ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮಂಡಳಿ ಆದೇಶಕ್ಕೂ ಕಿಮ್ಮತ್ತಿಲ್ಲ!

ತಲೆ ಎತ್ತುತ್ತಿರುವ ಆರ್‌ಒ ಪ್ಲಾಂಟ್‌ಗಳು; ಅಧಿಕಾರಿಗಳಿಂದ ಕ್ರಮವಿಲ್ಲ
Last Updated 20 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಅಥಣಿ: ‘ರಿವರ್ಸ್‌ ಆಸ್ಮಾಸಿಸ್ (ಆರ್‌ಒ) ಉಪಕರಣಗಳನ್ನು ಹೊಂದಿರುವ ನೀರು ಶುದ್ಧೀಕರಣ ಘಟಕಗಳನ್ನು ನಿರ್ಬಂಧಿಸಬೇಕು’ ಎಂಬ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ಜಾರಿಗೆ ತರುವ ನಿಟ್ಟಿನಲ್ಲಿ ಇಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಘಟಕಗಳು ತಲೆಎತ್ತುತ್ತಲೇ ಇವೆ.

‘ಆರ್‌ಒ ಉಪಕರಣಗಳನ್ನು ಬಳಸಿ ಶುದ್ಧೀಕರಿಸಿದ ನೀರು ಕುಡಿಯಲು ಯೋಗ್ಯವಲ್ಲ. ಈ ಪ್ರಕ್ರಿಯೆಯಲ್ಲಿ ಶೇ 80ರಷ್ಟು ನೀರು ವ್ಯರ್ಥವಾಗುತ್ತದೆ. ಹೀಗಾಗಿ, ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಇಂತಹ ವಿಧಾನದ ಘಟಕಗಳಿಗೆ ನಿರ್ಬಂಧ ವಿಧಿಸಬೇಕು’ ಎಂದು ನ್ಯಾಯಮಂಡಳಿ 2019ರಲ್ಲಿ ಅದೇಶಿಸಿದೆ. ಎರಡು ತಿಂಗಳಲ್ಲಿ ಕ್ರಮ ವಹಿಸುವಂತೆ ಜನವರಿಯಲ್ಲಿ ಮಂಡಳಿ ಸೂಚಿಸಿತ್ತು.

ತಾಲ್ಲೂಕು ಪ್ರತಿ ವರ್ಷವೂ ಬರಪೀಡಿತ ಪ್ರದೇಶ ಎನಿಸಿಕೊಳ್ಳುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿಯೂ ಬರಿದಾಗುತ್ತಿದೆ. ಈ ಭಾಗದಲ್ಲಿ ಅಂತರ್ಜಲ ಮಟ್ಟವೂ ಕಡಿಮೆಯಾಗುತ್ತಿದೆ. ಜನರು ಕುಡಿಯುವ ನೀರಿಗಾಗಿ ಖಾಸಗಿ ಪೂರೈಕೆದಾರರನ್ನು ಅವಲಂಬಿಸುವಂತಹ ಪರಿಸ್ಥಿತಿ ಬಂದಿದೆ. ಪಟ್ಟಣ ಹಾಗೂ ಸುತ್ತಮುತ್ತ ನೂರಕ್ಕೂ ಹೆಚ್ಚು ಆರ್‌ಒ ಘಟಕಗಳಿವೆ. ಎನ್‌ಜಿಟಿ ಆದೇಶದ ನಂತರವೂ ಅ‌ವುಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಕ್ರಮ ವಹಿಸಿಲ್ಲ. ಇದು ಪ್ರಜ್ಞಾವಂತರ ಅಸಮಾಧಾನಕ್ಕೆ ಕಾರಣವಾಗಿದೆ.

‘ಆರ್‌ಒ ಘಟಕಗಳಿಂದ ಅಂತರ್ಜಲದ ಸಮಸ್ಯೆ ಜೊತೆಗೆ, ಮಾನವನ ದೇಹಕ್ಕೂ ಸಮಸ್ಯೆಗಳಾಗುತ್ತವೆ. ದೇಹಕ್ಕೆ ಬೇಕಾಗುವ ಖನಿಜಾಂಶಗಳ ಕೊರತೆ ಉಂಟಾಗುತ್ತದೆ. ಹಾಳಾಗುವ ಶೇ 80ರಷ್ಟು ನೀರನ್ನು ಬೆಳೆ ಅಥವಾ ಗಿಡಗಳಿಗೆ ಬಿಟ್ಟರೆ ಬೆಳಗಣಿಗೆ ಕುಂಠಿತವಾಗುತ್ತದೆ. ಹೀಗಾಗಿ, ನಿರ್ಬಂಧ ವಿಧಿಸಬೇಕು’ ಎಂದು ಎನ್‌ಜಿಟಿ ತಿಳಿಸಿದೆ. ಆದ್ದರಿಂದ ‘ಶುದ್ಧ’ ನೀರಿನ ಹೆಸರಿನಲ್ಲಿ ಪಟ್ಟಣದಲ್ಲಿ ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಪ್ರಜ್ಞಾವಂತರ ಒತ್ತಾಯವಾಗಿದೆ.

ಘಟಕಗಳು ಪರವಾನಗಿ ಪಡೆದಿವೆಯೇ ಎನ್ನುವ ದಾಖಲೆಗಳು ಕೂಡ ಲಭ್ಯವಿಲ್ಲ ಎನ್ನಲಾಗುತ್ತಿದೆ. ಹಲವರು ಹಳೆಯ ಹಾಗೂ ಪಾಚಿ ಹಿಡಿದಿರುವ ಕ್ಯಾನ್‌ಗಳನ್ನೇ ಬಳಸುತ್ತಿರುವುದು ಕೂಡ ಕಂಡುಬರುತ್ತಿದೆ. ಸ್ವಚ್ಛತೆ ಕಾಪಾಡುವುದಕ್ಕೆ ಆದ್ಯತೆ ನೀಡದಿರುವುದು ಸಾಮಾನ್ಯವಾಗಿದೆ. ಈ ಕ್ಯಾನ್‌ಗಳ ಮೇಲೆ ಐಎಸ್‌ಐ ಮುದ್ರೆ ಇಲ್ಲ. ಪ್ಯಾಕ್ ಮಾಡಿದ ದಿನಾಂಕ, ಕಂಪನಿ ಹೆಸರು, ಮೊಬೈಲ್‌ ಸಂಖ್ಯೆ ಮೊದಲಾದವುಗಳು ಕಂಡುಬರುತ್ತಿಲ್ಲ. ಹೀಗಾಗಿ, ಮಾನದಂಡಗಳನ್ನು ಉಲ್ಲೇಖಿಸುತ್ತಿರುವುದು ಸ್ಪಷ್ಟವಾಗಿದೆ. ಜನರು ಅನಿವಾರ್ಯವಾಗಿ ಈ ನೀರಿನ ಕ್ಯಾನ್‌ಗಳನ್ನು ಖರೀದಿಸುತ್ತಿದ್ದಾರೆ! ಘಟಕಗಳನ್ನು ಪುರಸಭೆ ಅಧಿಕಾರಿಗಳು ಪರಿಶೀಲಿಸುತ್ತಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

‘ಪಟ್ಟಣದಲ್ಲಿ ಒಂದೆರಡು ಘಟಕಗಳವರು ಮಾತ್ರವೇ ಪರವಾನಗಿ ಪಡೆದಿದ್ದಾರೆ. ಉಳಿದವರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೋ ಗೊತ್ತಿಲ್ಲ. ಇದರಿಂದ, ಪರವಾನಗಿ ಪಡೆದಿರುವ ನಮ್ಮಂಥವರಿಗೆ ನಷ್ಟವಾಗುತ್ತಿದೆ’ ಎಂದು ನೀರು ಶುದ್ಧೀಕರಣ ಘಟಕವೊಂದರ ಮಾಲೀಕ ಅಜಿತ ಪವಾರ ಪ್ರತಿಕ್ರಿಯಿಸಿದರು.

‘ಹಸಿರು ನ್ಯಾಯಮಂಡಳಿಯ ಆದೇಶ ಸರಿ ಇದ್ದು, ಇದನ್ನು ಸಂಬಂಧಿಸಿದವರು ಪಾಲಿಸಬೇಕು’ ಎಂದು ವಕೀಲ ರಾಜಶೇಖರ ಅರಗೊಡ್ಡಿ ಕೋರಿದರು.

‘ವರ್ಷದಿಂದ ವರ್ಷಕ್ಕೆ ಆರ್‌ಒ ಘಟಕಗಳು ಹೆಚ್ಚಾಗುತ್ತಿವೆ. ಅನಧಕೃತ ಪ್ಲಾಂಟ್‌ಗಳನ್ನು ಬಂದ್ ಮಾಡಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಬೇಕು’ ಎಂದು ಮಾನವ ಹಕ್ಕುಗಳ ಹೋರಾಟಗಾರ ಅಬ್ದುಲ್‌ ಜಬ್ಬಾರ್‌ ಚಿಂಚಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT