ಶನಿವಾರ, ಅಕ್ಟೋಬರ್ 16, 2021
23 °C

ಅರ್ಬಾಜ್ ಕೊಲೆ ಪ್ರಕರಣ: ಐವರು ಪೊಲೀಸ್ ಕಸ್ಟಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಾನಾಪುರ/ಬೆಳಗಾವಿ: ಇಲ್ಲಿನ ಯುವಕ ಅರ್ಬಾಜ್ ಮುಲ್ಲಾ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿಗಳನ್ನು ಪೊಲೀಸರು ಪಟ್ಟಣದ ಜೆಎಂಎಫ್ ನ್ಯಾಯಾಲಯದಲ್ಲಿ ಪ್ರಧಾನ ದಿವಾನಿ ನ್ಯಾಯಾಧೀಶ ಸೂರ್ಯನಾರಾಯಣ ಎಸ್. ಅವರ ಎದುರು ಶುಕ್ರವಾರ ಹಾಜರುಪಡಿಸಿದರು.

ಇದಕ್ಕೂ ಮುನ್ನ ಆರೋಪಿಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಯಿತು.

ಪ್ರಕರಣದಲ್ಲಿ ಈರಪ್ಪ ಕುಂಬಾರ, ಸುಶೀಲಾ ಕುಂಬಾರ, ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ, ಕುತುಬುದ್ದೀನ್ ಬೇಪಾರಿ, ಮಾರುತಿ ಸುಗತೆ, ಮಂಜುನಾಥ ಗೊಂಧಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ, ಪ್ರವೀಣ ಪೂಜಾರಿ ಅಲಿಯಾಸ್ ಬಿರ್ಜೆ ಮತ್ತು ಶ್ರೀಧರ ಡೋಣಿ ಎನ್ನುವವರನ್ನು ಬಂಧಿಸಲಾಗಿದೆ. ಅವರಲ್ಲಿ ಮುಖ್ಯ ಆರೋಪಿ ಪುಂಡಲೀಕ ಮುತಗೇಕರ, ಶೈಲಾ ಕುಂಬಾರ, ಕುತುಬುದ್ದೀನ ಬೇಪಾರಿ, ಮಂಜುನಾಥ ಗೊಂಧಳಿ ಮತ್ತು ಗಣಪತಿ ಗೊಂಧಳಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಅ.12ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸರ್ಕಾರದ ‌ಪರ ಸಹಾಯಕ ಅಭಿಯೋಜಕಿ ಆಫೀಯಾ ನೇಸರಿಕರ ವಕಾಲತ್ತು ವಹಿಸಿದ್ದರು.

ಆರೋಪಿಗಳ ಮೇಲೆ ಕಲಂ 302, 201 ಸಹಕಲಂ 34 ಐಪಿಸಿ ಜೊತೆ 341, 120(ಬಿ), 384, 388, ಸಹಕಲಂ 149 ಐಪಿಸಿ ಮತ್ತು ಕಲಂ 27 ಭಾರತೀಯ ಆಯುಧಗಳ ಅಧಿನಿಯಮ ಕಾಯ್ದೆ ಇವುಗಳನ್ನು ಅಳವಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.