ಬುಧವಾರ, ಜೂಲೈ 8, 2020
26 °C

ಅವರಖೋಡ: ₹60 ಕೋಟಿ ವೆಚ್ಚದಲ್ಲಿ ಬಾಂದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ತಾಲ್ಲೂಕಿನ ಅವರಖೋಡ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಬ್ರಿಜ್ ಕಂ ಬಾಂದಾರ ನಿರ್ಮಿಸಲು ಉದ್ದೇಶಿಸಿರುವ ಸ್ಥಳವನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸೋಮವಾರ ಪರಿಶೀಲಿಸಿದರು.

‘ಇಲ್ಲಿ ಬಾಂದಾರ ನಿರ್ಮಿಸುವಂತೆ ಈ ಭಾಗದ ಜನರು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದೇವೆ. ₹60 ಕೋಟಿ ವಚ್ಚದಲ್ಲಿ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಪೂರ್ಣಗೊಂಡ ನಂತರ ಜನರಿಗೆ ಅನುಕೂಲವಾಗಲಿದೆ’ ಎಂದರು.

‘ಪ್ರತಿ ಬೇಸಿಗೆ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರಕ್ಕೆ ಆಲಮಟ್ಟಿಯಿಂದ ನೀರು ಬಿಡಬೇಕು. ಮಹಾರಾಷ್ಟ್ರದವರು ಕೊಯ್ನಾ ಜಲಾಶಯದಿಂದ ಕರ್ನಾಟಕಕ್ಕೆ ಕೃಷ್ಣಾ ನದಿ ಮೂಲಕ ನೀರು ಬಿಡಬೇಕು ಎನ್ನುವ ನಿಟ್ಟಿನಲ್ಲಿ ವಿನಿಮಯ ಒಪ್ಪಂದ ಮಾಡಿಕೊಳ್ಳಲಾಗುವುದು. ಕೊರೊನಾ ಕಾರಣದಿಂದ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆದಿಲ್ಲ’ ಎಂದು ಹೇಳಿದರು.

‘ನಾವು ಕಾಂಗ್ರೆಸ್‌ನಲ್ಲಿದ್ದಾಗ ಅಥಣಿ ತಾಲ್ಲೂಕಿನ ನೀರಾವರಿ ಯೋಜನೆಗಳನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೆವು. ಆದರೆ, ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಅಂದಿನ ಜಲಸಂಪನ್ಮೂಲ ಸಚಿವರು ಯಾವುದೇ ಸ್ಪಂದನೆ ನೀಡಲಿಲ್ಲ. ಅದರಿಂದ ಬೇಸರವಾಯಿತು. ಹೀಗಾಗಿ, ಅನಿವಾರ್ಯವಾಗಿ ಕಾಂಗ್ರೆಸ್ ಬಿಡಬೇಕಾಯಿತು’ ಎಂದರು.

ಶಾಸಕ ಮಹೇಶ ಕುಮಠಳ್ಳಿ, ಅಧಿಕಾರಿಗಳಾದ ಮಲ್ಲಿಕಾರ್ಜುನ ಗುಂಗೆ, ಅರವಿಂದ, ಬಿ.ಎಸ್. ಚಂದ್ರಶೇಖರ, ಕೆ.ಕೆ. ಜಾಲಿಬೇರಿ, ಮುಖಂಡರಾದ ಕಿರಣ ಪಾಟೀಲ, ಶಂಕರಗೌಡ ಪಾಟೀಲ, ರಮೇಶ ಪಾಟೀಲ, ಮಲ್ಲಿಕಾರ್ಜುನ ಕಂಪಿ, ಜಗದೇವ ಪಾಟೀಲ, ಈರಣಗೌಡ ಪಾಟೀಲ. ಮಲ್ಲಣ್ಣಗೌಡ ಪಾಟೀಲ ಇದ್ದರು.

ಮನವಿ:

ಕಾಮಗಾರಿಯನ್ನು ಕೂಡಲೇ ಆರಂಭಿಸಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಅಥಣಿ ತಾಲ್ಲೂಕು ಘಟಕದವರು ಸಚಿವರಿಗೆ ಮನವಿ ಸಲ್ಲಿಸಿದರು. ಘಟಕದ ಕಾರ್ಯದರ್ಶಿ ಭರಮು ನಾಯಿಕ, ಯುವ ಮುಖಂಡರಾದ ಬಸವರಾಜ ಖೇಮಲಾಪುರ, ದುಂಡಪ್ಪ ಅವಟಿ, ಪ್ರಶಾಂತ ಸತಿಗೌಡರ, ಸಿದ್ದಾರೂಢ ಮಠಪತಿ, ಗೋಪಾಲ ಮಂಗಸೂಳಿ, ಬಸವರಾಜ ವಾಡೇದ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು