ಸೋಮವಾರ, ಮೇ 16, 2022
21 °C
ವಿಟಿಯು ಮೈದಾನದಲ್ಲಿ ಸೇನಾ ನೇಮಕಾತಿ ರ‍್ಯಾಲಿ ಇಂದಿನಿಂದ

ವಸತಿ ಸೌಲಭ್ಯಕ್ಕಾಗಿ ಅಭ್ಯರ್ಥಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿಟಿಯು ಮೈದಾನದಲ್ಲಿ ಫೆ.4ರಿಂದ ಆಯೋಜಿಸಿರುವ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ವಿವಿಧ ಜಿಲ್ಲೆಗಳಿಂದ ಬಂದಿರುವ  ಅಭ್ಯರ್ಥಿಗಳು ವಸತಿ ವ್ಯವಸ್ಥೆಗಾಗಿ ಪರದಾಡಿದರು.

ಸೇನಾ ನೇಮಕಾತಿ ಪ್ರಧಾನ ಕಚೇರಿ ಆಶ್ರಯದಲ್ಲಿ ಬೆಳಗಾವಿ, ರಾಯಚೂರು, ಯಾದಗಿರಿ, ಬೀದರ್, ಕೊಪ್ಪಳ ಮತ್ತು ಕಲಬುರ್ಗಿ ಜಿಲ್ಲೆಗಳಿಂದ, ಸೇನೆಯ ನೇಮಕಾತಿ ವಿಭಾಗದಿಂದ ನೋಂದಣಿಪತ್ರ ಪಡೆದ ಅಭ್ಯರ್ಥಿಗಳಿಗೆ ರ‍್ಯಾಲಿಯಲ್ಲಿ ಅವಕಾಶ ಕಲ್ಲಿಸಲಾಗಿದೆ. ಒಟ್ಟು 62ಸಾವಿರ ಅಭ್ಯರ್ಥಿಗಳು  ನೋಂದಾಯಿಸಿದ್ದಾರೆ. ಈ ಪೈಕಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅರ್ಹರಾದವರಿಗೆ ಪ್ರವೇಶಪತ್ರಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗೆ,  ಪ್ರವೇಶಪತ್ರ ಪಡೆದವರು ಮುನ್ನ ದಿನವಾದ ಬುಧವಾರವೇ ಇಲ್ಲಿಗೆ ಬಂದು ತಲುಪಿದ್ದಾರೆ.

ಖಾಸಗಿ ವಾಹನಗಳನ್ನು ಮಾಡಿಕೊಂಡು ಅಥವಾ ಬಸ್‌ಗಳಲ್ಲಿ ಬೆಳಿಗ್ಗೆಯೇ ಬಂದಿದ್ದ ಅವರು, ವಿಟಿಯು ಸುತ್ತಮುತ್ತ ಅಲೆದಾಡುತ್ತಿದ್ದುದು ಮತ್ತು ವಸತಿ ವ್ಯವಸ್ಥೆಗಾಗಿ ಹಾಗೂ ರ‍್ಯಾಲಿಯ ಮಾಹಿತಿಗಾಗಿ ‍ಪರದಾಡುತ್ತಿದ್ದುದು ಕಂಡುಬಂತು.

ಕೆಲವರು, ಜಾಂಬೋಟಿ ರಸ್ತೆಯ ಅಲ್ಲಲ್ಲಿ ಜಮೀನುಗಳಲ್ಲಿ, ದೇಗುಲಗಳ ಬಳಿ ಮಲಗಿ ವಿಶ್ರಾಂತಿ ಪಡೆದರು. ಅಭ್ಯರ್ಥಿಗಳಿಗೆ ಪೀರನವಾಡಿಯ ಕಲ್ಯಾಣಮಂಟಪ ಮೊದಲಾದ ಕಡೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಡಳಿತದಿಂದ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಮಾಹಿತಿ ಲಭ್ಯವಿಲ್ಲದೆ ಅಭ್ಯರ್ಥಿಗಳ ಪರದಾಡುತ್ತಿದ್ದುದು ಸಾಮಾನ್ಯವಾಗಿತ್ತು. ಕೆಲವರು ವಿಟಿಯು ಬಳಿಗೂ ಬಂದಿದ್ದರು. ಅದರಲ್ಲೂ ರಾತ್ರಿ ಇಲ್ಲಿಗೆ ತಲುಪಿದವರು, ತಂಗಲು ವ್ಯವಸ್ಥೆ ಇಲ್ಲದೆ ಕೊರೆಯುವ ಚಳಿಯಲ್ಲಿ ಹೆಚ್ಚಿನ ತೊಂದರೆ ಅನುಭವಿಸಿದರು.

‘ದೂರದ ಜಿಲ್ಲೆಗಳಿಂದ ಬಂದಿದ್ದೇವೆ. ಎಲ್ಲಿ ಉಳಿದುಕೊಳ್ಳಬೇಕು ಎನ್ನುವ ಮಾಹಿತಿ ನೀಡುವವರಿಲ್ಲ. ಹೀಗಾಗಿ ಇಲ್ಲಿ ಇದ್ದೇವೆ. ವಿಟಿಯು ಒಳಗಡೆಗೆ ಹೋಗೋಣ ಎಂದರೆ ಅವಕಾಶ ಕೊಡುತ್ತಿಲ್ಲ. ರಾತ್ರಿ ಇಲ್ಲಿಯೇ ತಂಗುತ್ತೇವೆ. ನಸುಕಿನ 2.30ಕ್ಕೆ ವಿಟಿಯು ಮೈದಾನಕ್ಕೆ ಪ್ರವೇಶ ನೀಡಲಾಗುವುದು ಎಂದು ಅಲ್ಲಿನ ಸಿಬ್ಬಂದಿ  ತಿಳಿಸಿದ್ದಾರೆ’ ಎಂದು ನಾವಗೆ ಕ್ರಾಸ್ ಬಳಿ ಜಮೀನೊಂದರಲ್ಲಿ ತಂಗಿದ್ದ ಯುವಕರು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ವಿಟಿಯು ಪ್ರವೇಶ ದ್ವಾರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

‘ರ‍್ಯಾಲಿಯು ಫೆ. 15ರವರೆಗೆ ನಡೆಯಲಿದ್ದು, 62ಸಾವಿರ ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಇವರಲ್ಲಿ 48ಸಾವಿರ ಮಂದಿ ಬೆಳಗಾವಿ ಜಿಲ್ಲೆಯವರೇ ಆಗಿದ್ದಾರೆ. ಇವರೆಲ್ಲರೂ ಮೆನಗಳಿಂದಲೇ ಬರುತ್ತಾರೆ. ಹೊರಗಿನವರಿಗೆ ತಂಗಲು ಪೀರನವಾಡಿ ಕಲ್ಯಾಣ ಮಂಟಪ, ಮಚ್ಚೆಯ ಕೆಎಸ್‌ಆರ್‌ಪಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಿಂದ ವಿಟಿಯುವರೆಗೆ ಹೆಚ್ಚಿನ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆವರು ಟಿಕೆಟ್‌ ಖರೀದಿಸಿ ಪ್ರಯಾಣಿಸಬೇಕಾಗುತ್ತದೆ. ನಗರಪಾಲಿಕೆಯಿಂದ ಮೊಬೈಲ್‌ ಶೌಚಾಲಯಗಳನ್ನು ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಈ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಿ ಸರ್ಕಾರಿ ನೌಕರಿ ಕಂಡುಕೊಳ್ಳಲಿ ಎಂಬ ಸದುದ್ದೇಶದಿಂದ ಸೇನಾ ನೇಮಕಾತಿ ಪ್ರಧಾನ ಕಚೇರಿಯವರಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ಕೊಡುತ್ತಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು