ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ಕೊಡಿ

ಯಶಸ್ವಿಯಾಗಿ ಪೂರೈಸಿದ ಸಂತೃಪ್ತಿ: ಆಶಾ
Last Updated 10 ಮೇ 2021, 7:17 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯ ಸರ್ಕಾರವು ಎಲ್ಲ ಜಿಲ್ಲಾ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದರೆ ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಹುದು. ದೊಡ್ಡ ಪ್ರಮಾಣದಲ್ಲಿ ಸುಧಾರಣೆ ತರಬಹುದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಹೇಳಿದರು.

ತಮ್ಮ ಅಧಿಕಾರದ ಅವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಗೂ ಸಮಾನವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಇದರಿಂದಾಗಿ ಬೆಳಗಾವಿಯಂತಹ ಭೌಗೋಳಿಕವಾಗಿ ವಿಸ್ತಾರ ಹೊಂದಿರುವ ಜಿಲ್ಲೆಯಲ್ಲಿ ಜನರ ಬೇಡಿಕೆಯಂತೆ ಅಭಿವೃದ್ಧಿ ಕೆಲಸ ಕೈಗೊಳ್ಳಲು ಆರ್ಥಿಕವಾಗಿ ಕೊರತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ನಿವಾರಿಸಬೇಕು. ವ್ಯಾಪ್ತಿಗೆ ತಕ್ಕಂತೆ ಅನುದಾನ ಹೆಚ್ಚಿಸಬೇಕು’ ಎಂದು ಕೋರಿದರು.

ಸಿಇಒ ಬಳಿ ಅಧಿಕಾರ

‘ಜಿಲ್ಲಾ ‍ಪಂಚಾಯ್ತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನವನ್ನು ಸರ್ಕಾರ ನೀಡಿದೆ. ಆದರೆ, ಎಲ್ಲ ಅಧಿಕಾರ ಸಿಇಒ ಬಳಿ ಇರುತ್ತದೆ. ಇದರಿಂದಾಗಿ ಅಧ್ಯಕ್ಷರಿಗೆ ಸ್ವತಂತ್ರವಾಗಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ನೀಡಿರುವಷ್ಟು ಅಧಿಕಾರವನ್ನಾದರೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಕೊಡಬೇಕು. ಮಹತ್ವದ ಕೆಲಸಗಳನ್ನು ಕೈಗೊಳ್ಳಲು ಅಧ್ಯಕ್ಷರಿಗೆ ಪೂರ್ಣ ಅಧಿಕಾರ ಇರುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಯಾವುದೇ ಕೆಲಸದಲ್ಲಿ ಒತ್ತಡಗಳು ಅಥವಾ ಮನಸ್ತಾಪಗಳು ಸಾಮಾನ್ಯ. ಆದರೆ, ನನ್ನ ಅಧಿಕಾರದ ಅವಧಿಯಲ್ಲಿ ಅವುಗಳನ್ನು ಎಲ್ಲರೂ ಸೇರಿ ನಿಭಾಯಿಸಿದ್ದೇವೆ. ವ್ಯವಸ್ಥೆಯಲ್ಲಿ ಏನೇ ತಪ್ಪುಗಳಾಗಿದ್ದರೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಮನಸೆಳೆದಿದ್ದೇನೆ. ಅಧಿಕಾರಿಗಳು, ಸದಸ್ಯರು ಸಹಕಾರ ನೀಡಿದ್ದರಿಂದಾಗಿ ಐದು ವರ್ಷಗಳ ಅಧಿಕಾರದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ನಾನು ನಿರ್ವಹಿಸಿದ ಕಾರ್ಯದ ಬಗ್ಗೆ ಸಂತೃಪ್ತಿ ಇದೆ’ ಎಂದು ಪ್ರತಿಕ್ರಿಯಿಸಿದರು.

ಹಲವು ಕೆಲಸಗಳು

‘ನನ್ನ ಅಧಿಕಾರದ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಗೆ ಬಿಡುಗಡೆಯಾದ ₹ 3,249 ಕೋಟಿ ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕವಾಗಿ ಬಳಸಿಕೊಂಡಿದ್ದೇವೆ. ಶಿಕ್ಷಣ ಕ್ಷೇತ್ರದ ಬಲವರ್ಧನೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಒತ್ತು ನೀಡಿದ್ದೇವೆ. ಉಗಾರ ಬಿ.ಕೆ. ಜಿ.ಪಂ. ಕ್ಷೇತ್ರದ ವ್ಯಾಪ್ತಿಯಲ್ಲಿ ₹ 76.48 ಲಕ್ಷ ಅನುದಾನದಲ್ಲಿ ಸರ್ಕಾರಿ ಶಾಲೆ ದುರಸ್ತಿ, ಬಯಲು ರಂಗಮಂದಿರ ನಿರ್ಮಾಣ ಮತ್ತಿತರ ಕಾಮಗಾರಿ ಕೈಗೊಳ್ಳಲಾಗಿದೆ. ಆಶಾ ಕಿರಣ ಕಾರ್ಯಕ್ರಮದಡಿ 50 ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು, ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ತಲಾ ₹ 5 ಸಾವಿರ ಜಮಾ ಮಾಡಲಾಗಿದೆ. ಸವಳು-ಜವಳು ಸಮಸ್ಯೆ ನಿವಾರಣೆಗೆ ಇಂಗು ಗುಂಡಿ ನಿರ್ಮಾಣ ಕೆಲಸಕ್ಕೆ ಪ್ರೋತ್ಸಾಹಿಸಲಾಗಿದೆ. ಗ್ರಾಮಮಟ್ಟದಲ್ಲಿನ ಕುಂದುಕೊರತೆ ಆಲಿಸಲು ಸವದತ್ತಿ ತಾಲ್ಲೂಕಿನ ಭಂಡಾರಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದ್ದೇನೆ’ ಎಂದು ಆಶಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT