ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ವ್ಯವಸ್ಥೆ: ಹೊಸ ಬದಲಾವಣೆ

Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಇಂದಿನ ಮಕ್ಕಳು ಅತಿಪ್ರತಿಭಾವಂತರಾಗಿರುವಷ್ಟೇ ಭಾವನಾತ್ಮಕವಾಗಿಯೂ ತುಂಬ ಸೂಕ್ಷ್ಮವಾಗಿದ್ದಾರೆ. ಜವಾಬ್ದಾರಿಯ ಪ್ರಜ್ಞೆಯೂ ಅವರಲ್ಲಿದೆ. ಈ ಪ್ರಜ್ಞೆ ಅವರಲ್ಲೇ ಇರುವಾಗ ಸುಮ್ಮನೆ ’ಓದು, ಓದು’, ಎನ್ನುವುದಾಗಲಿ, ’ಓದಿದೆಯಾ, ಪರೀಕ್ಷೆಗಳು ಹತ್ರ ಬಂದುಬಿಟ್ಟವು!’ ಎಂದು ನಾವೂ ಆತಂಕಗೊಂಡು ಅವರನ್ನು ಆತಂಕಕ್ಕೊಳಪಡಿಸುವ ಅವಶ್ಯಕತೆಯಾಗಲಿ ಖಂಡಿತ ಇಲ್ಲ. ಬೇಕಾದ ಮಾರ್ಗದರ್ಶನ, ಆಸರೆ-ಬೆಂಬಲಗಳನ್ನು ಕೊಡುವುದಕಷ್ಟೇ ನಮ್ಮನ್ನು ಸೀಮಿತಗೊಳಿಸಿಕೊಂಡು ಸೂಕ್ಷ್ಮತೆಯನ್ನು ಮೆರೆಯೋಣ.

ಮಕ್ಕಳು ಪರೀಕ್ಷೆಯನ್ನು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಪೋಷಕರು ಅದರಲ್ಲಿಯೂ ಖಾಸಗಿ ಶಾಲೆಯ ಪೋಷಕರು ಅಗತ್ಯವಾಗಿ ಗಮನಿಸಬೇಕಾದಂತಹ ಘಟನೆಗಳು ಈಗೀಗ ತುಂಬ ಹೆಚ್ಚಾಗುತ್ತಿವೆ. ಇದು ಮಕ್ಕಳ ಮುಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತವೆಯಾದ್ದರಿಂದ ಪೋಷಕರು ತುಂಬ ಎಚ್ಚರಿಕೆಯಿಂದ ಇವನ್ನು ಗಮನಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕಾಗಿದೆ.

ಖಾಸಗಿ ಶಾಲೆಗಳು ಶ್ರೇಣೀಕೃತವಾಗಿವೆ. ಇಲ್ಲಿನ ‘ಶ್ರೇಣಿ’ಯೆಂದರೆ ಅವು ವಿಧಿಸುವ ಶುಲ್ಕ! ಆದರೆ, ಆ ಕಾಸಿಗೆ ತಕ್ಕ 'ಕಜ್ಜಾಯ' ಅಲ್ಲಿ ಸಿಗುತ್ತಿದೆಯೇ ಎಂಬುದೇ ಪ್ರಶ್ನೆ! ಇಲ್ಲಿ ನಾನು ಕಲಿಕೆಯ ಬಗ್ಗೆ ಮಾತನಾಡುತ್ತಿಲ್ಲ. ಆ ಕುರಿತಾಗಿ ಇದೇ ಪುರವಣಿಯಲ್ಲಿ ಹಿಂದೆ ಚರ್ಚಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಬದಲಾಗುತ್ತಿರುವ ವಾತಾವರಣವನ್ನು ಕುರಿತಾಗಿ ಈಗ ಹೇಳಹೊರಟಿದ್ದೇನೆ.

ಖಾಸಗಿ ಶಾಲೆಗಳಿಗೆ ಜಾಹೀರಾತು ಎಂದರೆ ಶಾಲೆ ನಡೆಯುವ ಬಗೆ, ಬಹಳ ಮುಖ್ಯವಾಗಿ ಆಡಳಿತ ಹೇಗೆ ನಡೆಯುತ್ತದೆ? ಅಲ್ಲಿನ ಶಿಸ್ತು ಎಂಥದ್ದು ಎಂಬುದು. ಹೊಸ ತಲೆಮಾರಿನ ಐಟಿ, ಬಿಟಿ ಹಾಗೂ ಸಮಾನಾಂತರ ದೊಡ್ಡ ಸಂಸ್ಥೆ/ವ್ಯವಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರನ್ನು ಸೆಳೆಯುವುದು ಇದೇ! ಇಂದು ಬಹುದೊಡ್ಡ ಮೊತ್ತದ ಶುಲ್ಕ ಪಡೆಯುವ ಶಾಲೆಗಳನ್ನು ನಡೆಸುತ್ತಿರುವುದು ದೊಡ್ಡ ಐಟಿ ಸಂಸ್ಥೆಗಳ ಅಥವಾ ಒಂದು ದೊಡ್ಡ ವ್ಯವಸ್ಥೆಯ ನಿವೃತ್ತರೇ! ಹಾಗಾಗಿ, ಅವರಿಗೆ ಅಲ್ಲಿನ ಆಡಳಿತವನ್ನು ’ಕಾಪಿ’ ಮಾಡುವುದು ಬಲು ಸುಲಭ! ಪೋಷಕರನ್ನು ಸೆಳೆಯುವುದೂ ತುಂಬ ಸುಲಭ! ಪೋಷಕರು ಯಾವುದಾದರೂ ಒಂದು ಸಮಸ್ಯೆಯನ್ನು ತೆಗೆದುಕೊಂಡು ಹೋದರೆ ’ಇದು ಇಂಥವರ ಜವಾಬ್ದಾರಿ, ಅವರನ್ನು ಕೇಳಿ’ ಎಂದೋ ’ಅದು ನಮ್ಮ ಸಮಸ್ಯೆಯಲ್ಲ!’ ಎಂಬ ಉತ್ತರವೋ ಲಭ್ಯವಾಗುತ್ತದೆ! ಈ ಉತ್ತರ ನಮ್ಮ ಕಾರ್ಪೊರೇಟ್‍ ಮಂದಿಗೆ ಬಹಳ ಪ್ರಿಯವಾದದ್ದು! ಹಾಗಾಗಿ, ಇವರು ಅದನ್ನು ಮೆಚ್ಚುತ್ತಾರೆ ಮತ್ತು ಮುಫತ್ತಾಗಿ ಆ ಶಾಲೆಯ ಬ್ರಾಂಡ್‍ ಅಂಬಾಸಡರ್ ಆಗಿ ಕಾರ್ಯನಿರ್ವಹಿಸುತ್ತಾರೆ!

ಇಲ್ಲಿಯೇ ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕಾಗಿರುವುದು! ಕಾರ್ಪೊರೇಟ್‌ ವ್ಯವಸ್ಥೆಯಲ್ಲಿ ಸುಸೂತ್ರವಾಗಿ ಕೆಲಸವಾಗುವುದು ಮುಖ್ಯ. ಡೆಡ್‍ಲೈನ್‍ಗಳ ಒಳಗೇ ಕೆಲಸಗಳು ಮುಗಿದು ’ಉತ್ಪನ್ನ’ಗಳು ಸಿದ್ಧವಾಗುವುದು ಅತಿ ಅಗತ್ಯ. ಒಪ್ಪಿದ ಗುಣಮಟ್ಟವನ್ನೂ ನೀಡಬೇಕು. ಇಲ್ಲಿ ಅಲ್ಲಿನ ವ್ಯವಸ್ಥೆ ಸರಿ. ಆದರೆ, ಅಂಥ ಒಂದು ಸಂಸ್ಥೆಗೆ ಶಾಲೆಯನ್ನು ಒಪ್ಪವಿಡುವುದು ಸರಿಯೇ! ಬೆಳೆಯುವ ಹಂತದಲ್ಲಿರುವ ಸಸಿಗಳ ಮೇಲೆ ಈ ನಿರ್ಭಾವುಕ ವ್ಯವಸ್ಥೆ ಖಂಡಿತ ದುಷ್ಪರಿಣಾಮವನ್ನು ಬೀರುತ್ತದೆ. ಇದನ್ನು ಗಮನಿಸಬೇಕು.

ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಅಗತ್ಯ ಪೂರೈಕೆಯಾಗುವುದರ ಜೊತೆಗೆ ಅಗತ್ಯವಾಗಿ ಗಮನಿಸಬೇಕಾಗಿರುವುದು ಅವರಿನ್ನೂ ಮಕ್ಕಳು ಎಂಬ ಅಂಶವನ್ನು. ಸಣ್ಣ ವಯಸ್ಸಿನ, ವಿವಿಧ ಸಾಮಾಜಿಕ ಸ್ತರ, ಕೌಟುಂಬಿಕ ಹಿನ್ನೆಲೆಗಳಿಂದ ಬಂದ ಮಕ್ಕಳ ಮಾನಸಿಕ ಸ್ಥಿತಿಗಳು ಬೇರೆ ಬೇರೆ ಇರುತ್ತವೆ.  ಕಾರ್ಪೊರೇಟ್‌ ಪರಿಭಾಷೆಯಲ್ಲಿ ಹೇಳುವುದಾದರೆ ‘ಕಸ್ಟಮೈಸ್‍’ ಆಗಬೇಕು.

ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರುವುದು, ಜವಾಬ್ದಾರಿ ನಾಗರಿಕರನ್ನಾಗಿ ಮಾಡುವುದು, ದೇಶದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು ಶಾಲೆಗಳ ಕರ್ತವ್ಯವೇ ಹೊರತು ಕಾರ್ಪೊರೇಟ್‌ ಜಗತ್ತಿನಂತೆ ಒಂದು ಸಿದ್ಧ ’ಉತ್ಪನ್ನ’ವನ್ನು ಹೊರಹಾಕುವುದಲ್ಲ! ಕಾರ್ಪೊರೇಟ್‌ ಜಗತ್ತಿನ ಕಾಯ್ದೆ ಕಾನೂನು, ನಡಾವಳಿಗಳನ್ನು ಕಣ್ಮುಚ್ಚಿ ಅನುಕರಿಸಿದಾಗ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಇದನ್ನು ಶಾಲೆಗಳು ಮತ್ತು ಪೋಷಕರು ಅಗತ್ಯ ಅರಿಯಬೇಕು. ಒಂದೆರೆಡು ಉದಾಹರಣೆಗಳನ್ನು ನೋಡೋಣ. ಇಂತಹವು ನೂರಾರು ನಡೆಯುತ್ತಿವೆ. ಗಂಭೀರವಾದ ಬೇರೆ ಬೇರೆ ನೆಲೆಯಲ್ಲಿನ ಎರಡನ್ನು ಮಾತ್ರ ಉಲ್ಲೇಖಿಸುತ್ತಿದ್ದೇನೆ.

ಈ ಘಟನೆಯನ್ನು ಅವಲೋಕಿಸಿ: ಅದೊಂದು ವರ್ಷಕ್ಕೆ ಲಕ್ಷಗಳಲ್ಲಿ ಶುಲ್ಕ ಪಡೆಯುವ ಶಾಲೆ. ಒಂಬತ್ತನೇ ತರಗತಿಯ ಹುಡುಗಿ. ಒಂದೆರೆಡು ದಿನಗಳಿಂದ ಹುಷಾರಿಲ್ಲ. ಅಂದು ಭೌತವಿಜ್ಞಾನದ ಕಿರುಪರೀಕ್ಷೆ, ಶಾಲೆಯಲ್ಲಿ. ಹುಡುಗಿಗೆ ಬರೆಯಲಾಗುತ್ತಿಲ್ಲ. ಪ್ರಕೃತಿಯ ನಿಯಮದಂತೆ ಋತುಮತಿಯಾಗಿದ್ದಾಳೆ. ಆ ಕುರಿತ ಯಾವ ಅರಿವೂ ಇಲ್ಲದೆ ಗಾಬರಿಯಾಗಿ ಪ್ರಜ್ಞೆ ತಪ್ಪಿದಂತಾಗಿ ಡೆಸ್ಕಿನ ಮೇಲೆ ಒರಗಿದ್ದಾಳೆ. ಇದನ್ನು ಗಮನಿಸಿದ ಅಲ್ಲಿನ ಶಿಕ್ಷಕಿ ಟೆಸ್ಟ್‌ ಬರೆದಿಲ್ಲವೆಂದು ಎಬ್ಬಿಸಿ ತರಗತಿಯಿಂದ ಹೊರಹಾಕಿದ್ದಾರೆ! ಆ ಹುಡುಗಿ ಅದು ಹೇಗೋ ಮನೆ ತಲುಪಿದ್ದಾಳೆ. ಮಾರನೆಯ ದಿನ ಪೋಷಕರು ಬಂದು ಕೇಳಿದರೆ.

‘ಇವೆಲ್ಲ ನೀವು ಮನೆಯಲ್ಲೇ ನೋಡಿಕೊಳ್ಳಬೇಕಾದ್ದು. ನಾವೇನೂ ಮಾಡಲಾಗುವುದಿಲ್ಲ’ ಎಂದು ದಬಾಯಿಸಿ ಕಳಿಸಿದ್ದಾರೆ. ಪ್ರಕರಣ ಇಲ್ಲಿಗೆ ಮುಗಿಯಿತು. ಆ ಪರಿಸ್ಥಿತಿಯಲ್ಲಿ ಮನೆಗೆ ಬಂದ ಹುಡುಗಿಯ ಮೇಲೆ ಈ ಇಡೀ ಘಟನೆ ಯಾವ ರೀತಿ ಪರಿಣಾಮ ಬೀರಬಹುದು? ಇಲ್ಲಿ ಪೋಷಕರ ಜವಾಬ್ದಾರಿ ಇಲ್ಲವೆಂದಲ್ಲ, ಶಾಲೆಯದ್ದೂ ಇದೆ ಎಂಬುದನ್ನು ಪೋಷಕರೂ ಗ್ರಹಿಸಬೇಕು. ಶಾಲೆಗಳು ಇಂತಹ ಪ್ರಕರಣಗಳಿಂದ ಕಲಿತು, ಆ ವಯಸ್ಸಿನ ಮಕ್ಕಳಿಗೆ ಬೇಕಾದ ಮಾಹಿತಿಯನ್ನು ತಜ್ಞರಿಂದ ಕೊಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಅದು ನಿಜ ಅರ್ಥದಲ್ಲಿ ಶಾಲೆಯಾಗುತ್ತದೆ.

ಈ ಘಟನೆಯನ್ನು ನಾನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಾಗ ಅನೇಕರು ತಮ್ಮ ಮಕ್ಕಳ ಶಾಲೆಯಲ್ಲಿಯೂ ಇಂತಹದೇ ಘಟನೆಗಳು ನಡೆದಿದ್ದು, ಅವರು ಹೋಗಿ ಗಲಾಟೆ ಮಾಡಿ ಬಂದದ್ದನ್ನು ಹಂಚಿಕೊಂಡರು. ಇಂತಹ ಶಾಲೆಗಳಿಗೆ ನಮ್ಮ ಮಕ್ಕಳನ್ನು ಲಕ್ಷಗಳನ್ನು ಕೊಟ್ಟು ಕಳಿಸಬೇಕೆ? ಮಕ್ಕಳು ಅಲ್ಲಿ ಕಲಿಯಬೇಕೆ?

ಇನ್ನೊಂದು ಘಟನೆ ಒಂದು ರಾಷ್ಟ್ರೀಯ ವಾರಪತ್ರಿಕೆ ಬೇರೊಂದು ಸಂದರ್ಭದಲ್ಲಿ ಪ್ರಸ್ತುತ ಪಡಿಸಿದೆ. ಆ ವಿದ್ಯಾರ್ಥಿನಿಗೆ ಒಬ್ಬ ಬಾಯ್‍ಫ್ರೆಂಡ್‍ ಇದ್ದಾನೆ. ಬಾಯ್‍ಫ್ರೆಂಡ್‍ ಇದ್ದಾನೆ ಎಂಬುದು ಮನೆಯಲ್ಲಿ ಗೊತ್ತಾಗಬಾರದು! ಆದರೆ, ಮನೆಯಲ್ಲಿ ಒಬ್ಬ ಸಂಬಂಧಿಗೆ ಗೊತ್ತಾಗಿದೆ. ಅವನು ಈ ಹುಡುಗಿಗೆ ಪಾಠ ಹೇಳಿಕೊಡುವುದೂ ಉಂಟು. ಅವಳ ಬಾಯ್‍ಫ್ರೆಂಡ್‍ ವಿಷಯವನ್ನು ಇಟ್ಟುಕೊಂಡು ಬ್ಲಾಕ್‍ಮೇಲ್‍ ಮಾಡುತ್ತಾನೆ. ಸಾಕಷ್ಟು ಸಮಯ ಅವಳನ್ನು ಲೈಂಗಿಕವಾಗಿ ಶೋಷಿಸುತ್ತಾನೆ.

ಇದು ಶಿಸ್ತಿನ ಮನೆಯ ಕಥೆ! ನಮ್ಮ ಮಕ್ಕಳ ಜೀವನದಲ್ಲಿ ಸಹಜವಾಗಿ ಬಂದುಹೋಗುವ ವಿಚಾರ-ವಿಷಯಗಳನ್ನು ತಂದೆ ಅಥವಾ ತಾಯಿಯ ಬಳಿ ಹೇಳಿಕೊಳ್ಳುವಷ್ಟು ಸಲಿಗೆಯನ್ನು ನೀಡದ ಶಿಸ್ತು ಶಿಸ್ತೇ? ಮಕ್ಕಳ ಜೀವನದಲ್ಲಿ ಏನೇ ನಡೆದರೂ ಅದನ್ನು ಸಹಜವಾಗಿ ತಂದೆತಾಯಿಯ ಬಳಿ ಹೇಳಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸುವುದು ಪೋಷಕರ ಕರ್ತವ್ಯ.

ಮಕ್ಕಳಿಗೆ ಈ ಕುರಿತು ವಿಷದವಾಗಿ ತಿಳಿಸಬೇಕಾದ್ದು ಸಹ ಪೋಷಕರ ಜವಾಬ್ದಾರಿಯೇ. ಅದಕ್ಕೆಲ್ಲ ಸಮಯವೆಲ್ಲಿ? ಎನ್ನಲಾಗದು, ಕಚೇರಿಯ ಮುಖ್ಯ ಕಾರ್ಯದಂತೆಯೇ ಇದಕ್ಕೂ ಸಮಯ ಹೊಂದಿಸಿಕೊಳ್ಳಲೇ ಬೇಕು. ಮನೆಯನ್ನು ಕಲಿಕೆಯ ಅದಕ್ಕಿಂತಲೂ ಪ್ರೀತಿ, ವಿಶ್ವಾಸ-ಸಲುಗೆಯ ತಾಣವನ್ನಾಗಿ ಮಾಡಬೇಕು. ಶಾಲೆ ಕೊಡಲಾಗದ್ದನ್ನು ಮನೆ, ಮನೆ ಕೊಡಲಾಗದ್ದನ್ನು ಶಾಲೆ ಕೊಡುತ್ತಾ ಒಂದಕ್ಕೊಂದು ಪೂರಕವ್ಯವಸ್ಥೆಯಾಗಿ ಬೆಳೆದಾಗ ಮಾತ್ರವೇ ನಮ್ಮ ಸಮಾಜವೂ ಜೀವಿಸಲರ್ಹವಾಗುವುದು.

ಹೀಗೆ ಪೂರಕವಾಗಿ ಬೆಳೆಯುವತ್ತ ನಮ್ಮ ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಯೋಚಿಸಬೇಕಿವೆ, ಯೋಜಿಸಬೇಕಿವೆ. ಇದರಲ್ಲಿ ಪೋಷಕರ, ಸಮಾಜದ ಪಾಲು ದೊಡ್ಡದೇ!

*


–ಕಲ್ಗುಂಡಿ ನವೀನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT