ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡ್ಸ್‌ ವಾಹನದಲ್ಲಿ ಜನರ ಸಾಗಣೆ ಅಪರಾಧ: ಡಿ.ಜಿ. ನಾಗೇಶ

Last Updated 14 ಮೇ 2019, 14:12 IST
ಅಕ್ಷರ ಗಾತ್ರ

ಬೆಳಗಾವಿ: ‘ಸರಕು, ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವುದು ಅಪರಾಧ. ಅದೊಂದು ಅಮಾನವೀಯ ಕೃತ್ಯ’ ಎಂದುಕಾರ್ಮಿಕ ಇಲಾಖೆ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ, ಸಾರಿಗೆ, ಪೊಲೀಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಕರೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಅಂತಹ ವಾಹನಗಳು ಅಪಘಾತಕ್ಕೀಡಾದಾಗ ಅಶಕ್ತರಾದವರಿಗೆ ಅಥವಾ ಮೃತಪಟ್ಟವರ ಅವಲಂಬಿತರಿಗೆ ಯಾವುದೇ ವಿಮೆಗಳು ದೊರೆಯುವುದಿಲ್ಲ. ಇದರಿಂದ ಆ ಕುಟುಂಬಗಳು ತೊಂದರೆಗೊಳಗಾಗುತ್ತವೆ. ಹೀಗಾಗಿ, ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಬಸ್‌ಗಳಿಲ್ಲದ ಕಡೆಗೆ ಬಸ್‌ ಸೇವೆ ಒದಗಿಸುವಂತೆಸಾರಿಗೆ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗುವುದು. ಶಿಕ್ಷಣ ಸಂಸ್ಥೆಯವರು, ಎಲ್ಲ ಬಗೆಯ ಉದ್ಯೋಗದಾತರಿಂದ ಅವಶ್ಯ ಮಾರ್ಗಗಳು ಹಾಗೂ ವೇಳೆ ಬಗ್ಗೆ ಮಾಹಿತಿ ಪಡೆದು ಬಸ್ ಓಡಿಸುವಂತೆ ಕೋರಲಾಗುವುದು’ ಎಂದು ತಿಳಿಸಿದರು.

‘ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿ. ಕಟ್ಟಿಮನಿ ಮಾತನಾಡಿ, ‘ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂದರ್ಭದಲ್ಲಿ ಆಟೊರಿಕ್ಷಾಗಳಲ್ಲಿ ಹೆಚ್ಚಿನ ಮಕ್ಕಳಿರುವುದು ಕಂಡುಬಂದಲ್ಲಿ ಪೊಲೀಸರು ಅಥವಾ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಚಾಲಕರನ್ನು ಕೇಳಬೇಕು’ ಎಂದರು.

ಉಪನ್ಯಾಸ ನೀಡಿದ ಆರ್.ಬಿ. ನದಾಫ, ‘ಸಾಮಾನ್ಯವಾಗಿ ಪ್ರತಿ ವ್ಯಕ್ತಿ ದುಡಿಯುವುದು ಹೊಟ್ಟೆಗಾಗಿ ಹಾಗೂ ಬಟ್ಟೆಗಾಗಿ. ಕುಟುಂಬದ ನಿರ್ವಹಣೆಗಾಗಿ ದುಡಿಯುಲು ಹೊರಗೆ ಹೋಗುವಾಗ ಸಾರಿಗೆ ಬಸ್‌ಗಳಿಗೆ ಆದ್ಯತೆ ನೀಡಬೇಕು. ಗೂಡ್ಸ್‌ ವಾಹನಗಳಲ್ಲಿ ಹೋದಾಗ, ಜೀವ ಹಾನಿಯಾದರೆ ಕುಟುಂಬದವರ ಗತಿ ಏನು ಎನ್ನುವುದನ್ನು ಯೋಚಿಸಬೇಕು’ ಎಂದರು.

ಹಿರಿಯ ಕಾರ್ಮಿಕ ನಿರೀಕ್ಷಕರಾದ ವಿನುತಾ, ಸುಧಾ, ಅನಿಲ ಬಗಟಿ ಇದ್ದರು.

ಪ್ರಗತಿ ಎಂಜಿನಿಯರಿಂಗ್‌ ವ್ಯವಸ್ಥಾಪಕ ಶಿವರಾಜ ಪಾಟೀಲ ಸ್ವಾಗತಿಸಿದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕಿ ಎಂ.ಕೆ. ಜ್ಯೋತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT