ಸಂಗೊಳ್ಳಿರಾಯಣ್ಣಗೆ ಅವಮಾನ: ಆರೋಪ

7

ಸಂಗೊಳ್ಳಿರಾಯಣ್ಣಗೆ ಅವಮಾನ: ಆರೋಪ

Published:
Updated:
Deccan Herald

ಬೆಳಗಾವಿ: ‘ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ಸಂಗೊಳ್ಳಿರಾಯಣ್ಣ ರಸ್ತೆ ನಾಮಫಲಕಕ್ಕೆ ಅವಮಾನ ಮಾಡಲಾಗಿದೆ’ ಎಂದು ಆರೋಪಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಗುರುವಾರ ಸಾಂಕೇತಿಕ ಧರಣಿ ನಡೆಸಿದರು.

ಫಲಕವನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಇಟ್ಟುಕೊಂಡು ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ನೌಕರರಿಗೆ ರಾಷ್ಟ್ರ ಪುರುಷರ ಬಗ್ಗೆ ಪಾಠ ಮಾಡುವ ಅಗತ್ಯವಿದೆ ಎನಿಸುತ್ತದೆ. ಅ.5ರಂದು ಜಿಲ್ಲಾಧಿಕಾರಿ ಕರೆದಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ, ಡಿಸಿ ಕಚೇರಿ ಮುಂದಿನ ರಸ್ತೆಯ ಹೆಸರಿನ ಬಗ್ಗೆ ಸಾಕಷ್ಟು ಚರ್ಚೆ, ವಾಗ್ವಾದ ನಡೆದಿತ್ತು. ಅಲ್ಲಿ ಹಾಕಿರುವ ಸಂಗೊಳ್ಳಿರಾಯಣ್ಣ ರಸ್ತೆ ನಾಮಫಲಕವನ್ನು ತೆಗೆದು, ಕೋರ್ಟ್‌ ರಸ್ತೆ ಎಂಬ ಫಲಕ ಹಾಕಿದ್ದರ ಬಗ್ಗೆ ಚರ್ಚೆಯಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಫಲಕವು ಅಂಡರ್‌ಪಾಸ್ ಬಳಿ ಕಸದಲ್ಲಿ ಪತ್ತೆಯಾಗಿದೆ. ಇದು ವಿಷಾದದ ಸಂಗತಿ’ ಎಂದು ತಿಳಿಸಿದರು.

‘ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲು ಹೋಗಿದ್ದೆ. ಅವರು ಇರಲಿಲ್ಲ. ಹೀಗಾಗಿ, ಆ ಕಚೇರಿ ಸಿಬ್ಬಂದಿಗೆ ವಿಷಯ ತಿಳಿಸಿದೆ. ತ‍ಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದೆ’ ಎಂದು ಹೇಳಿದರು.

‘ಫಲಕವನ್ನು ಕಸದೊಂದಿಗೆ ಎಸೆದು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರಿಗೆ ಅವಮಾನ ಮಾಡಲಾಗಿದೆ. ಆ ರಸ್ತೆ ಕೋರ್ಟ್‌ ರಸ್ತೆ ಎಂದು ಕೆಲವರು ಫಲಕ ಹಾಕಿರುವುದು ಸರಿಯಲ್ಲ. ಪಾಲಿಕೆ ಇತ್ತ ಗಮನಹರಿಸಿ ಸಂಗೊಳ್ಳಿರಾಯಣ್ಣ ರಸ್ತೆ ಎಂದು ಅಧಿಕೃತವಾಗಿ ಫಲಕ ಹಾಕಬೇಕು’ ಎಂದು ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !