ವಾಹನ ಚಾಲಕರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಿದ ಸೇನಾಧಿಕಾರಿಗಳು !

7
ಕಂಟೋನ್ಮೆಂಟ್‌ ರಸ್ತೆ ಬಳಕೆ

ವಾಹನ ಚಾಲಕರಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಿದ ಸೇನಾಧಿಕಾರಿಗಳು !

Published:
Updated:
Deccan Herald

ಬೆಳಗಾವಿ: ಇಲ್ಲಿನ ಕಂಟೋನ್ಮೆಂಟ್‌ (ದಂಡು) ಪ್ರದೇಶದ ಮೂಲಕ ಹಾದು ಹೋಗಬೇಕಾದರೆ ತಮ್ಮೊಂದಿಗೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಇಟ್ಟುಕೊಂಡು ಸಂಚರಿಸಬೇಕು ಎಂದು ವಾಹನ ಚಾಲಕರಿಗೆ ಸೇನಾಧಿಕಾರಿಗಳು ಸೂಚನೆ ನೀಡಿರುವುದು ಬೆಳಕಿಗೆ ಬಂದಿದೆ.

ಕಾಂಗ್ರೆಸ್‌ ರೋಡ್‌ನಿಂದ ಕ್ಲಬ್‌ ರೋಡ್‌ಗೆ ಹೋಗುವವರು, ವೆಂಗುರ್ಲಾ ರೋಡ್‌ನಿಂದ ಹನುಮಾನ ನಗರಕ್ಕೆ, ಸದಾಶಿವ ನಗರಕ್ಕೆ ಹೋಗುವವರು, ಕ್ಯಾಂಪ್‌ನಲ್ಲಿರುವವರು ಬಹುತೇಕ ಜನರು ಕಂಟೋನ್ಮೆಂಟ್‌ ರಸ್ತೆಗಳನ್ನು ಬಳಸುತ್ತಿದ್ದಾರೆ. ಪರ್ಯಾಯ ರಸ್ತೆಗಳಿಲ್ಲದ ಕಾರಣ ಈ ಜನರಿಗೆ ರಸ್ತೆಗಳನ್ನು ಬಳಸುವುದು ಅನಿವಾರ್ಯವಾಗಿದ್ದು, ಬ್ರಿಟಿಷರ ಕಾಲದಿಂದಲೂ ಬಳಸುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಗುರುತಿನ ಚೀಟಿ ಕೇಳಲು ಸೇನಾಧಿಕಾರಿಗಳು ಮುಂದಾಗಿದ್ದಾರೆ. ಗುರುತಿನ ಚೀಟಿ ಪ್ರದರ್ಶಿಸಬೇಕೆಂದು ಹಲವು ಕಡೆ ಸೂಚನಾ ಫಲಕಗಳನ್ನು ಹಾಕಿದ್ದಾರೆ.

ಬ್ರಿಟಿಷರ ಕಾಲದಲ್ಲಿಯೇ ಬೆಳಗಾವಿ ನಗರದೊಳಗೆ ದಂಡು ಪ್ರದೇಶ ಸ್ಥಾಪನೆಯಾಗಿದೆ. ಈ ಪ್ರದೇಶದಲ್ಲಿ ಮರಾಠಾ ಲಘು ಪದಾತಿ ದಳ (ಎಂಎಲ್‌ಆರ್‌ಸಿ), ಕಮಾಂಡೊ ತರಬೇತಿ ವಿಂಗ್‌ ಸೇರಿದಂತೆ ಸೇನೆಯ ಹಲವು ವಿಭಾಗಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದ ಸುತ್ತಮುತ್ತ ಸಾರ್ವಜನಿಕರ ವಸತಿ ಪ್ರದೇಶಗಳು ತಲೆಎತ್ತಿವೆ. ಈ ಪ್ರದೇಶಗಳ ಜನರು ಕಂಟೋನ್ಮೆಂಟ್‌ ರಸ್ತೆಗಳ ಮೂಲಕ ಸಂಚರಿಸುತ್ತಿದ್ದಾರೆ.

ಕೇಳಿದಾಗ ತೋರಿಸಿ:  ಈ ಮಾರ್ಗಗಳ ಮೂಲಕ ತೆರಳುವ ವಾಹನ ಚಾಲಕರು ತಮ್ಮೊಂದಿಗೆ ಗುರುತಿನ ಚೀಟಿಯ ಜೊತೆಗೆ, ವಾಹನ ನೋಂದಣಿ ದಾಖಲೆಪತ್ರ ಹಾಗೂ ವಾಹನ ಚಾಲನಾ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ದ್ವಿಚಕ್ರ ವಾಹನ ಓಡಿಸುತ್ತಿದ್ದರೆ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿರಬೇಕು. ಸೇನಾಧಿಕಾರಿಗಳು ವಾಹನ ತಪಾಸಣೆ ನಡೆಸಿದಾಗ ಇವೆಲ್ಲ ದಾಖಲಾತಿಗಳನ್ನು ತೋರಿಸಬೇಕು ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕರ ಆಕ್ಷೇಪ:  ಸೇನಾಧಿಕಾರಿಗಳು ಹೊರಡಿಸಿರುವ ಈ ಸೂಚನೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್‌, ವಾಹನ ಚಾಲನಾ ಪತ್ರ, ವಾಹನಗಳ ನೋಂದಣಿ ದಾಖಲೆಗಳನ್ನು ಪರಿಶೀಲಿಸುವುದು ಆರ್‌ಟಿಒ, ಟ್ರಾಫಿಕ್‌ ಪೊಲೀಸರ ಕೆಲಸ. ಇದರಲ್ಲಿ ಸೇನಾಧಿಕಾರಿಗಳು ಏಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ? ಗುರುತಿನ ಚೀಟಿ ತೋರಿಸಬೇಕೆಂದರೆ ಏನು? ಯಾವ ರೀತಿ ಗುರುತಿನ ಚೀಟಿ? ನಾವೇನು ಹೊರದೇಶದಿಂದ ಬಂದವರೇ? ಎಂದು ಕ್ಯಾಂಪ್‌ ನಿವಾಸಿ ಮೈಕಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 2–3 ತಿಂಗಳ ಹಿಂದೆಯೂ ಇದೇ ಸೇನಾಧಿಕಾರಿಗಳು ಇಲ್ಲಿನ ಗೇಟ್‌ಗಳನ್ನು ಬಂದ್ ಮಾಡಿ, ಸಾರ್ವಜನಿಕರ ಸಂಚಾರವನ್ನು ತಡೆಹಿಡಿದಿದ್ದರು. ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ನೀಡಿದರು. ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಅವರ ಮಧ್ಯೆಪ್ರವೇಶದಿಂದಾಗಿ ಗೇಟ್‌ಗಳನ್ನು ತೆರೆಯಲಾಗಿತ್ತು. ಈಗ ಪುನಃ ಸಾರ್ವಜನಿಕರಿಗೆ ತೊಂದರೆ ಕೊಡಲು ಸೇನಾಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !