ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಬ್ರಾ: ವಿಮಾನಗಳ ಹಾರಾಟ 30ಕ್ಕೆ ಏರಿಕೆ

ಜೋಧಪುರಕ್ಕೆ ವಿಮಾನ ಕಾರ್ಯಾಚರಣೆ ಆರಂಭ
Last Updated 16 ಫೆಬ್ರುವರಿ 2021, 14:29 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸಾಂಬ್ರಾದಿಂದ ಸ್ಟಾರ್‌ ಏರ್ ವಿಮಾನಯಾನ ಕಂಪನಿಯು ಜೋಧಪುರಕ್ಕೆ ಆರಂಭಿಸಿರುವ ವಿಮಾನ ಕಾರ್ಯಾಚರಣೆಗೆ ಮಂಗಳವಾರ ಚಾಲನೆ ನೀಡಲಾಯಿತು. ಇದರೊಂದಿಗೆ ಮತ್ತೊಂದು ಪ್ರಮುಖ ನಗರಕ್ಕೆ ಸಂಪರ್ಕ ದೊರೆತಂತಾಗಿದೆ.

ಸರಳ ಕಾರ್ಯಕ್ರಮದಲ್ಲಿ ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್‌ ಮೌರ್ಯ ರಿಬ್ಬನ್ ಹಾಗೂ ಕೇಕ್ ಕತ್ತರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ‘ಕಂಪನಿಯು ಅಹಮದಾಬಾದ್, ಮುಂಬೈ, ಇಂದೋರ್, ಸೂರತ್, ನಾಸಿಕ್‌ ನಗರಗಳ ನಂತರ ಜೋಧಪುರಕ್ಕೆ ಇಲ್ಲಿಂದ ವಿಮಾನ ಕಾರ್ಯಾಚರಣೆ ಆರಂಭಿಸಿದೆ. ಉಡಾನ್‌–3 ಯೋಜನೆಯಲ್ಲಿ ಪಟ್ಟಿ ಮಾಡಲಾಗಿರುವ ದೆಹಲಿ, ಮಂಗಳೂರು ಮೊದಲಾದ ನಗರಗಳಿಗೂ ಆದಷ್ಟು ಬೇಗ ವಿಮಾನ ಕಲ್ಪಿಸಬೇಕು’ ಎಂದು ಕೋರಿದರು.

‘ಇಲ್ಲಿಂದ ನಿತ್ಯ ಸರಾಸರಿ 30 ವಿಮಾನಗಳ ಕಾರ್ಯಾಚರಣೆ (ಆಗಮನ/ನಿರ್ಗಮನ) ನಡೆಯುತ್ತಿದೆ. ಬೆಂಗಳೂರು, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ತಿರುಪತಿ, ಮೈಸೂರು, ಕಡಪ, ಇಂದೋರ್, ಚೆನ್ನೈ, ಸೂರತ್, ನಾಸಿಕ್ ಮತ್ತು ಜೋಧಪುರಕ್ಕೆ (ಒಟ್ಟು 13 ನಗರ) ಸಂಪರ್ಕ ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಜೋಧಪುರ ವಿಮಾನವು ಮಂಗಳವಾರ, ಗುರುವಾರ ಹಾಗೂ ಶನಿವಾರ ಹಾರಾಡಲಿದೆ. 50 ಸೀಟುಗಳ ವಿಮಾನ ಇದಾಗಿದೆ. ಮೊದಲ ದಿನವಾದ ಮಂಗಳವಾರ ಎರಡೂ ಕಡೆಗಳಿಂದಲೂ ತಲಾ 50 ಮಂದಿ ಪ್ರಯಾಣಿಸಿದರು’ ಎಂದು ತಿಳಿಸಿದರು.

ಸ್ಟಾರ್‌ ಏರ್ ಕಂಪನಿಯ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ–ದಕ್ಷಿಣ ಶಶಿಕಾಂತ್, ಕೆಎಸ್‌ಐಎಸ್‌ಎಫ್‌ ಭದ್ರತಾ ವಿಭಾಗದ ಮುಖ್ಯಸ್ಥ ಈರಪ್ಪ ವಾಲಿ, ಎಜಿಎಂ ಪಿ.ಎಸ್. ದೇಸಾಯಿ, ಎಟಿಎಂ ಮುಖ್ಯಸ್ಥ ರಾಜೇಶ್‌ ವಿಜಯಕುಮಾರ್‌, ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್. ಭಾಂಡಗೆ, ಕಂಪನಿಯ ಸ್ಟೇಷನ್ ಮ್ಯಾನೇಜರ್ ಕೋಮಲ್ ಜೈನ್, ರಾಜಸ್ತಾನಿ ಸಮಾಜದ ವಿಕ್ರಂ ರಾಜಪುರೋಹಿತ್, ರಾಮೇಶ್ವರ ಭಾಟಿ, ದೇವರಾಜ ರಾಜಪುರೋಹಿತ್, ಚಂದನ್ ಪುರೋಹಿತ್ ಪಾಲ್ಗೊಂಡಿದ್ದರು.

ಸಂಸ್ಕಾರ ಭಾರತಿ ತಂಡದವರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಇದಕ್ಕೂ ಮುನ್ನ ಜೋಧಪುರದಿಂದ ಬಂದ ವಿಮಾನಕ್ಕೆಅಗ್ನಿಶಾಮಕ ದಳದಿಂದ ‘ವಾಟರ್‌ ಸಲ್ಯೂಟ್’ (ಜಲ ಫಿರಂಗಿ) ಸ್ವಾಗತ ನೀಡಲಾಯಿತು. ಪ್ರಯಾಣಿಕರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT