಗಾರಿಕೆಯಲ್ಲಿ ಉದ್ಯಮಶೀಲತೆ, ಸ್ಥಳೀಯ ತೋಟಗಾರಿಕೆ ಬೆಳೆಗಳ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ.

–ಡಾ.ತಮ್ಮಯ್ಯ ಎನ್‌., ಡೀನ್‌, ಕೆಆರ್‌ಸಿ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT